Advertisement

ಬಿಪಿಎಲ್‌ ಕಾರ್ಡ್‌ ಇದ್ದರೆಎಲ್ಲೆಡೆ ಪಡಿತರ ವಿತರಣೆ

09:43 AM Nov 10, 2017 | |

ಬೆಂಗಳೂರು: ಬಿಪಿಎಲ್‌ ಕಾರ್ಡ್‌ದಾರರು ರಾಜ್ಯದ ಯಾವುದೇ ಭಾಗದಲ್ಲೂ ಪಡಿತರ ಪಡೆಯುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ ತಿಳಿಸಿದ್ದಾರೆ.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಉತ್ತರ ಕರ್ನಾಟಕ ಭಾಗದ ಕುಟುಂಬಗಳು ಉದ್ಯೋಗಕ್ಕಾಗಿ ಬೆಂಗಳೂರು, ಮಂಗಳೂರು ಸೇರಿ ರಾಜ್ಯದ ವಿವಿಧೆಡೆ ವಲಸೆ ಬಂದಿರುತ್ತವೆ. ಆ ರೀತಿಯ ಕುಟುಂಬಗಳು ಯಾವುದೇ ಭಾಗದಲ್ಲಿ ಪಡಿತರ ಪಡೆಯಲು ಅನುಕೂಲ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಬಿಪಿಎಲ್‌ ಕಾರ್ಡ್‌ಗಳಿಗೆ ಆಧಾರ್‌ಲಿಂಕ್‌ ಆಗಿರುವ ಹಿನ್ನೆಲೆಯಲ್ಲಿ ಎಲ್ಲಿ ಬೇಕಾದರೂ ಹೋಗಿ ಬೆರಳಚ್ಚು ನೀಡಿ ಪಡಿತರ ಪಡೆಯ ಬಹುದಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್‌ ಕಾರ್ಡ್‌ಗಳಿಗೆ 16 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು ಆ ಪೈಕಿ 10 ಲಕ್ಷ ಕಾರ್ಡ್‌ಗಳನ್ನು ಈಗಾಗಲೇ ವಿತರಿಸಲಾಗಿದೆ. ಉಳಿದ 6 ಲಕ್ಷ ಕಾರ್ಡ್‌ಗಳನ್ನು ಡಿಸೆಂಬರ್‌ 15ರೊಳಗೆ ವಿತರಿಸಲಾಗುವುದು ಎಂದು ಹೇಳಿದರು. ಹದಿನಾರು ಲಕ್ಷ ಕಾರ್ಡ್‌ಗಳ ವಿತರಣೆ ನಂತರ ಬಹುತೇಕ ಎಲ್ಲ ಬಿಪಿಎಲ್‌ ಕುಟುಂಬಗಳಿಗೂ ಕಾರ್ಡ್‌ ತಲುಪಿರುತ್ತದೆ. ಇನ್ನೂ ಯಾರಾದರೂ ಇದ್ದರೆ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ , ಫ‌ುಡ್‌ ಇನ್ಸ್‌ಪೆಕ್ಟರ್‌ಗಳ ಬಳಿ ಹೋಗಿ ಅರ್ಜಿ ಸಲ್ಲಿಸಿ ಶೀಘ್ರ ಪಡೆಯಬಹುದು ಎಂದು ತಿಳಿಸಿದರು. 

ಪಾಯಿಂಟ್‌ ಆಫ್ ಸೇಲ್‌ ಕಡ್ಡಾಯ: ವೈದ್ಯ ಕೀಯ ಸೇವೆ ಸೇರಿ ತುರ್ತು ಸಂದರ್ಭಗಳಿಗೆ ಬಿಪಿಎಲ್‌ ಕಾರ್ಡ್‌ ಬೇಕಾದಲ್ಲಿ ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣಪತ್ರ ನೀಡಿ ತತ್‌ಕ್ಷಣ ಪಡೆಯುವ ವ್ಯವಸ್ಥೆ ಸಹ ಕಲ್ಪಿಸಲಾಗಿದೆ ಎಂದು ಹೇಳಿದರು. ಪಡಿತರ ಮಳಿಗೆಗಳಲ್ಲಿ ಪಾಯಿಂಟ್‌ ಆಫ್ ಸೇಲ್‌ ಯಂತ್ರ ಅಳವಡಿಕೆ ಸಂಬಂಧ ಈಗಾಗಲೇ ಸೂಚನೆ ನೀಡಲಾಗಿದೆ. ಇಂಟರ್‌ನೆಟ್‌ ಸಂಪರ್ಕ ಇಲ್ಲದ ಕಡೆ ಕಡ್ಡಾಯ ಮಾಡಿಲ್ಲ. ಆದರೆ, ಇಂಟರ್‌ನೆಟ್‌ ಸಂಪರ್ಕ ಇದ್ದ ಕಡೆ ಅಳವಡಿಕೆ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

