Advertisement

ರಾಜ್ಯದಲ್ಲಿ  11.10 ಲಕ್ಷ  ಬಿಪಿಎಲ್‌ ಪಡಿತರ ಚೀಟಿ ವಿತರಣೆ: ಖಾದರ್‌

08:15 AM Dec 15, 2017 | |

ಮಂಗಳೂರು: ರಾಜ್ಯದಲ್ಲಿ ಬಿಪಿಎಲ್‌ ಪಡಿತರ ಚೀಟಿಗಾಗಿ ಒಟ್ಟು 15.50 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಈವರೆಗೆ 11.10 ಲಕ್ಷ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನು
ದ್ದೇಶಿಸಿ ಮಾತನಾಡಿದ ಅವರು, 1 ಲಕ್ಷ ಅರ್ಜಿಗಳು ಪರಿಶೀಲನೆ ಹಂತದಲ್ಲೇ ತಿರಸ್ಕೃತವಾಗಿದ್ದವು. ಬಾಕಿ ಉಳಿದಿರುವ ಪಡಿತರ ಚೀಟಿಗಳನ್ನು ಸದ್ಯದಲ್ಲೇ ವಿತರಿಸಲಾಗುವುದು. ಪಡಿತರ ಕೇಂದ್ರಗಳಲ್ಲಿ ಪಾಯಿಂಟ್‌ ಆಫ್ ಸೇಲ್‌ (ಪಿಒಎಸ್‌) ವ್ಯವಸ್ಥೆ ಶೇ. 75ರಷ್ಟು ಅನುಷ್ಠಾನವಾಗಿದೆ. ಈಗಾಗಲೇ ಪಿಒಎಸ್‌ ಯಂತ್ರ ಅಳವಡಿಕೆ ಮಾಡಿದವರಿಗೆ ಕ್ವಿಂಟಾಲ್‌ ಒಂದಕ್ಕೆ ಸಿಗುತ್ತಿರುವ 70  ರೂ. ಕಮಿಷನ್‌ ಜತೆಗೆ ಹೆಚ್ಚುವರಿಯಾಗಿ 17 ರೂ.ಗಳನ್ನು ನೀಡಲಾಗುತ್ತಿದೆ. ಪಿಒಎಸ್‌ ಯಂತ್ರ ಅಳವಡಿಸಲು ಇಂಟರ್‌ನೆಟ್‌ ಸಮಸ್ಯೆ ಇರುವ ಕೆಲವು ಕುಗ್ರಾಮಗಳಲ್ಲಿ ಬಿಎಸ್‌ಎನ್‌ಎಲ್‌ ನೆರವಿನಲ್ಲಿ ಬ್ರಾಂಡ್‌ಬ್ಯಾಂಡ್‌
ಅಳವಡಿಕೆ ನಡೆಸಲಾಗುತ್ತಿದೆ. ಪಿಒಎಸ್‌ ಅನುಷ್ಠಾನಕ್ಕೆ ಸುಮಾರು 10,000 ರೂ. ವೆಚ್ಚ ತಗಲುತ್ತದೆ. ಇದನ್ನು ಭರಿಸಲು ಸಾಧ್ಯವಾಗದವರಿಗೆ ಸರಕಾರದ ವತಿಯಿಂದಲೇ ಅಳವಡಿಸಲಾಗುತ್ತಿದೆ. ಅನಂತರ ಈ ಮೊತ್ತವನ್ನು ಅವರ ಕಮಿಷನ್‌ನಲ್ಲಿ ಹಂತಹಂತವಾಗಿ ವಸೂಲಿ ಮಾಡಲಾಗುತ್ತಿದೆ ಎಂದರು.

ಪಿಒಎಸ್‌ ವ್ಯವಸ್ಥೆಗೆ ರಾಜ್ಯದಲ್ಲಿ ಪಡಿತರ ಕೇಂದ್ರಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಡಿತರ ಕೇಂದ್ರಗಳಲ್ಲಿ ಸರಕಾರದ ಇತರ ಸೌಲಭ್ಯಗಳು ಕೂಡ ಲಭ್ಯವಾಗುವ ಸೇವಾ ಸಿಂಧು ವ್ಯವಸ್ಥೆ ಬೆಂಗಳೂರಿನಲ್ಲಿ ಕೆಲವೆಡೆ  ಅಳವಡಿಸಲಾಗಿದೆ. ಮುಂದಿನ ದಿನ ರಾಜ್ಯದ ಇತರೆಡೆ ವಿಸ್ತರಣೆಯಾಗುವ ನಿರೀಕ್ಷೆ ಇದೆ ಎಂದವರು ಹೇಳಿದರು.

ಪಡಿತರ ವ್ಯವಸ್ಥೆ – ಪುದುಚೇರಿ ಸಿಎಂ ಆಸಕ್ತಿ:
ರಾಜ್ಯದ ಸುವ್ಯವಸ್ಥಿತ ಪಡಿತರ ವಿತರಣೆ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಲು ಪುದುಚೇರಿ ಮುಖ್ಯಮಂತ್ರಿ ಆಸಕ್ತಿ ತೋರ್ಪಡಿಸಿದ್ದಾರೆ ಎಂದು ಸಚಿವ ಯು.ಟಿ. ಖಾದರ್‌ ತಿಳಿಸಿದರು. 

