ಬಾಗಲಕೋಟೆ: ಕೋವಿಡ್ 19 ಮಹಾಮಾರಿಯ ಭೀತಿಯಿಂದಾಗಿ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಎ.ಆರ್.ಟಿ ಕೇಂದ್ರದ ತಂಡ ಜಿಲ್ಲೆಯ ಎಚ್.ಐ.ವಿ ಪೀಡಿತರ ಮನೆ ಮನೆಗೆ ತೆರಳಿ ಎಆರ್‌ಟಿ ಮಾತ್ರೆ ವಿತರಿಸಲಾಯಿತು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಚ್‌ಐವಿ ಸೋಂಕಿತರು ಎಆರ್‌ಟಿ ಕೇಂದ್ರಗಳಿಗೆ ಬರಲು ವಾಹನಗಳ ಸೌಲಭ್ಯ ಇಲ್ಲದ ಕಾರಣ ಹಾಗೂ ಮಾತ್ರೆಗಳನ್ನು ದಿನಂಪ್ರತಿ ಸಕಾಲದಲ್ಲಿ ತೆಗೆದುಕೊಳ್ಳದೇ ಹೋದಲ್ಲಿ ಎಚ್‌ಐವಿ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತಾ ಇನ್ನೀತರ ಅವಕಾಶವಾದಿ ಕಾಯಿಲೆಗಳಿಗೆ ಎಡೆಮಾಡಿ ಕೊಟ್ಟಂತಾಗುತ್ತದೆ.
ಈ ಕಾರಣದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆಸ್ಪತ್ರೆ, ಚೈತನ್ಯ ಮಹಿಳಾ ಸಂಘ, ಡ್ಯಾಫೂ ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಜಿಲ್ಲಾ ಆಸ್ಪತ್ರೆಯ ಎಆರ್‌ಟಿ ಪ್ಲಸ್ ಕೇಂದ್ರದ ಸಿಬ್ಬಂದಿಗಳು ಸುಮಾರು 800 ಜನ ಎಚ್‌ಐವಿ ಪೀಡಿತರಿಗೆ ಎಆರ್‌ಟಿ ಮಾತ್ರೆಗಳನ್ನು ಬೈಕ್ ಹಾಗೂ ಇತರೆ ವಾಹನಗಳ ಮೂಲಕ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡಲಾಯಿತು.
ಮಾತ್ರೆಗಳನ್ನು ವಿತರಿಸಲು ಜಿಲ್ಲಾ ಎಆರ್‌ಟಿ ಪ್ಲಸ್ ಕೇಂದ್ರದ ಎಲ್ಲ ಸಿಬ್ಬಂದಿಗಳು ಹಾಗೂ ಸಿಎಸ್‌ಸಿ ಯೋಜನೆಯ ಸಿಬ್ಬಂದಿಗಳು ಬೆಳಗ್ಗೆ 7ರಿಂದ ಸಂಜೆ 5ಗಂಟೆವರೆಗೆ ಹಾಗೂ ಕ್ಷೇತ್ರಗಳಿಗೆ ಭೇಟಿ ನೀಡಿ ತಲುಪಿಸುವ ಕಾರ್ಯ ಮಾಡುತ್ತಿದೆ. ಇನ್ನು ಮಾತ್ರೆ ತಲುಪದಿದ್ದವರು ಎಆರ್‌ಟಿ ಕೇಂದ್ರಗಳಿಗೆ ಬಂದು ತೆಗೆದುಕೊಂಡು ಹೋಗಲು ಆಗದಿದ್ದಲ್ಲಿ ಹಿರಿಯ ಆಪ್ತ ಸಮಾಲೋಚಕ ಎಚ್.ಆರ್.ಮರ್ದಿ (ಮೊ:9448210159) ಇವರ ಮೊಬೈಲ್ ನಂಬರ್‌ಗೆ ಕರೆ ಮಾಡಿದಲ್ಲಿ ತಮ್ಮ ಹತ್ತಿರದ ಕೇಂದ್ರಗಳಲ್ಲಿ ಮತ್ತು ಎಆರ್‌ಟಿ ಪ್ಲಸ್ ಕೇಂದ್ರದ ಸಿಬ್ಬಂದಿಗಳ ಮೂಲಕ ಮಾತ್ರೆ ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎ.ಎನ್.ದೇಸಾಯಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪ್ರಕಾಶ ಬಿರಾದಾರ, ನೋಡಲ್ ಅಧಿಕಾರಿ ಡಾ|ಚಂದ್ರಕಾಂತ ಜವಳಿ, ಡ್ಯಾಪ್ಕೋ ಕಾರ್ಯಕ್ರಮ ಅಧಿಕಾರಿ ಡಾ| ಎ.ಬಿ.ಪಟ್ಟಣಶೆಟ್ಟಿ, ವೈದ್ಯಾಧಿಕಾರಿ ಡಾ| ಅನಿಲ ಮಳಗಿ ನೇತೃತ್ವದಲ್ಲಿ ಮಾತ್ರೆ ತಲುಪಿಸುವ ಕಾರ್ಯ ಮಾಡುತ್ತಿದ್ದು, ಎಚ್‌ಐವಿ ಪೀಡಿತರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಹಿರಿಯ ಆಪ್ತ ಸಮಾಲೋಚಕ ಎಚ್.ಆರ್. ಮರ್ದಿ ಪ್ರಕಟಣೆಯಲ್ಲಿ ಕೋರಿದ್ದಾರೆ.