ಬದಿಯಡ್ಕ: ಎಲ್ಲಾ ಮಕ್ಕಳಿಗೂ ವಿದ್ಯಾಭ್ಯಾಸದ ಹಕ್ಕಿದೆ. ಆದುದರಿಂದ ಸೂಕ್ತ ವಿದ್ಯಾಭ್ಯಾಸ ನೀಡುವಲ್ಲಿ ಹೆತ್ತವರು ಆಸಕ್ತಿ ತೋರಬೇಕು. ಸರಕಾರಿ ಶಾಲೆ ಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಉಚಿತವಾಗಿ ನೀಡಲಾಗುತ್ತಿದೆ. ಎಲ್ಲರೂ ತಮ್ಮ ಮ್ಕಕಳನ್ನು ಶಾಲೆಗೆ ಕಳುಹಿಸಲೇಬೇಕು. ಮಾತ್ರವಲ್ಲದೆ ಈ ಶಾಲೆಯ ಕಟ್ಟಡಕ್ಕೆ 2 ಲಕ್ಷ ರೂ. ಮೀಸಲಿಟ್ಟಿದ್ದೇವೆ. ಇನ್ನು 2 ತಿಂಗಳಲ್ಲಾಗಿ ಕೆಲಸ ಪ್ರಾರಂಭಿಸಲಿದ್ದೇವೆ. ಇಲ್ಲಿನ ವಿದ್ಯುತ್ತಿನ ಕೊರತೆಯನ್ನು ಪಂಚಾಯತು ಈಗಾಗಲೇ ನೀಗಿಸಿದೆ. ಇಲ್ಲಿಯ ಮಕ್ಕಳಿಗೆ ಕಲಿಯುವಿಕೆಗೆ ಬೇಕಾದ ಹಣದ ಕೊರತೆಯಿರಬಾರದು ಎಂಬ ದೃಷ್ಟಿಯಿಂದ 14 ವರ್ಷಗಳಿಂದ ಪುಸ್ತಕ ಉಚಿತವಾಗಿ ತನ್ನ ಸ್ವಂತ ಕೈಯಿಂದ ನೀಡುತ್ತಿದ್ದೇನೆ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಅವರು ಪೆರಡಾಲ ಕೊರಗ ಕಾಲನಿಯ ಎಂ.ಜಿ.ಎಲ್.ಸಿ. ಏಕಧ್ಯಾಪಕ ಶಾಲೆಯ ಕೊರಗ ಮಕ್ಕಳಿಗೆ ತನ್ನ ಸ್ವಂತ ಖರ್ಚಿನಿಂದ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಬಡವರ ಪಾಲಿಗೆ ವಿದ್ಯೆ ಕೇವಲ ಒಂದು ಕನಸಾಗದೆ ನಾಳೆಯ ಬೆಳಕಾಗಬೇಕು ಎಂಬ ಉದ್ಧೇಶದಿಂದ ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಪೆರಡಾಲ ಕೊರಗ ಕಾಲನಿಯ ಎಂ.ಜಿ.ಎಲ್.ಸಿ. ಮಕ್ಕಳಿಗೆ ಸುಮಾರು 10 ವರ್ಷದಿಂದ ಬರವಣಿಗೆ ಸಾಮಾಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ . ಇವರು ಕೇವಲ ರಾಜಕೀಯ ರಂಗದಲ್ಲಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲಿಯೂ ಗುರುತಿಸಿಕೊಂಡ ವ್ಯಕ್ತಿ. ಕಿಳಿಂಗಾರಿನ ಸಾಯಿರಾಮ್ ಮನೆಯವರು ಬಡವರಿಗೆ ಮನೆಗಳನ್ನು, ರಿಕ್ಷಾ, ಹೊಲಿಗೆ ಯಂತ್ರ ಮುಂತಾದವುಗಳನ್ನು ಉಚಿತವಾಗಿ ನೀಡಿ ಆಸರೆಯಾಗುವ ಕೊಡುಗೆ„ದಾನಿಗಳು. ಇವರ ಸೇವೆ ಮನೆಮಾತಾಗಿದೆ ಎಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಉಪಾಧ್ಯಕ್ಷರಾದ ಪ್ರೊ.ಶ್ರೀನಾಥ್ ಅಭಿಪ್ರಾಯಪಟ್ಟರು. ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬದಿಯಡ್ಕ ಗ್ರಾಮ ಪಂಚಾಯತಿನ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ಯಾಮ ಪ್ರಸಾದ ಮಾನ್ಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಎಂ.ಜಿ.ಎಲ್.ಸಿ.ಯ ಎಲ್ಲಾ ಮಕ್ಕಳಿಗೂ ಪುಸ್ತಕ ವಿತರಿಸಲಾಯಿತು. ಪಂಚಾಯತು ಅಧ್ಯಕ್ಷರು ತುಳುವಿನಲ್ಲಿ ಮಾತನಾಡಿ ಎಲ್ಲರ ಗಮನ ಸೆಳೆದರು. ಎಂ.ಜಿ.ಎಲ್.ಸಿ.ಯ ಅಧ್ಯಾಪಕರಾದ ಬಾಲಕೃಷ್ಣ ಸ್ವಾಗತಿಸಿ, ಪುಷ್ಪಾ ವಂದಿಸಿದರು.
ಕೊಲನಿಯಲ್ಲಿ ಯಾವುದೇ ತೊಂದರೆಗಳಿದ್ದಲ್ಲಿ ಪರಿಹರಿಸುವುದರಲ್ಲಿ ಪಂಚಾಯತು ಕಾರ್ಯಪ್ರವೃತ್ತವಾಗಿದೆ. ಇಲ್ಲಿನ ಎಲ್ಲರೂ ವಿದ್ಯಾಭ್ಯಾಸ ವಂತರಾಗಬೇಕು ಎಂಬುದು ನಮ್ಮ ಆಸೆ. ಆದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರಗಳನ್ನು ನೀಡಲಾಗುವುದು.
ಶ್ಯಾಮ ಪ್ರಸಾದ ಮಾನ್ಯ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರು.