Advertisement

ಪ್ರತಿ ಮನೆಗೆ ಕಸ ಸಂಗ್ರಹಣೆಗೆ ಬಕೆಟ್‌ ವಿತರಣೆ

07:25 AM Jul 08, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಸ್ವತ್ಛತೆ, ನೈರ್ಮಲ್ಯ ಕಾಪಾಡಲು ಹರಸಾಹಸ ಪಡುತ್ತಿರುವ ಚಿಕ್ಕಬಳ್ಳಾಪುರ ನಗರಸಭೆಯು ನಗರದಲ್ಲಿರುವ ಪ್ರತಿ ಮನೆಗೂ ತಲಾ ಎರಡೆರೆಡು ಬಕೆಟ್‌ಗಳನ್ನು ಕಸ ಸಂಗ್ರಹಣೆ ಅನುಕೂಲವಾಗುವಂತೆ ವಿತರಿಸುವ ಮೂಲಕ ಗಮನ ಸೆಳೆಯುತ್ತಿದೆ.

Advertisement

ಬದಲಾವಣೆ ತರಲು ಕ್ರಮ: ಜಿಲ್ಲಾ ಕೇಂದ್ರದಲ್ಲಿ ಬಳಕೆಯಾಗದೇ ಅನುಪಯುಕ್ತವಾಗಿರುವ ಖಾಸಗಿ ಸರ್ಕಾರಿ ಖಾಲಿ ನಿವೇಶನಗಳು, ನಗರಸಭೆಗೆ ಸೇರಿದ ಉದ್ಯಾನವನಗಳು ಸಾರ್ವಜನಿಕರು ಘನ ತ್ಯಾಜ್ಯ ಎಸೆಯುವ ಸ್ಥಳಗಳಾಗಿ ಮಾರ್ಪಟ್ಟಿದೆ.

ನಗರದಲ್ಲಿ ಅನೈರ್ಮಲ್ಯ ವಾತಾವರಣ ಏರ್ಪಟ್ಟಿರುವ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರನ್ನು ಪತ್ತೆ ಮಾಡಲು ಸಿಸಿ ಕ್ಯಾಮೆರಾ ಅಳಡಿಸಿರುವ ನಗರಸಭೆ ಇದೀಗ ಕಸ ಸಂಗ್ರಹವಾಗುವ ಮೂಲದಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಇದಕ್ಕೆ ಉಚಿತವಾಗಿ ಪ್ರತಿ ಮನೆಗೂ ಬಕೆಟ್‌ಗಳನ್ನು ವಿತರಿಸುತ್ತಿದೆ.

ಅಸಮರ್ಪಕ ಕಸ ವಿಲೇವಾರಿ: ಜಿಲ್ಲೆಯ ನಗರಸಭೆಗಳಿಗೆೆ ಹೋಲಿಸಿಕೊಂಡರೆ ಸ್ವತ್ಛತೆ ಹಾಗೂ ನೈರ್ಮಲ್ಯದ ವಿಚಾರದಲ್ಲಿ ತುಸು ಹಿನ್ನಡೆ ಸಾಧಿಸಿರುವ ಚಿಕ್ಕಬಳ್ಳಾಪುರ ನಗರಸಭೆಯು, ನಿತ್ಯ ಎಲ್ಲೆಂದರಲ್ಲಿ ರಾಶಿ ಬೀಳುವ ಕಾಸದ ರಾಶಿಗಳಿಂದ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಜೊತೆಗೆ ಅಸಮರ್ಪಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿದೆ.

ಕಸ ಸಂಗ್ರಹಣೆಯಲ್ಲಿ ನಗರಸಭೆ ಹಿಂದೆ ಬಿದ್ದಿದೆ ಎಂಬ ಆರೋಪದ ಬೆನ್ನಲ್ಲೇ ನಗರಸಭೆ ವೈಜ್ಞಾನಿಕವಾಗಿ ಕಸ ಸಂಗ್ರಹಣೆಗೆ ಪಣತೊಟ್ಟು ನಗರಸಭೆ ವ್ಯಾಪ್ತಿಯಲ್ಲಿರುವ ಪ್ರತಿ ಕುಟುಂಬಕ್ಕೂ ಹಸಿ ಕಸ ಹಾಗೂ ಒಣ ಕಸ ಸಂಗ್ರಹಣೆಗೆ ಪ್ರತಿ ಮನೆಗೆ ಎರಡು ಬಕೆಟ್‌ಗಳನ್ನು ವಿತರಿಸುತ್ತಿದ್ದು, ಅದರ ಸದ್ಬಳಕೆಗೆ ಅರಿವು ಮೂಡಿಸುವ ಕಾರ್ಯದಲ್ಲಿ ಮಗ್ನವಾಗಿದೆ.