 “ಅನಿಲ ಭಾಗ್ಯ’ ಯೋಜನೆ ಜಾರಿಗೆ ಸಿದ್ಧತೆ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಅನಿಲಭಾಗ್ಯ’ ಯೋಜನೆ ಡಿಸೆಂಬರ್‌ ಮೊದಲ ವಾರದಲ್ಲಿ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದು, ಫ‌ಲಾನುಭವಿಗಳ ಆಯ್ಕೆಗಾಗಿ ಜಿಲ್ಲಾ ಉಸ್ತು ವಾರಿ ಸಚಿವರ ಅಧ್ಯಕ್ಷತೆಯಲ್ಲಿ ಶಾಸಕರನ್ನೊಳಗೊಂಡ ಸಮಿತಿ ರಚಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಆರು ತಿಂಗಳಲ್ಲಿ 10 ಲಕ್ಷ ಫ‌ಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಮೂರು ಹಂತಗಳಲ್ಲಿ ರಾಜ್ಯದಲ್ಲಿರುವ ಎಲ್ಲ ಅನಿಲ ಸಂಪರ್ಕ ರಹಿತ ಕುಟುಂಬಗಳಿಗೆ ಯೋಜನೆ ತಲುಪಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಮಿತಿಗೆ ಹದಿನೈದು ದಿನಗಳಲ್ಲಿ ಫ‌ಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿ ಸಲ್ಲಿಸಲು ಸೂಚಿಸಲಾಗಿದೆ. ಶಾಸಕರ ಶಿಫಾರಸುಮಾನದಂಡ ದಡಿ ಫ‌ಲಾನುಭವಿಗಳ ಪಟ್ಟಿ ಸಿದ್ಧವಾಗಲಿದೆ. ಒಂದೊಮ್ಮೆ ಪಟ್ಟಿಕೊಡದಿದ್ದರೆ ಅರ್ಜಿ ಸಲ್ಲಿಕೆ ಮಾಹಿತಿ ಪಡೆದು ಇಲಾಖೆಯಿಂದಲೇ
ಫ‌ಲಾನುಭವಿಗಳ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಒಟ್ಟು 25 ಲಕ್ಷ ಕುಟುಂಬಗಳು ಅನಿಲ ಸಂಪರ್ಕದಿಂದ ವಂಚಿತವಾಗಿವೆ. ಕೇಂದ್ರ ಸರ್ಕಾರ ಉಜ್ವಲಾ ಯೋಜನೆಯಡಿ 6 ಲಕ್ಷ ಕುಟುಂಬಗಳಿಗೆ ಅನಿಲ ಸಂಪರ್ಕ ಕಲ್ಪಿಸಿದೆ. ಉಳಿದ ಎಲ್ಲ ಕುಟುಂಬಗಳಿಗೂ ರಾಜ್ಯ ಸರ್ಕಾರದಿಂದ ಅನಿಲ ಸಂಪರ್ಕ ಕಲ್ಪಿಸಲು ತೀರ್ಮಾನಿಸಲಾಗಿದೆ. ಫ‌ಲಾನುಭವಿಗಳು ಯಾವುದೇ ರೀತಿಯ ಶುಲ್ಕ ಪಾವತಿಸುವಂತಿಲ್ಲ. ಅನಿಲ ಸಂಪರ್ಕದ ಜತೆ 2 ಸಿಲಿಂಡರ್‌, ಸ್ಟೌವ್‌, ಲೈಟರ್‌ ನೀಡಲಾಗುವುದು. ಒಂದು ಕುಟುಂಬಕ್ಕೆ 4,040 ರೂ. ವೆಚ್ಚವಾಗಲಿದೆ ಎಂದು ವಿವರಿಸಿದರು. 

ಜನವರಿ 1ರಿಂದ ರಾಜ್ಯದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಒಂದು ಲಕ್ಷ ಜನಸಂಖ್ಯೆಗೆ ಒಂದರಂತೆ ಕ್ಯಾಂಟೀನ್‌ ತೆರಯಲು ತೀರ್ಮಾನಿಸಲಾಗಿದೆ. ಒಂದೊಮ್ಮೆ ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇದ್ದರೂ ಕ್ಯಾಂಟೀನ್‌ ತೆರೆಯಲಾಗುವುದು.
ಯು.ಟಿ.ಖಾದರ್‌, ಆಹಾರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next