Advertisement

10000 ಯುವಕರಿಗೆ ಉದ್ಯೋಗ ಪತ್ರ ವಿತರಣೆ: ಸಿಎಂ ಬೊಮ್ಮಾಯಿ

09:00 PM Dec 25, 2022 | Team Udayavani |

ಬೆಂಗಳೂರು: “ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಕೌಶಲ್ಯ ತರಬೇತಿ ನೀಡದೆ, ಸಿಕ್ಕವರಿಗೆಲ್ಲ ನಕಲಿ ಉದ್ಯೋಗ ಪತ್ರಗಳನ್ನು ನೀಡಲಾಯಿತು. ನಂತರದಲ್ಲಿ ಯುವಕರಿಗೆ ಕೌಶಲ್ಯವೂ ಇಲ್ಲ; ಉದ್ಯೋಗವೂ ಇಲ್ಲದಂತಾಯಿತು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

Advertisement

ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರ ಗೌರವಾರ್ಥ “ಸುಶಾಸನ ದಿನಾಚರಣೆ’ ಮತ್ತು ಹತ್ತು ಸಾವಿರ ಯುವಕರಿಗೆ ಉದ್ಯೋಗ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

2018-19ರಲ್ಲಿ ಸರ್ಕಾರೇತರ ಸಂಘ-ಸಂಸ್ಥೆಗಳ ಮೂಲಕ ಗ್ಯಾರೇಜ್‌ನಲ್ಲಿ ಕೆಲಸ ಮಾಡುವವರು ಸೇರಿ ಸಿಕ್ಕವರಿಗೆಲ್ಲ ಅಂದಿನ ಸರ್ಕಾರ ಉದ್ಯೋಗ ಪತ್ರಗಳನ್ನು ನೀಡಿತು. ಆ ಮೂಲಕ ಸಾವಿರಾರು ಉದ್ಯೋಗ ನೀಡಿರುವುದಾಗಿ ಘೋಷಿಸಿಕೊಂಡಿತು. ಆದರೆ ನಂತರದಲ್ಲಿ ಕೌಶಲ್ಯವೂ ಇಲ್ಲ, ಉದ್ಯೋಗವೂ ಸಿಗಲಿಲ್ಲ. ಈಗ ಚಿತ್ರಣ ಬದಲಾಗಿದ್ದು, ನಮ್ಮ ಸರ್ಕಾರ ಅತ್ಯಂತ ರಚನಾತ್ಮಕವಾಗಿ ಕೌಶಲ್ಯ ನೀಡಿ ಉದ್ಯೋಗ ಒದಗಿಸುತ್ತಿದೆ ಎಂದು ಹೇಳಿದರು.

ಐಟಿಐ, ಜಿಟಿಟಿಸಿ, ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌ ಕಾಲೇಜುಗಳು ಸೇರಿ ವಿವಿಧ ಶೈಕ್ಷಣಿಕ ಸಂಸ್ಥೆಗಳನ್ನು ಒಗ್ಗೂಡಿಸಿ, ಸಾಂಸ್ಥಿಕ ಮತ್ತು ರಚನಾತ್ಮಕವಾಗಿ ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಇದರ ಫ‌ಲವಾಗಿ ಇಂದು ಹತ್ತು ಸಾವಿರ ಜನರಿಗೆ ಏಕಕಾಲದಲ್ಲಿ ಉದ್ಯೋಗ ಪತ್ರಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ಪ್ರತಿ ತಿಂಗಳು ಹತ್ತು ಸಾವಿರ ಯುವಕರಿಗೆ ಉದ್ಯೋಗ ಪತ್ರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಈ ಮೂಲಕ ಗರಿಷ್ಠ ಸಂಖ್ಯೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಬೇಕು ಎಂದ ಅವರು, ಈ ವರ್ಷದಲ್ಲೇ ಇದಲ್ಲದೆ, “ಸ್ತ್ರೀ ಸಾಮರ್ಥ್ಯ’ ಯೋಜನೆಯಡಿ ಒಂದು ಲಕ್ಷ ರೂ. ಸಬ್ಸಿಡಿ ಸಹಿತ ತಲಾ 5 ಲಕ್ಷ ರೂ.ಗಳ ಸಾಲ ಸೌಲಭ್ಯ ಒದಗಿಸುವ ಮೂಲಕ 5 ಲಕ್ಷ ಹೆಣ್ಣುಮಕ್ಕಳಿಗೆ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡಲಾಗುವುದು. ಹಾಗೆಯೇ, “ಸ್ವಾಮಿ ವಿವೇಕಾನಂದ ಯೋಜನೆ’ ಮುಖಾಂತರ ಗ್ರಾಮೀಣ ಭಾಗಗಳ ಐದು ಲಕ್ಷ ಯುವಜನರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದರು.