Advertisement

ಒಣ, ಹಸಿ ಕಸ ಸಂಗ್ರಹ ಪ್ರತ್ಯೇಕ: ಸ್ಥಳೀಯ ನಗರಸಭೆಗೆ ಕಸ ವಿಲೇವಾರಿ ಸಾಕಷ್ಟು ಸವಾಲಾಗಿ ಪರಿಣಮಿಸಿದೆ. ಹೀಗಾಗಿ ವೈಜ್ಞಾನಿಕವಾಗಿ ಕಸ ಸಂಗ್ರಹಣೆಗೆ ಮುಂದಾಗಿರುವ ನಗರಸಭೆ, ಸಾರ್ವಜನಿಕರು ತಮ್ಮ ಮನೆಗಳಲ್ಲಿ ಹಸಿ ಹಾಗು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಅದನ್ನು ಪ್ರತ್ಯೇಕವಾಗಿ ನಗರಸಭೆಯ ಟ್ರ್ಯಾಕ್ಟರ್‌ ಅಥವಾ ಟಿಪ್ಪರ್‌ಗಳಿಗೆ ನೀಡುವಂತೆ ಸೂಚಿಸಿದ್ದಾರೆ. ಹಾಗಾಗಿಯೇ ನಗರಸಭೆಯಿಂದ ಒಣ ಕಸ ಸಂಗ್ರಹಕ್ಕೆ ನೀಲಿ ಹಾಗೂ ಹಸಿ ಸಂಗ್ರಹಕ್ಕೆ ಹಸಿರು ಬಣ್ಣವುಳ್ಳ ಬಕೆಟ್‌ಗಳನ್ನು ನೀಡುತ್ತಿದ್ದಾರೆ.

ಇನ್ನೂ ಮನೆಗಳಲ್ಲಿ ಇ-ತ್ಯಾಜ್ಯ ಹಾಗೂ ಸ್ಯಾನಿಟರಿ ತ್ಯಾಜ್ಯ ಉಂಟಾದರೆ ಅದನ್ನು ಪ್ರತ್ಯೇಕವಾಗಿ ನೀಡುವಂತೆಯೂ ನಗರಸಭೆ ಕರಪತ್ರ ಮುದ್ರಿಸಿ ಪ್ರತಿ ಮನೆಗೂ ಹಂಚಿಕೆ ಮಾಡುತ್ತಿದೆ. ಜೊತೆಗೆ ಕಸವನ್ನು ಚರಂಡಿಗೆ ಎಸೆಯಬೇಡಿ. ಸುಡಬೇಡಿ, ಸಾರ್ವಜನಿಕ ಸ್ಥಳಗಳಿಗೆ ಎಸೆಯಬೇಡಿ ಎಂಬ ಅರಿವು ಮೂಡಿಸುವ ಸ್ಟಿಕ್ಟರ್‌ಗಳನ್ನು ಬಕೆಟ್‌ಗಳಿಗೆ ಅಂಟಿಸಿರುವುದು ಗಮನ ಸೆಳೆಯುತ್ತಿದೆ.

ಹಸಿ, ಒಣ ಕಸ ಯಾವುದು?: ಸಾರ್ವಜನಿಕರು ಬೇಯಿಸಿದ ಆಹಾರ, ಹಣ್ಣು ತರಕಾರಿ, ಹೂವು ತ್ಯಾಜ್ಯ, ಒಣ ಎಲೆಗಳು ಹಾಗೂ ಇತರೆ ಕೊಳೆಯುವ ಪದಾರ್ಥಗಳಾಗಿದ್ದು, ಪೇಪರ್‌, ಪ್ಲಾಸ್ಟಿಕ್‌, ಕಟ್ಟಿಗೆ, ಲೋಹ, ಬಟ್ಟೆ, ಗಾಜು, ರಬ್ಬರ್‌, ವೈರ್‌ ಹಳೆಯ ಟ್ಯೂಬ್‌ಲೈಟ್‌ ಮತ್ತಿತರ ತ್ಯಾಜ್ಯವನ್ನು ಒಣ ಕಸವೆಂದು ಪರಿಗಣಿಸಲಾಗಿದೆ.

