ಮಂಡ್ಯ: ಶೌಚಮುಕ್ತ, ಹೊಗೆ ಮುಕ್ತ ಗ್ರಾಮ, ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡುವ ಮೂಲಕ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳೊಂದಿಗೆ ಗ್ರಾಮೀಣರ ಗಮನ ಸೆಳೆದಿರುವ ಮಳವಳ್ಳಿಯ ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಇದೀಗ ಸರ್ಕಾರಿ ಶಾಲಾ ಮಕ್ಕಳಿಗೆ ನೈಲ್ ಕಟರ್ ಸೇರಿದಂತೆ ಚಿತ ಸ್ವಚ್ಛತಾ ಸಾಮಗ್ರಿ ವಿತರಿಸುವ ಮೂಲಕ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದೆ.
ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಡಾ.ಬಿ.ಎಸ್.ಶಿವಣ್ಣ ಮಳವಳ್ಳಿ ತಾಲೂಕು ಬಂಡೂರು ಪಂಚಾಯಿತಿಗೆ ಸೇರಿದ ಬಂಡೂರು, ಕಲ್ಲಾರೆಪುರ, ಗಟ್ಟಿಕೊಪ್ಪಲು, ಸಸಿಲಾರಪುರ, ದಡದಪುರ, ಗಾಣಿಗನಪುರ, ಅಚ್ಚಮ್ಮನ ಕೊಪ್ಪಲು ವಿನಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ನೈಲ್ಕಟರ್, ಟೂತ್‌ಪೇಸ್ಟ್, ಬ್ರಶ್, ಕೊಬ್ಬರಿ ಎಣ್ಣೆ, ಬಡ್ಸ್‌ಗಳನ್ನು ಶಾಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದ್ದಾರೆ.
ಶುಚಿತ್ವ ಮಕ್ಕಳಿಂದಲೇ ಆರಂಭಿಸಿ: ಜೂ.11 ಮತ್ತು 12ರಂದು ಹಲಗೂರು ಹಾಗೂ ಬಿ.ಜಿ.ಪುರ ಹೋಬಳಿಯ 270 ಶಾಲೆಗಳಲ್ಲಿರುವ 11 ಸಾವಿರ ಮಕ್ಕಳಿಗೆ ಈ ಸ್ವಚ್ಛತಾ ಸಾಮಗ್ರಿಗಳನ್ನು ನೀಡಲು ನಿರ್ಧರಿಸಲಾಗಿದೆ. ಶುಚಿತ್ವ ಎನ್ನುವುದು ಮಕ್ಕಳಿಂದಲೇ ಆರಂಭವಾಗಬೇಕು. ಅವರಿಂದಲೇ ಅದು ಬೆಳವಣಿಗೆ ಕಂಡಾಗ ಸ್ವಚ್ಛ ಹಾಗೂ ಆರೋಗ್ಯಕರ ನಿರ್ಮಾಣ ಸಾಧ್ಯ ಎಂಬ ಉದ್ದೇಶದೊಂದಿಗೆ ಶಾಲಾ ಹಂತದಲ್ಲೇ ಮಕ್ಕಳಿಗೆ ಸ್ವಚ್ಛತೆಯ ಅರಿವು ಮೂಡಿಸಲು ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಮಾಡುತ್ತಿ ರುವುದು ಉತ್ತಮವಾದ ಕೆಲಸ ಎಂದು ಪ್ರಶಂಸಿದರು.
ಯಶಸ್ಸಿನತ್ತ ದಾಪುಗಾಲು: ಶಾಲಾ ಮಕ್ಕಳಿಗೆ ಶೈಕ್ಷಣಿಕೆ ಪ್ರವಾಸ, ಶಾಲಾ ಕೊಠಡಿ ನಿರ್ಮಾಣ, ಗೌರವ ಶಿಕ್ಷಕರ ನೇಮಕ ಸೇರಿದಂತೆ ಸಮಾಜಮುಖೀ ಹಾಗೂ ಜನಪರ ಕಾರ್ಯಕ್ರಮಗಳೊಂದಿಗೆ ಲೋಹಿಯಾ ವಿಚಾರ ವೇದಿಕೆ ಯಶಸ್ಸಿನತ್ತ ದಾಪುಗಾಲಿರಿಸಿದೆ. ಗ್ರಾಮೀಣ ಜನರ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ನೆರವಾಗುವ ಗುರಿಯನ್ನಿಟ್ಟುಕೊಂಡು ವಿಭಿನ್ನ ಯೋಜನೆಗಳನ್ನು ರೂಪಿಸುವುದು ವೇದಿಕೆಯ ಮೂಲ ಉದ್ದೇಶವಾಗಿದೆ ಎಂದು ಡಾ.ಬಿ.ಎಸ್.ಶಿವಣ್ಣ ತಿಳಿಸಿದರು.
ಬಯಲು ಶೌಚಮುಕ್ತ: ಬಂಡೂರು ಪಂಚಾಯಿತಿಯ ಹಲವು ಗ್ರಾಮಗಳು ಇದೀಗ ಸಂಪೂರ್ಣ ಬಯಲು ಶೌಚಮುಕ್ತ ಗ್ರಾಮಗಳಾಗಿರುವುದಲ್ಲದೆ, ಹೊಗೆ ಮುಕ್ತ ಗ್ರಾಮಗಳನ್ನಾಗಿಯೂ ಪರಿವರ್ತಿಸಲಾಗಿದೆ. ಈ ಗ್ರಾಮಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಿತರಣೆ ಮಾಡುವ ಮೂಲಕ ಮಹಿಳೆಯರಿಗೆ ಅನುಕೂಲ ಮಾಡಿಕೊಡ ಲಾಗಿದೆ. ಗ್ರಾಮೀಣ ಶಾಲಾ- ಕಾಲೇಜು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಬಸ್‌ಪಾಸ್‌ಗಳನ್ನು ಉಚಿತವಾಗಿ ದೊರಕಿಸಿ ಕೊಡಲಾಗಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿ ದ್ದಾರೆ ಎಂದು ಹೇಳಿದರು.
ಮತ್ತಷ್ಟು ಯೋಜನೆ: ಮಕ್ಕಳ ಜ್ಞಾನ ವಿಕಾಸದ ಉದ್ದೇಶಕ್ಕಾಗಿ ಶಾಲಾ ಶೈಕ್ಷಣಿಕ ಪ್ರವಾಸವನ್ನು ಪ್ರತಿ ವರ್ಷ ಆಯೋಜನೆ ಮಾಡಲಾಗುತ್ತಿದೆ. ಶಿಕ್ಷಕರಿಲ್ಲದ ಕಡೆ ಗೌರವ ಶಿಕ್ಷಕರನ್ನು ನೇಮಕ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.
ವೇದಿಕೆಯ ಹೊಸ ಹೊಸ ಕಾರ್ಯ ಕ್ರಮಗಳಿಗೆ ಗ್ರಾಮೀಣ ಜನರಿಂದ ಉತ್ತಮ ಸಹಕಾರ, ವಿದ್ಯಾರ್ಥಿಗಳಿಂದ ಸ್ಪಂದನೆ ವ್ಯಕ್ತವಾಗುತ್ತಿದೆ. ವೇದಿಕೆ ವತಿಯಿಂದ ಇನ್ನಷ್ಟು ಸಾಮಾಜಿಕ ಯೋಜನೆಗಳನ್ನು ರೂಪಿಸಿ ಜಾರಿಗೊಳಿ ಸಲು ಸಹಕಾರಿಯಾಗಿದೆ ಎಂದರು.