Advertisement

ವಿಳ್ಯದೆಲೆ ಬೆಳೆಗಾರರಿಗೆ ತಲಾ 5ಗುಂಟೆ ಜಮೀನು ಹಂಚಿಕೆ

02:15 PM Mar 07, 2018 | |

ಮೈಸೂರು: ಮೈಸೂರಿನ ವಿಳ್ಯದೆಲೆ ಬೆಳೆಗಾರರಿಗೆ ತಲಾ 5 ಗುಂಟೆ ಭೂಮಿ ಹಂಚಿಕೆಯ ಹಕ್ಕುಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಾ.10ರಂದು ವಿತರಣೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

Advertisement

ನಗರದ ಅರಣ್ಯಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ದಶಕಗಳಿಂದ 245 ಕುಟುಂಬಗಳು ವಿಳ್ಯದೆಲೆ ಬೆಳೆದು ಜೀವನ ಮಾಡುತ್ತಿದ್ದರು. ಇವರಿಗೆ ದಿ.ಬಸವಲಿಂಗಪ್ಪ ಸಚಿವರಾಗಿದ್ದಾಗ ತಲಾ 5 ಗುಂಟೆ ಜಮೀನು ಮಂಜೂರು ಮಾಡಿದ್ದರು.

ಆದರೆ, ಖಾತೆ ಬದಲಾವಣೆ ಮಾಡಿ, ಹಕ್ಕುಪತ್ರ ನೀಡಿರಲಿಲ್ಲ. ಹೀಗಾಗಿ ಈ ಜಾಗದಲ್ಲಿ ಮೈಸೂರು ಮಹಾ ನಗರಪಾಲಿಕೆಯು 2004-05ನೇ ಸಾಲಿನಿಂದ 98 ಬ್ಲಾಕ್‌ಗಳ ವಿಸ್ತೀರ್ಣದಲ್ಲಿ ಕಸ ವಿಲೇವಾರಿ, ಕಸ ನೆಲಭರ್ತಿ, ಕ್ಯಾಪಿಂಗ್‌ ಕಾಮಗಾರಿ ಮಾಡಿ ವಿಳ್ಯದೆಲೆ ಬೆಳೆಗಾರರಿಗೆ ಹಂಚಿಕೆ ಮಾಡಲಾಗಿದ್ದ ಜಮೀನನ್ನು ಮಹಾ ನಗರಪಾಲಿಕೆ ಬಳಸಿಕೊಂಡಿದ್ದರಿಂದ 245 ಮಂದಿ ವಿಳ್ಯದೆಲೆ ಬೆಳೆಗಾರರ ಪೈಕಿ 98 ಮಂದಿಗೆ ಜಮೀನು ಇಲ್ಲದಂತಾಗಿತ್ತು.

ಈ ಸಂಬಂಧ ವಿಳ್ಯದೆಲೆ ಬೆಳೆಗಾರರು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದರು. ಸಿದ್ದರಾಮಯ್ಯ ಅವರ ಸರ್ಕಾರ ಕಾನೂನು ತೊಡಕುಗಳನ್ನು ನಿವಾರಣೆ ಮಾಡಿ, ಆರ್ಥಿಕ ಮತ್ತು ಕಾನೂನು ಇಲಾಖೆ ಸಲಹೆ ಪಡೆದು, ಸಚಿವ ಸಂಪುಟದಲ್ಲಿ ಚರ್ಚಿಸಿ 98 ಮಂದಿ ವಿಳ್ಯದೆಲೆ ಬೆಳೆಗಾರರಿಗೆ ಈ ಹಿಂದೆ ಮುನಿಸಿಪಲ್‌ ಸುಯೇಜ್‌ಫಾರಂನಲ್ಲಿ

ತಲಾ 5 ಗುಂಟೆಯಂತೆ 147 ಬ್ಲಾಕ್‌ಗಳನ್ನು ಹಂಚಿಕೆ ಮಾಡಿರುವಂತೆ ನಾಚನಹಳ್ಳಿ ಪಾಳ್ಯದ ವಿವಿಧ ಸರ್ವೇನಂಬರ್‌ಗಳಲ್ಲಿ ಸುಮಾರು 30 ಎಕರೆ ಜಮೀನಿನಲ್ಲಿ ವಿಳ್ಯದೆಲೆ ಬೆಳೆಗಾರರಿಗೆ ತಲಾ 5 ಗುಂಟೆ ಜಮೀನು ಹಂಚಿಕೆಗೆ ಸರ್ಕಾರ ಅನುಮೋದನೆ ನೀಡಿದ್ದು,

Advertisement

ಮಾ.10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಳ್ಯದೆಲೆ ಬೆಳೆಗಾರರಿಗೆ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ. ಇದರೊಂದಿಗೆ ಸುಮಾರು ನಾಲ್ಕು ದಶಕಗಳ ಹೋರಾಟ ಅಂತ್ಯವಾದಂತಾಗಿದೆ ಎಂದರು. ಶಾಸಕ ಎಂ.ಕೆ.ಸೋಮಶೇಖರ್‌, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ.ಸಿದ್ದರಾಜು, ಮಾಜಿ ಮೇಯರ್‌ ಪುರುಷೋತ್ತಮ್‌ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

22 ಕೋಟಿ ವೆಚ್ಚದಲ್ಲಿ ಅಶೋಕಪುರಂ ಅಭಿವೃದ್ಧಿ: ಡಾ.ಮಹದೇವಪ್ಪ
ಮೈಸೂರು-ಚಾಮರಾಜ ನಗರ ಭಾಗದ ಸುಮಾರು 25 ಸಾವಿರ ದಲಿತರೇ ವಾಸಿಸುವ ಅಶೋಕಪುರಂನಲ್ಲಿ ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ಅಶೋಕಪುರಂ ಒಳಗಿನ ರಸ್ತೆ, ಚರಂಡಿ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ 10 ಕೋಟಿ ಮಂಜೂರು ಮಾಡಿದೆ. ಈ ಹಣವನ್ನು ಸಿದ್ಧಾರ್ಥ ಕ್ರೀಡಾಂಗಣ ಅಭಿವೃದ್ಧಿಗೆ 5ಕೋಟಿ, ರಸ್ತೆ ಅಭಿವೃದ್ಧಿಗೆ 5ಕೋಟಿ ಬಳಸಲಾಗುವುದು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಶೇ.24.5ರ ಅನುದಾನದಲ್ಲಿ ನೀಡುವ 12 ಕೋಟಿ ರೂ.ಗಳಲ್ಲಿ ಉಳಿದ ರಸ್ತೆ, ಮತ್ತಿತರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು.

ಸುಮಾರು 10ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಿಕೊಡಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲಿಸಲಾಗುವುದು. ಕಳೆದ 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಶೋಕಪುರಂ ಜನರ ಮೊಗದಲ್ಲಿ ಮಂದಹಾಸ ಮೂಡಿಸುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next