ವಾಡಿ: ಖಾಸಗಿ ಆಸ್ಪತ್ರೆಯ ದುಬಾರಿ ಖರ್ಚಿನ ರೋಗಗಳ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೇ ಚಿಂತೆಗೀಡಾದ ಬಡವರಿಗಾಗಿ ಆಯುಷ್ಮಾನ್ ಆರೋಗ್ಯ ಗುರುತಿನ ಚೀಟಿ ಸಂಜೀವಿನಿಯಾಗಿದೆ ಎಂದು ತಾಲೂಕು ಆಸ್ಪತ್ರೆಯ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ ಕಾರ್ಯನಿರ್ವಾಹಕ ಅಧಿಕಾರಿ ಕಿರಣಕುಮಾರ ಬಡಗು ಹೇಳಿದರು.
ಹಳಕರ್ಟಿ ಗ್ರಾಮದಲ್ಲಿ ಗೆಳೆಯರ ಬಳಗದಿಂದ ಏರ್ಪಡಿಸಲಾಗಿದ್ದ ಯುವ ಮುಖಂಡರಾದ ರಾಘವೇಂದ್ರ ಅಲ್ಲಿಪುರ ಮತ್ತು ಸಿದ್ಧಣ್ಣ ಮುಗುಟಿ ಜನ್ಮದಿನ ಪ್ರಯುಕ್ತ ಗ್ರಾಮದ ಒಟ್ಟು 426 ಬಡ ಕುಟುಂಬಗಳ ಹೆಸರಿನಲ್ಲಿ ಆಯುಷ್ಮಾನ್ ಆರೋಗ್ಯ ಗುರುತಿನ ಚೀಟಿ ಸಿದ್ಧಪಡಿಸಿ ಉಚಿತವಾಗಿ ವಿತರಿಸುವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಆರ್ಥಿಕ ದುಸ್ಥಿತಿಯ ಬಡ ಕುಟುಂಬಗಳಿಗಾಗಿ ಆಯುಷ್ಮಾನ್ ಆರೋಗ್ಯ ಚೀಟಿ ವಿತರಿಸಲು ಕೇಂದ್ರ ಸರ್ಕಾರ ಯೋಜನೆ ಜಾರಿಗೆ ತಂದಿದೆ. ಇದರಿಂದ ರೋಗಿಗೆ ಗರಿಷ್ಠ 5ಲಕ್ಷ ರೂ. ವರೆಗೆ ಧನಸಹಾಯ ಒದಗಲಿದೆ. ದೇಶದಲ್ಲಿ ಒಟ್ಟು 10 ಕೋಟಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಬಡ ಕುಟುಂಬಗಳಿಗೆ ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.
ಹಳಕರ್ಟಿ ಕಟ್ಟಿಮನಿ ಹಿರೇಮಠದ ಪೀಠಾಧಿಪತಿ ಶ್ರೀಮುನೀಂದ್ರ ಸ್ವಾಮೀಜಿ, ಸಿದ್ಧೇಶ್ವರ ಧ್ಯಾನಧಾಮದ ಶ್ರೀರಾಜಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಸೋಮು ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡರಾದ ರಾಘವೇಂದ್ರ ಅಲ್ಲಿಪುರ ಹಾಗೂ ಸಿದ್ದಣ್ಣ ಮುಗುಟಿ ಕೇಕ್ ಕತ್ತರಿಸಿ ಸಿಹಿ ಹಂಚಿದರು. ಪಿಡಿಒ ರಾಚಯ್ಯಸ್ವಾಮಿ ಅಲ್ಲೂರ, ಮುಖಂಡರಾದ ಈರಣ್ಣ ರಾವೂರಕರ, ರಾಜಶೇಖರ ಸಂಗಶೆಟ್ಟಿ, ಶರಣಪ್ಪ ಜೀವಣಗಿ, ಅಜೀಜ್ ಪಾಷಾ ಪಟೇಲ, ಚಂದ್ರಕಾಂತ ಮೇಲಿನಮನಿ, ಮಲ್ಲಣ್ಣ ಪೂಜಾರಿ, ಲಾಡ್ಲೆಸಾಬ ಖಾಜಿ, ಶರಣಪ್ಪ ವಗ್ಗರ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮೈರಾಡ್ ಸಂಸ್ಥೆ ವತಿಯಿಂದ ಸಾವಿರ ಸಸಿಗಳನ್ನು ಗ್ರಾಮಸ್ಥರಿಗೆ ಉಚಿತವಾಗಿ ವಿತರಿಸಲಾಯಿತು. ಮಲ್ಲಿಕಾರ್ಜುನ ಹಣಿಕೇರಾ ನಿರೂಪಿಸಿ, ವಂದಿಸಿದರು.