ಧಾರವಾಡ: ನಗರದ ರಂಗಾಯಣ ಆವರಣದಲ್ಲಿ ಸಮುದಾಯ ತಂಡದಿಂದ ದಿ.ಗಿರೀಶ ಕಾರ್ನಾಡರ ಸ್ಮರಣಾರ್ಥ ಕೋವಿಡ್‌ನಿಂದ ಸಂಕಷ್ಟದಲ್ಲಿರುವ ಕಲಾವಿದರು, ಪೌರ ಕಾರ್ಮಿಕರು, ಶ್ರಮಿಕರಿಗೆ ಆಹಾರ ಧಾನ್ಯದ ದಿನಸಿ ಕಿಟ್ ವಿತರಿಸಲಾಯಿತು.
ಕಿಟ್ ವಿತರಿಸಿ ಮಾತನಾಡಿದ ಕವಿವಿ ಗಾಂಧಿ ಅಧ್ಯಯನ ಪೀಠದ ಮುಖ್ಯಸ್ಥ ಡಾ| ಶಿವಾನಂದ ಶೆಟ್ಟರ್, ಕೋವಿಡ್ 2ನೇ ಅಲೆ ಹೊಡೆತದಿಂದ ಕಾರ್ಯಕ್ರಮಗಳಿಲ್ಲದೆ ಸಾಂಸ್ಕೃತಿಕ ಸಂಘಟನೆಗಳು ಕಂಗೆಟ್ಟು ಹೋಗಿವೆ. ಸಮುದಾಯ ತಂಡವು ಇಂತಹ ಬಡ ಕಲಾವಿದರಿಗೆ, ಶ್ರಮಿಕ ಕಾರ್ಮಿಕರಿಗೆ ಸಹಾಯ ಹಸ್ತ ನೀಡಿರುವುದು ಶ್ಲಾಘನೀಯ ಎಂದರು.
ಪ್ರಸಾದನ ಕಲಾವಿದ ಸಂತೋಷ ಗಜಾನನ ಮಹಾಲೆ ಮಾತನಾಡಿ, ಇಂದು ಕಲಾವಿದರಾಗಲಿ, ಶ್ರಮಿಕರಾಗಲಿ ತಮ್ಮ ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಮುದಾಯ ಕಲಾವಿದರನ್ನು, ಶ್ರಮಿಕ ಕಾರ್ಮಿಕರನ್ನು ಗುರುತಿಸಿ ದಿನಸಿ ಕಿಟ್ ನೀಡುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದರು.
ಹಿರಿಯ ಕಲಾವಿದ ಅನಂತ ದೇಶಪಾಂಡೆ ಮಾತನಾಡಿ, ಇಂದು ನಮ್ಮ ಜೀವನ ಎಲ್ಲಿಯವರೆಗೆ ಮುಟ್ಟುತ್ತದೆ ಎಂದು ಹೇಳಲಾಗದು. ಈ ಕೊರೊನಾ ಮಹಾಮಾರಿಯಿಂದ ದಿನನಿತ್ಯದ ಚಟುವಟಿಕೆಗಳು ನಿಂತು ಬದುಕು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯ ನಮ್ಮಂತಹ ಕಲಾವಿದರನ್ನು ಕರೆದು ಕಿಟ್ ನೀಡಿರುವುದು ಆತ್ಮಸ್ಥೈರ್ಯ ಬಂದಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮುದಾಯ ಅಧ್ಯಕ್ಷ ಬಿ.ಆಯ್. ಈಳಿಗೇರ ಮಾತನಾಡಿ, ಕೊರೊನಾ 2ನೇ ಅಲೆ ತೀವ್ರ ಪರಿಣಾಮ ಬೀರಿದೆ. ಎಲ್ಲಾ ಕ್ಷೇತ್ರಗಳಂತೆ ಸಾಂಸ್ಕೃತಿಕ ಕ್ಷೇತ್ರವೂ ಸ್ಥಗಿತಗೊಂಡಿದೆ. ಈ ನಿಟ್ಟಿನಲ್ಲಿ ಕಲಾವಿದರು ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿಯ ಕಾರ್ಮಿಕರು ದುಡಿಮೆ ಇಲ್ಲದೆ ಪರದಾಡುವಂಥ ಸ್ಥಿತಿ ಬಂದೊದಗಿದೆ. ಈ ವೇಳೆ ಎಲ್ಲರೂ ಸುರಕ್ಷತಾ ಕ್ರಮ ಪಾಲಿಸಿ , ಕೊರೊನಾ ಮಹಾಮಾರಿ ಓಡಿಸೋಣ ಎಂದರು.
ಸಮುದಾಯದ ಕಾರ್ಯಕರ್ತರಾದ ವಿಲಾಸ ಶೇರಖಾನ, ಈರಣ್ಣ ಐನಾಪುರ, ಹಿರಿಯ ರಂಗಭೂಮಿ ಕಲಾವಿದ ಗೋಪಾಲ ಉಣಕಲ್ ಸೇರಿದಂತೆ ಹಲವರು ಇದ್ದರು. ಜೋಸೆಫ್ ಮಲ್ಲಾಡಿ ನಿರೂಪಿಸಿದರು. ಭೀಮಸೇನ ಕಾಗಿ ಪ್ರಾಸ್ತಾವಿಕ ಮಾತನಾಡಿದರು. ಭೀಮು ಕಠಾವಿ ವಂದಿಸಿದರು.