Advertisement

ಪಾಶ್ಚಾತ್ಯ ರಾಷ್ಟ್ರಗಳು ಈಗ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿದ್ದು, ಪಕ್ಕದ ಚೀನಾ ಕೋವಿಡ್‌ನಿಂದ ತತ್ತರಿಸುತ್ತಿದೆ. ಆದರೆ, ಶೇ. 46ರಷ್ಟು ಯುವಜನರೊಂದಿಗೆ ಭಾರತವು ದೈತ್ಯ ಆರ್ಥಿಕ ಶಕ್ತಿಯಾಗುವತ್ತ ಮುನ್ನುಗ್ಗುತ್ತಿದೆ. ಯುವಜನರು ಜಾಗತಿಕ ಸ್ಪರ್ಧೆಯನ್ನು ಕಡೆಗಣಿಸದೆ ವೈಯಕ್ತಿಕ ಯಶಸ್ಸನ್ನು ಸಾಧಿಸಿ, ಸಾಮುದಾಯಿಕ ಸಾಧನೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ಹೇಳಿದರು.

ಇದೇ ವರ್ಷ “ಬಿ.ವೋಕ್‌’ ಆರಂಭ
ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಮಾತನಾಡಿ, ಪ್ರಸಕ್ತ ಸಾಲಿನಿಂದ ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ ವೃತ್ತಿ ತರಬೇತಿ ಪದವಿ (ಬಿ.ವೋಕ್‌) ಪ್ರಾರಂಭಿಸಲಾಗುವುದು. ಇದಕ್ಕಾಗಿ ಜಿಟಿಟಿಸಿ ಮತ್ತು ವಿವಿ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇದರ ಮೂಲಕ ‘ಸರ್ವರಿಗೂ ಉದ್ಯೋಗ’ ನೀತಿಯ ಸಾಕಾರ ಮಾಡಲಾಗುವುದು ಎಂದರು.

ಈಗಾಗಲೇ ರಾಜ್ಯದಲ್ಲಿ ಸರಕಾರಿ 150 ಐಟಿಐಗಳನ್ನು ಉನ್ನತೀಕರಿಸಲಾಗಿದೆ. ಈ ವರ್ಷ ಉಳಿದ 30 ಐಟಿಐಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಜಿಟಿಟಿಸಿಗಳಲ್ಲಿ ಈಗಾಗಲೇ ಅಲ್ಪಾವಧಿಯ 10 ಮತ್ತು ದೀರ್ಘಾವಧಿಯ 30 ಹೊಸ ಕೋರ್ಸುಗಳಿಗೆ ಚಾಲನೆ ನೀಡಲಾಗಿದೆ. ರಾಜ್ಯದಲ್ಲಿರುವ ಉದ್ಯೋಗಾವಕಾಶಗಳು ಹೊರರಾಜ್ಯಗಳ ಪಾಲಾಗುವುದಕ್ಕಿಂತ ನಮ್ಮ ಯುವಜನರಿಗೇ ಸಿಗುವಂತೆ ಮಾಡುವುದು ನಮ್ಮ ಮುಂದಿರುವ ಹೆಗ್ಗುರಿಯಾಗಿದೆ ಎಂದು ತಿಳಿಸಿದರು.

ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌ ಸೆಲ್ವಕುಮಾರ್‌, ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿ‌ನ್‌ ಗೌಡ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ, ಜೀವನೋಪಾಯ ಮಿಷನ್‌ ವ್ಯವಸ್ಥಾಪಕ ನಿರ್ದೇಶಕಿ ರಾಗಪ್ರಿಯಾ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆಯುಕ್ತೆ ಜ್ಯೋತಿ, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ, ಜಿಟಿಸಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.

