ರಬಕವಿ-ಬನಹಟ್ಟಿ: ಇಡೀ ರಾಷ್ಟ್ರದಲ್ಲಿ ಪ್ರಥಮವಾಗಿ ರೈತರ ಪರವಾಗಿ ರಾಜ್ಯದ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಈ ಕುರಿತು ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬರ ಪರಿಸ್ಥಿತಿಯ ಕುರಿತು ಎಲ್ಲ ರೀತಿಯ ಸರ್ವೆ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಪರಿಹಾರ ಕೊಡಲಿಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಆದಷ್ಟು ಬೇಗನೆ ಕೇಂದ್ರ ಸರ್ಕಾರದ ಮಂಜೂರಾತಿ ದೊರೆತ ನಂತರ ಪರಿಹಾರವನ್ನು ವಿತರಣೆ ಮಾಡಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಬುಧವಾರ ಜಗದಾಳ ಗ್ರಾಮದ ಸದಾಶಿವ ಬಂಗಿ ಅವರ ತೋಟವನ್ನು ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ನಾನು, ಸಚಿವರಾದ ಕೃಷ್ಣ ಬೈರೇಗೌಡ ಮತ್ತು ಪ್ರಿಯಾಂಕ ಖರ್ಗೆ ಮೂರು ಬಾರಿ ಆರ್ಥಿಕ ಸಚಿವರು ಮತ್ತು ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳನ್ನು ಭೆಟ್ಟಿಯಾಗಿ ಚರ್ಚಿಸಿ, ರಾಜ್ಯದ ಪರಿಸ್ಥಿತಿಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಇದುವರೆಗೆ ಘೋಷಣೆ ಮಾಡದೆ ಇರುವುದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪ್ರಾರಂಭಿಕವಾಗಿ ಎಕರೆಗೆ ರೂ. 2000 ರೂ. ನೀಡಲು ಘೋಷಣೆ ಮಾಡಿದ್ದಾರೆ.
ಕೃಷಿ ಭಾಗ್ಯ ಯೋಜನೆ ಚಾಲನೆ ಮಾಡಿದ್ಧೇವೆ, ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೆ 30 ರಿಂದ 32 ಸಾವಿರ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಕೃಷಿಗೆ ಸಂಬಂಧಪಟ್ಟ ಯೋಜನೆಗಳು ಜಾರಿಯಲ್ಲಿವೆ. ರೂ.5 ಲಕ್ಷದವರೆಗೆ ಬಡ್ಡಿರಹಿತ ಸಾಲವನ್ನು ನೀಡುತ್ತಿದ್ದೇವೆ. ಜಿಲ್ಲೆಗೆ ಒಂದು ಇಲ್ಲವೆ ಎರಡು ಹೈಟೆಕ್ ರಾಶಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಕೃಷಿ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಎ.ಬಿ.ಪಾಟೀಲ, ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಪಿ.ಎಲ್.ಪಾಟೀಲ, ಕುಲಸಚಿವ ಡಾ.ಮಂಜುನಾಥ, ಜಾರಿ ದಳದ ಅಧಿಕಾರಿ ಬಸವರಾಜ ಮಾಳೆದ, ಕೃಷಿ ಇಲಾಖೆ ಅಧಿಕಾರಿ ಸಿದ್ದಪ್ಪ ಬಟ್ಟಿಹಾಳ, ಕೃಷಿ ಅಧಿಕಾರಿಗಳಾದ ಮೈನೋದ್ದಿನ್ ಜಮಖಂಡಿ, ಎಸ್.ಎಂ.ಬಿರಾದಾರ, ಗುರುಲಿಂಗ ಚಿಂಚಲಿ, ರಂಗನಗೌಡ ಪಾಟೀಲ, ಮಲ್ಲಪ್ಪ ಸಿಂಗಾಡಿ, ಮಾರುತಿ ಸೋರಗಾವಿ, ಸುಭಾಸ ಉಳ್ಳಾಗಡ್ಡಿ, ಈಶ್ವರ ಬಂಗಿ ಸೇರಿದಂತೆ ಅನೇಕರು ಇದ್ದರು.ಸಚಿವರು ಹೊಸೂರಿನ ಮಹಾದೇವ ಚೋಳಿಯವರ ತೋಟಕ್ಕೂ ಭೇಟಿ ನೀಡಿದರು.