ಒಟ್ಟಿನಲ್ಲಿ ನಗರಸಭೆಯು ಸ್ವತ್ಛ ಚಿಕ್ಕಬಳ್ಳಾಪುರ ಎಂಬ ಘೋಷಣೆಯಡಿ ನಗರಸಭೆ ವ್ಯಾಪ್ತಿಯಲ್ಲಿ ವಾಸ ಮಾಡುವ ಸಾರ್ವಜನಿಕರಿಂದ ಕಸ ಸಂಗ್ರಹಣೆಯನ್ನು ಸುಲಭವಾಗಿ ಹಾಗೂ ವೈಜ್ಞಾನಿಕವಾಗಿ ಸಂಗ್ರಹಿಸಿ ವಿಲೇವಾರಿಗೆ ಮುಂದಾಗಿರುವ ನಗರಸಭೆ ಜಿಲ್ಲಾ ಕೇಂದ್ರದ ಬರೋಬ್ಬರಿ 15 ಸಾವಿರ ಕುಟುಂಬಗಳಿಗೆ ಉಚಿತವಾಗಿ ನೀಲಿ ಹಾಗೂ ಹಸಿರು ಬಣ್ಣದ ಬಕೆಟ್‌ಗಳನ್ನು ವಿತರಿಸುತ್ತಿರುವುದು ಗಮನ ಸೆಳೆಯುತ್ತಿದೆ. ನಗರಸಭೆ ಈ ಕಾರ್ಯಕ್ಕೆ ಸಾರ್ವಜನಿಕರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಆಧಾರ್‌ ಕಾರ್ಡ್‌ ತೋರಿಸಿದರೆ ಸಾಕು: ನಗರಸಭೆ ವತಿಯಿಂದ ವಿತರಿಸುತ್ತಿರುವ ಹಸಿರು ಹಾಗೂ ನೀಲಿ ಬಣ್ಣದ ಬಕೆಟ್‌ಗಳನ್ನು ಪಡೆಯಲು ನಗರ ನಿವಾಸಿಗಳು ತಮ್ಮ ಕುಟುಂಬದ ಹಿರಿಯ ಸದಸ್ಯರೊಬ್ಬರ ಆಧಾರ್‌ ಕಾರ್ಡ್‌ ಅಥವಾ ಮತದಾರರ ಗುರುತಿನ ಚೀಟಿ ಕೊಟ್ಟರೆ ಅವರಿಗೆ ಕಸ ಸಂಗ್ರಹಿಸುವ ಎರಡು ಬಕೆಟ್‌ಗಳನ್ನು ವಿತರಿಸಲಾಗುತ್ತಿದೆ. ಪ್ರತಿ ಕುಟುಂಬಕ್ಕೆ ಬಕೆಟ್‌ ವಿತರಿಸುವ ಚಿತ್ರಗಳನ್ನು ನಗರಸಭೆ ಪರಿಸರ ಶಾಖೆಯ ಸಿಬ್ಬಂದಿ ಸೆರೆ ಹಿಡಿಯುತ್ತಿದ್ದಾರೆ. ಈಗಾಗಲೇ ನಗರದ ಅರ್ಧ ಭಾಗದಷ್ಟು ವಾರ್ಡ್‌ಗಳಲ್ಲಿ ಬಕೆಟ್‌ ವಿತರಿಸಿದೆ.

ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 15 ಸಾವಿರ ಮನೆಗಳಿದ್ದು, ಪ್ರತಿ ಮನೆಗೆ ಹಸಿರು ಹಾಗೂ ನೀಲಿ ಬಣ್ಣದ ಎರಡು ಬಕೆಟ್‌ಗಳನ್ನು ಕಸ ಸಂಗ್ರಹಿಸಿಕೊಳ್ಳಲು ಉಚಿತವಾಗಿ ನೀಡುತ್ತಿದ್ದೇವೆ. ಸಾರ್ವಜನಿಕರು ನೀಲಿ ಬಣ್ಣದ ಬಕೆಟ್‌ನಲ್ಲಿ ಹಸಿ ಕಸ ಹಾಗೂ ಹಸಿರು ಬಣ್ಣದ ಬಕೆಟ್‌ನಲ್ಲಿ ಒಣ ಕಸವನ್ನು ಸಂಗ್ರಹಿಸಿ ನಗರಸಭೆಯ ಟ್ರ್ಯಾಕ್ಟರ್‌ ಅಥವಾ ಟಿಪ್ಪರ್‌ಗಳಿಗೆ ಕಸ ನೀಡಬೇಕು.
-ಉಮಾಕಾಂತ್‌, ನಗರಸಭೆ ಆಯುಕ್ತರು

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next