ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಗಜ ಪಡೆಗೆ ಅರಣ್ಯ ಇಲಾಖೆಯಿಂದ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, ನಿತ್ಯವೂ ಬೆಳಗ್ಗೆ ಮತ್ತು ಸಂಜೆ ತಾಲೀಮು ನಡೆಸಲಾಗುತ್ತಿದೆ ಎಂದು ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ ಹೇಳಿದರು.
ಅರಮನೆ ಆವರಣದಲ್ಲಿ ಆನೆಗಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರ ಸಂಬಂಧ ಬುಧವಾರ ಸಂಜೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 09 ಆನೆಗಳನ್ನು ಮೊದಲ ತಂಡ ದಲ್ಲಿ ಮೈಸೂರಿಗೆ ಕರೆತರಲಾಗಿದ್ದು, ಜಂಬೂ ಸವಾರಿಗೆ ಅಣಿಗೊಳಿಸಲಾಗುತ್ತಿದೆ ಎಂದರು.
ದಸರಾ ಗಜಪಡೆಗೆ ಪ್ರತಿನಿತ್ಯ ಎರಡು ಬಾರಿ 6ರಿಂದ 7 ಕೆ.ಜಿ.ಯಷ್ಟು ಪ್ರೋಟಿನ್ ಯುಕ್ತ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಇದರಲ್ಲಿ ಹೆಸರು ಕಾಳು, ಉದ್ದಿನ ಕಾಳು, ಗೋದಿ, ಕುಸುಬಲ ಅಕ್ಕಿ, ಈರುಳ್ಳಿ ಹಾಗೂ ರುಚಿಗೆ ತಕ್ಕುಷ್ಟು ಉಪ್ಪು ಸೇರಿಸಿ ಬೇಯಿಸಿದ ವಿಶೇಷ ಖಾದ್ಯವನ್ನು ನೀಡಲಾಗುತ್ತಿದೆ. ಜತೆಗೆ ಗೆಡ್ಡೆಕೋಸು, ಬೀಟ್ರೋಟ್, ಕ್ಯಾರೆಟ್, ಮೂಲಂಗಿ ಹಾಗೂ ಸೌತೆಯನ್ನು ಸಹ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪೌಷ್ಟಿಕ ಆಹಾರದ ಜತೆಗೆ ಹಸಿ ಹುಲ್ಲು, ಆಲ ಮತ್ತು ಗೋಣಿ ಸೊಪ್ಪನ್ನು ನೀಡಲಾಗು ತ್ತಿದೆ. ಮಧ್ಯ ಮಧ್ಯ ಭತ್ತದ ಹುಲ್ಲಿನಲ್ಲಿ ಭತ್ತ, ಬೆಲ್ಲ, ಹಿಂಡಿ, ಉಪ್ಪು ಮತ್ತು ತೆಂಗಿನ ಕಾಯಿ ಸೇರಿಸಿದ ಕುಸುರೆಯನ್ನು ನೀಡಲಾಗುತ್ತಿದೆ. ಒಟ್ಟಾರೆ ಪ್ರತಿ ನಿತ್ಯ ಒಂದು ಗಂಡು ಆನೆಗೆ 650 ರಿಂದ 750 ಕೆ.ಜಿ.ಯಷ್ಟು ಆಹಾರ, ಹೆಣ್ಣು ಆನೆಗೆ 450 ರಿಂದ 500 ಕೆ.ಜಿ.ಯಷ್ಟು ಆಹಾರ ಕೊಡುತ್ತೇವೆ. ಎಲ್ಲಾ ಆನೆಗಳು ಇಲ್ಲಿನ ವಾತಾವರಣ ಮತ್ತು ಆಹಾರಕ್ಕೆ ಒಗ್ಗಿಕೊಂಡಿವೆ. ಜತೆಗೆ ಆನೆಗಳ ಆರೋಗ್ಯ ಚೆನ್ನಾಗಿದೆ ಎಂದು ತಿಳಿಸಿದರು.
ಏಕಲವ್ಯನ ವರ್ತನೆ ಭರವಸೆ ಮೂಡಿಸಿದೆ: ಮತ್ತಿಗೋಡು ಆನೆ ಶಿಬಿರದಿಂದ ಇದೇ ಮೊದಲ ಬಾರಿಗೆ ದಸರೆಯಲ್ಲಿ ಪಾಲ್ಗೊಳ್ಳಲು ಬಂದಿರುವ ಏಕಲವ್ಯ ಆನೆ ನಗರ ಪ್ರದೇಶದ ವಾತಾವರಣಕ್ಕೆ ಒಗ್ಗಿಕೊಂಡಿದ್ದಾನೆ. ಅರಮ ನೆಯಿಂದ ಬನ್ನಿಮಂಟಪದವರೆಗಿನ ತಾಲೀಮಿನಲ್ಲಿ, ಗಜಪಯಣ, ಅರಮನೆ ಸ್ವಾಗತ ಕಾರ್ಯಕ್ರಮ ಸೇರಿದಂತೆ ಜನ ಸೇರಿದ್ದಂತಹ ಸಂದರ್ಭಗಳಲ್ಲಿ ಒಂದಿಷ್ಟೂ ವಿಚಲಿತನಾಗದೇ ಶಾಂತ ರೀತಿಯಲ್ಲಿ ವರ್ತಿಸುವ ಜತೆಗೆ ಮಾವುತ ಮತ್ತು ಕಾವಾಡಿಗಳ ಆಜ್ಞೆಯನ್ನು ಚಾಚೂತಪ್ಪದೆ ಪಾಲಿಸುತ್ತಿದ್ದಾನೆ. ಏಕಲವ್ಯನ ಈ ಎಲ್ಲಾ ವರ್ತನೆ ನಮಗೆ ಭರವಸೆ ಮೂಡಿಸಿದ್ದು, ಭವಿಷ್ಯದಲ್ಲಿ ಅಂಬಾರಿ ಆನೆಯಾಗುವ ವಿಶ್ವಾಸವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಂಜನ್ ಆರೋಗ್ಯ ಸುಧಾರಿಸಿದೆ: ಅರಮನೆ ಪ್ರವೇಶ ಬಳಿಕ ಕಂಜನ್ ಆರೋಗ್ಯ ದಲ್ಲಿ ಏರುಪೇರಾಗಿದ್ದ ಕಾರಣ ಕುಂಟುತ್ತಿದ್ದ. ಈ ಹಿನ್ನೆಲೆ ತಾಲೀಮಿನಿಂದ ಆತನನ್ನು ದೂರ ಇರಿಸಿ, ವಿಶ್ರಾಂತಿಗೆ ಬಿಟ್ಟು, ಚಿಕಿತ್ಸೆ ನೀಡಲಾಗಿತ್ತು. ಸದ್ಯಕ್ಕೆ ಈಗ ಕಂಜನ್ ಆರೋಗ್ಯ ಸುಧಾರಿಸಿದ್ದು, ಬುಧವಾರ ಸಂಜೆಯ ತಾಲೀಮಿ ನಲ್ಲಿ ಆತನನ್ನು ಕರೆದೊಯ್ಯಲಾಗುತ್ತಿದೆ ಎಂದರು. ಈ ಸಂದರ್ಭ ಆನೆ ವೈದ್ಯ ಡಾ. ಮುಜೀಬ್ ಇದ್ದರು.