ಪ್ರಶಸ್ತಿ ವಿಜೇತರು
ಸುಶಾಸನ ದಿನದ ಕಾರ್ಯಕ್ರಮದಲ್ಲಿ ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು (ಅತ್ಯುತ್ತಮ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು), ಬೆಂಗಳೂರಿನ ಸರ್ಕಾರಿ ಆರ್‌.ಸಿ. ವಾಣಿಜ್ಯ ಕಾಲೇಜು (ಅತ್ಯುತ್ತಮ ಸರಕಾರಿ ಪ್ರಥಮ ದರ್ಜೆ ಕಾಲೇಜು), ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಅತ್ಯುತ್ತಮ ಫ‌ಲಿತಾಂಶ) ಬೆಳಗಾವಿ ಜಿಟಿಟಿಸಿ (ಅತ್ಯುತ್ತಮ ಜಿಟಿಟಿಸಿ), ಮಂಗಳೂರಿನ ಸರ್ಕಾರಿ ಮಹಿಳಾ ಐಟಿಐಗಳಿಗೆ (ಅತ್ಯುತ್ತಮ ಐಟಿಐ) ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು.

ಜತೆಗೆ ಝಳಕಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ನಿವೇದಿತಾ ಎಸ್‌ ಕಾಟ್ಕರ್‌ (ಪ್ರಬಂಧ), ಪುಂಜಾಲಕಟ್ಟೆ ಕಾಲೇಜಿನ ವಿದ್ಯಾರ್ಥಿನಿ ರಫಿಯಾ (ಭಾಷಣ) ಮತ್ತು ಕಾರವಾರ ಪ್ರಥಮದರ್ಜೆ ಕಾಲೇಜಿನ ಡಿ.ಎಚ್‌. ಭಾವನಾ (ಪೋಸ್ಟರ್‌ ರಚನೆ) ಅವರಿಗೆ ಆಯಾ ವಿಭಾಗಗಳಲ್ಲಿ ಪ್ರಥಮ ಬಹುಮಾನವನ್ನು ವಿತರಿಸಲಾಯಿತು.

10 ಸಾವಿರ ಉದ್ಯೋಗ ಪತ್ರ
ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆಯ ಉಪಕ್ರಮದಡಿ ಉದ್ಯೋಗ ಪಡೆದವರಲ್ಲಿ ಮಾಸಿಕ ಕನಿಷ್ಠ 18 ಸಾವಿರ ರೂ.ಗಳಿಂದ ಗರಿಷ್ಠ 45 ಸಾವಿರ ರೂ. ವೇತನ ಪಡೆಯುವವರೆಗಿನ ಉದ್ಯೋಗಿಗಳು ಇದ್ದಾರೆ. ಫ‌ಲಾನುಭವಿಗಳಲ್ಲಿ ಎಂಜಿನಿಯರಿಂಗ್‌, ಬಿಎಸ್ಸಿ, ಬಿಕಾಂ, ನರ್ಸಿಂಗ್‌, ಡಿಪ್ಲೊಮಾ, ಪಾಲಿಟೆಕ್ನಿಕ್‌ ಪದವೀಧರರಿದ್ದಾ ರೆ.

ಸಚಿವರಿಗೆ “ವೆಲ್‌ ಡನ್‌’ ಎಂದ ಸಿಎಂ
“ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಏಕಕಾಲದಲ್ಲಿ ಹತ್ತು ಸಾವಿರ ಜನರಿಗೆ ಉದ್ಯೋಗಪತ್ರ ವಿತರಿಸುವ ಮೂಲಕ ದೇಶಕ್ಕೇ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ. “ವೆಲ್‌ ಡನ್‌ ಮಿನಿಸ್ಟರ್‌’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅಶ್ವತ್ಥ ನಾರಾಯಣ ಅವರಿಗೆ ಇಷ್ಟೊಂದು ಖಾತೆಗಳನ್ನು ಯಾಕೆ ನೀಡಲಾಗಿದೆ ಎನ್ನುವ ಪ್ರಶ್ನೆಗೆ ಇವತ್ತಿನ ಅವರ ಕೆಲಸವೇ ಉತ್ತರವಾಗಿದೆ. ಅವರ ನೇತೃತ್ವದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಸಿಬ್ಬಂದಿ ಅತ್ಯುತ್ತಮ ಕೆಲಸ ಮಾಡಿದ್ದಾ ರೆ. ಇದು ವಾಜಪೇಯಿಯವರಿಗೆ ನಿಜವಾದ ಗೌರವ ಸಲ್ಲಿಸುವ ಕೆಲಸವಾಗಿದೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next