ಗ್ರಾಹಕ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕ: ರಾಜ್ಯದಲ್ಲಿ ಗ್ರಾಹಕ ನ್ಯಾಯಾಲಯಗಳಿಗೆ ನ್ಯಾಯಾಧೀಶರ ನೇಮಕ ಕುರಿತಂತೆ ಇದ್ದ ದಾವೆ ಇತ್ಯರ್ಥಗೊಂಡಿದ್ದು, ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳಿಗೆ ನಿವೃತ್ತ ನ್ಯಾಯಾಧೀಶರನ್ನು ನೇಮಕಗೊಳಿಸಿ ಭರ್ತಿ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ವ್ಯಾಜ್ಯಗಳು ಹೆಚ್ಚು ಇರುವ ಕಡೆಗಳಲ್ಲಿ ಎರಡನೇ ಪೀಠ ಸ್ಥಾಪಿಸಲು ಸರಕಾರ ಕ್ರಮ ಕೈಗೊಂಡಿದೆ.

Advertisement

ಇದರಂತೆ ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ 5 ಕಡೆಗಳಲ್ಲಿ ಹೆಚ್ಚುವರಿ ಪೀಠಗಳನ್ನು ಸ್ಥಾಪಿಸಲಾಗಿದೆ. ವ್ಯಾಜ್ಯ
ಗಳು ಕಡಿಮೆ ಇರುವ ಜಿಲ್ಲೆಗಳ ನ್ಯಾಯಾಧೀಶರು ವ್ಯಾಜ್ಯ ಹೆಚ್ಚು ಇರುವ ಜಿಲ್ಲೆಗಳ ನ್ಯಾಯಾಲಯ
ಗಳಲ್ಲಿ ವಾರದಲ್ಲಿ ನಿರ್ದಿಷ್ಟ ದಿನ ನಿಗದಿಪಡಿಸಿ ದ್ವಿತೀಯ ಪೀಠಗಳ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುವರು ಎಂದರು.

ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಸಮಾಜದಲ್ಲಿ ಗೊಂದಲಗಳನ್ನು ಸೃಷ್ಟಿಸಿ ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡುವ ಕಾರ್ಯ ನಡೆಯುತ್ತಿವೆ. ಶಾಂತಿ ಕಾಪಾಡುವ ಕಾರ್ಯದಲ್ಲಿ ಸರಕಾರದ ಜತೆಗೆ ಜನಪ್ರತಿನಿಧಿಗಳು, ಜನರು ಸಹಕರಿಸಬೇಕು ಎಂದು ಅವರು ವಿನಂತಿಸಿದರು. ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ಕಾಂಗ್ರೆಸ್‌ ಮುಖಂಡರಾದ ಸದಾಶಿವ ಉಳ್ಳಾಲ, ಸಂತೋಷ್‌ ಕುಮಾರ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಆಮ್‌ ಆದ್ಮಿ ವಿಮೆ ರದ್ದು ಸರಿಯಲ್ಲ
ಆಮ್‌ ಆದ್ಮಿ ವಿಮಾ ಯೋಜನೆಯನ್ನು ಕೇಂದ್ರ ಸರಕಾರ ರದ್ದು ಮಾಡುವ ಮೂಲಕ ಬಡವರಿಗೆ ಅನ್ಯಾಯ ಮಾಡಿದೆ ಎಂದು ಸಚಿವ ಯು.ಟಿ. ಖಾದರ್‌ ಆರೋಪಿಸಿದರು. ಈ ಸ್ಕೀಮ್‌ನಡಿ ಎಲ್‌ಐಸಿ ಜತೆ ಹೊಂದಾಣಿಕೆ ಮಾಡಿಕೊಂಡು ಸರಕಾರ 100 ರೂ. ಹಾಗೂ ವೈಯಕ್ತಿಕವಾಗಿ ಪಾಲಿಸಿದಾರ 100 ರೂ. ಭರಿಸಬೇಕಾಗಿತ್ತು. ವೈಯಕ್ತಿಕ ದೇಣಿಗೆಯನ್ನು ಎನ್‌ಜಿಒಗಳು ಭರಿಸುತ್ತಿದ್ದವು. ಇದರಿಂದ ಹಲವರಿಗೆ ಪ್ರಯೋಜನವಾಗುತ್ತಿತ್ತು. ಈ ಯೋಜನೆಯಲ್ಲಿ ಪಾಲಿಸಿ ಹೊಂದಿದ್ದವರ ಕುಟುಂಬಕ್ಕೆ ವ್ಯಕ್ತಿಯ ಸ್ವಾಭಾವಿಕ ಮರಣದ ವೇಳೆ 30,000 ರೂ., ಅಪಘಾತದಿಂದ ಮರಣ ಹೊಂದಿದಲ್ಲಿ 75,000 ರೂ. ಹಾಗೂ ಅಪಘಾತದ ವೇಳೆ ಅಂಗವಿಕಲರಾದರೆ 75,000 ರೂ. ಪರಿಹಾರ ಧನ ಸಿಗುತ್ತಿತ್ತು. ಮಾತ್ರವಲ್ಲದೆ, ಮೃತಪಟ್ಟ ಪಾಲಿಸಿದಾರರ ಮಕ್ಕಳಿಗೆ 9ರಿಂದ ದ್ವಿತೀಯ ಪಿಯುಸಿವರೆಗೆ ವಿದ್ಯಾರ್ಥಿವೇತನದ ಸೌಲಭ್ಯವೂ ಇತ್ತು. ಆದರೆ ಇದೀಗ ಅದನ್ನು ರದ್ದು ಮಾಡಿರುವುದರಿಂದ ದುಡಿಯುವ ವರ್ಗಕ್ಕೆ ಅನ್ಯಾಯವಾಗಿದೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next