Advertisement

ಜುಲೈನಿಂದ ಅಕ್ಕಿಯೊಂದಿಗೆ ಜೋಳ,ರಾಗಿ ವಿತರಣೆ: ಆಹಾರ ಸಚಿವ ಗೋಪಾಲಯ್ಯ

09:03 PM Jun 11, 2020 | Sriram |

ಕಲಬುರಗಿ: ಇದೇ ಜುಲೈ ತಿಂಗಳಿಂದ ಜನತೆಯ ಬೇಡಿಕೆಯಂತೆ ಪಡಿತರ ವ್ಯವಸ್ಥೆಯಲ್ಲಿ 3 ಕೆಜಿ ಅಕ್ಕಿಯೊಂದಿಗೆ 2 ಕೆಜಿ ಜೋಳ ಮತ್ತು 2 ಕೆಜಿ ವಿತರಣೆ ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಕಿಯೊಂದಿಗೆ ಜೋಳ ನೀಡಿದರೆ, ಮೈಸೂರು ಭಾಗದಲ್ಲಿ ಅಕ್ಕಿಯೊಂದಿಗೆ ರಾಗಿ ವಿತರಿಸಲಾಗುವುದು. ಇದಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ತೊಗರಿ ವಿತರಣೆಗೆ ಸಹ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿಯೇ ಅದು ಸಹ ಪಡಿತರದಲ್ಲಿ ಸೇರಲಿದೆ ಎಂದರು.

ರಾಜ್ಯದಲ್ಲಿ 1.27 ಕೋಟಿ ಪಡಿತರ ಕಾರ್ಡುಗಳಿದ್ದು, 4.31 ಕೋಟಿ ಜನ ಪಡಿತರ ಫಲಾನುಭವಿಗಳಿದ್ದಾರೆ. ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಆಹಾರ ದೊರಕಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಆದ್ದರಿಂದ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪಡಿತರ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸಿದ 1.18 ಲಕ್ಷ ಪಡಿತರ ಕುಟುಂಬಕ್ಕೂ 10 ಕೆ.ಜಿ.ಅಕ್ಕಿಯನ್ನು ನೀಡಲಾಗಿದೆ. ಅದೇ ರೀತಿ ಬೇರೆ ರಾಜ್ಯದ ನಿವಾಸಿಗಳಿಗೆ ಪಡಿತರ ಚೀಟಿ ಇಲ್ಲದಿದ್ದರೂ ಸಹ ಆಧಾರ್ ಕಾರ್ಡ್ ಮೇಲೆ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಮತ್ತು 2 ಕೆ.ಜಿ. ಕಡಲೆ ಬೇಳೆ ನೀಡಲಾಗಿದೆ ಎಂದರು.

ಬಡವರಿಗೆ ದಕ್ಕಬೇಕಾದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಅಕ್ರಮ ಪಡಿತರ ಸಾಗಾಣಿಕೆ ಮತ್ತು ಸೋರಿಕೆ ತಡೆಯುವ ನಿಟ್ಟಿನಲ್ಲಿ ಪ್ರತಿ ತಿಂಗಳು ಐದು ಜಿಲ್ಲೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲು ನಿರ್ಧರಿಸಿದ್ದೇನೆ. ಯಾವುದೇ ಗೋಡೌನ್‍ನಲ್ಲಿ ಅಕ್ರಮ ಪಡಿತರ ದಾಸ್ತಾನು ಕಂಡುಬಂದು ಪ್ರದೇಶದ ಡಿಪೋ ದಾಸ್ತಾನಿನಲ್ಲಿ ಸಂಗ್ರಹಣೆ ಕಡಿಮೆಯಿದ್ದಲ್ಲಿ ಅಂತಹ ಡಿಪೋ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಕ್ರಮ ಕಂಡುಬಂದಲ್ಲಿ ಕ್ರಿಮಿನಲ್ ಕೇಸ್: ಬಡವರಿಗೆ ದೊರಕಬೇಕಾದ ಆಹಾರಧಾನ್ಯ ಉಳ್ಳವರ ಪಾಲಾಗಿ ಅಕ್ರಮ ದಾಸ್ತಾನು ಮತ್ತು ಸಾಗಾಟ ಕಂಡುಬಂದಲ್ಲಿ ಅಂತಹವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಗೋಪಾಲಯ್ಯ ಸ್ಪಷ್ಟಪಡಿಸಿದರು.

Advertisement

ಬಿಪಿಎಲ್ ಪಡಿತರ ಚೀಟಿ ವಾಪಸ್ ನೀಡಿ: ರಾಜ್ಯದಲ್ಲಿ ಕೊರೊನಾ ಆರಂಭದ ಮುನ್ನ 63 ಸಾವಿರ ಅಕ್ರಮ ಪಡಿತರ ಚೀಟಿ ರದ್ದುಗೊಳಿಸಿದಲ್ಲದೆ 93 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ ಕಳೆದ 3 ತಿಂಗಳನಲ್ಲಿ ಯಾವುದೆ ಕಾರ್ಡ್ ರದ್ದತಿಗೆ ಕ್ರಮ ಕೈಗೊಂಡಿಲ್ಲ. ಉಳ್ಳವರು ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿದಲ್ಲಿ ಸ್ವಯಂಪ್ರೇರಿತರಾಗಿ ಮುಂದೆ ಬಂದು ಕಾರ್ಡ್ ಮರಳಿಸಬೇಕು ಎಂದು ಸಚಿವರು ಸೂಚಿಸಿದರು.

ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಘೋಷಿಸಿದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಪಡಿತರವನ್ನು ಇನ್ನೂ ಪಡೆಯದವರು ಜೂ. 30 ರೊಳಗೆ ಬಂದು ಪಡೆಯಬಹುದಾಗಿದೆ ಎಂದು ತಿಳಿಸಿದರು.

185 ಪಡಿತರ ಅಂಗಡಿ ಅಮಾನತು: ಕಳೆದ ಏಪ್ರಿಲ್ ತಿಂಗಳಿಂದ ಸರಿಯಾಗಿ ಪಡಿತರ ವಿತರಣೆ ಮಾಡದ ಅರೋಪದ ಹಿನ್ನೆಲೆಯಲ್ಲಿ 185 ಪಡಿತರ ಅಂಗಡಿಗಳನ್ನು ಅಮಾನತು ಮಾಡಲಾಗಿದೆ. 50 ಪಡಿತರ ಅಂಗಡಿಗಳ ಮೇಲೆ ಕೇಸ್ ಹಾಕಿದ್ದು, ಸುಮಾರು 500 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ಸೋರಿಕೆ ತಡೆಯಲು ಇಲಾಖೆ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಾಲಾಜಿ, ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮಡು, ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಜಿಲ್ಲಾಧಿಕಾರಿ ಶರತ್ ಬಿ., ಸಿಇಓ ಡಾ.ಪಿ.ರಾಜಾ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಡಿ.ಎಂ.ಪಾಣಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next