ಬಂಟ್ವಾಳ : 94ಸಿ ಹಕ್ಕು ಪತ್ರಕ್ಕಾಗಿ ಮಣಿನಾಲ್ಕೂರು ಗ್ರಾಮಸ್ಥರು ಅ. 30ರಂದು ತಾಲೂಕು ಕಚೇರಿಯಲ್ಲಿ ದಿಢೀರ್ ಪ್ರತಿಭಟನೆ ಮಾಡಿದ್ದು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಸಾಥ್ ನೀಡುವ ಮೂಲಕ ಆಹೋರಾತ್ರಿ ಪ್ರತಿಭಟನೆಗೆ ಸಿದ್ದತೆಗಳು ಆಗುತ್ತಿದ್ದಂತೆ ಮಣಿದ ಜಿಲ್ಲಾಡಳಿತ ಒಟ್ಟು 126 ಮಂದಿಗೆ ಅರ್ಧ ಗಂಟೆಯಲ್ಲಿ ಹಕ್ಕು ಪತ್ರ ನೀಡುವ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದೆ.
ಕಂದಾಯ ಇಲಾಖೆ ಎದುರು ಧರಣಿ
ಕಂದಾಯ ಇಲಾಖೆ 94ಸಿ ಹಕ್ಕುಪತ್ರ ನೀಡಲು ದಿನ ನಿಗದಿ ಮಾಡಿ ಮಣಿನಾಲ್ಕೂರು, ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಫಲಾನುಭವಿಗಳನ್ನು ಬರಹೇಳಿ ಬಳಿಕ ಕಾರ್ಯಕ್ರಮ ಮುಂದೂಡಿದ್ದರಿಂದ ಉರಿದ್ದೆದ ಗ್ರಾಮಸ್ಥರು ಅ. 30ರಂದು ಸಂಜೆ ಕಂದಾಯ ಇಲಾಖೆ ಎದುರಲ್ಲಿ ನೂರಾರು ಸಂಖ್ಯೆಯಲ್ಲಿ ಧರಣಿ ಪ್ರತಿಭಟನೆ ನಡೆಸಿದರು.
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಮಾತನಾಡಿ ಅಹೋರಾತ್ರಿ ಪ್ರತಿಭಟನೆಗೆ ಕ್ರಮ ಕೈಗೊಂಡು ಮಂಗಳೂರು ಸಹಾಯಕ ಕಮಿಷನರ್ ಎಚ್ಚರಿಕೆ ನೀಡಿದ ಬಳಿಕ ಎಲ್ಲ 126 ಮಂದಿಗೆ ಹಕ್ಕುಪತ್ರ ನೀಡಲು ತಹಶೀಲ್ದಾರ್‌ಗೆ ಆದೇಶಿಸಿದರು. ಮಂಗಳವಾರ ಮಣಿನಾಲ್ಕೂರು, ಸರಪಾಡಿ ಗ್ರಾ.ಪಂ. ವ್ಯಾಪ್ತಿಯ 94 ಸಿ ಹಕ್ಕು ಪತ್ರವನ್ನು ವಿತರಿಸಲು ದಿನವನ್ನು ಶಾಸಕರು ನೀಡಿದ್ದು ಅದರಂತೆ ಕ್ರಮವನ್ನು ಸ್ವತಃ ಕಂದಾಯ ಇಲಾಖೆ ಕ್ರಮ ಕೈಗೊಂಡಿತ್ತು. ಮೂರು ದಿನದ ಹಿಂದೆ ತಹಶೀಲ್ದಾರ್ ಮಣಿನಾಲ್ಕೂರು ಗ್ರಾ.ಪಂ. ಅಧ್ಯಕ್ಷರಿಗೆ ಸಚಿವ ದೇಶಪಾಂಡೆ ಬರಲಿದ್ದು ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಸಿದ್ದು ಈಗ ಮುಂದೂಡಿದ್ದಾಗಿ ತಿಳಿಸಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷರು ವಿಚಾರವನ್ನು ಶಾಸಕರಿಗೆ ತಿಳಿಸಿದರು. ಆದರೆ ತಹಶೀಲ್ದಾರ್ ಯಾವುದೇ ವಿಷಯ ತಿಳಿಸದಿರುವ ಬಗ್ಗೆ ಶಾಸಕರು ಪ್ರಶ್ನಿಸಿದಾಗ ಮಂಗಳೂರು ಸಹಾಯಕ ಕಮಿಷನರ್ ಕಾರ್ಯಕ್ರಮ ಮುಂದೂಡಲು ತಿಳಿಸಿದ್ದಾರೆ ಎಂದಷ್ಟೆ ತಿಳಿಸಿದ್ದರು. ಶಾಸಕನಾಗಿ ದಿನ ನೀಡಿದ್ದೇನೆ. ನಿಮ್ಮಲ್ಲಿ ತಿಳಿಸಿ ಎಲ್ಲ ವ್ಯವಸ್ಥೆ ಮಾಡಿ ದಿನಾಂಕ ನಿಗದಿ ಮಾಡಿದೆ. ಸಚಿವರು ಬರುವುದಾದರೆ ಇನ್ನಷ್ಟು ದೊಡ್ಡ ರೀತಿಯಲ್ಲಿ ಕಾರ್ಯಕ್ರಮ ಮಾಡುವ, ತಾಲೂಕಿನ ಎಲ್ಲ 94 ಸಿ ಫಲಾನುಭವಿಗಳಿಗೆ ಅಂದು ಹಕ್ಕುಪತ್ರ ನೀಡುವ ಎಂದಿದ್ದರು.ಈಗ ದಿನ ನಿಗದಿ ಮಾಡಿದವರಿಗೆ ಹಕ್ಕುಪತ್ರ ನೀಡಿ ಎಂದಿದ್ದರು.
ಅದರಂತೆ ಶಾಸಕರು ಮಂಗಳವಾರ ಸರಪಾಡಿಗೆ ಹೋದಾಗ ಅಲ್ಲಿ ಕಾರ್ಯಕ್ರಮದ ವ್ಯವಸ್ಥೆ ಇಲ್ಲದಿರುವ ಬಗ್ಗೆ ಗಮನಕ್ಕೆ ಬಂದಿತ್ತು. ತತ್‌ಕ್ಷಣ ಅಲ್ಲಿ ಸೇರಿದ್ದ ಎಲ್ಲ ಫಲಾನುಭವಿಗಳ ಸಹಿತ ನೂರಾರು ಗ್ರಾಮಸ್ಥರು ಬಿ.ಸಿ.ರೋಡಿಗೆ ಬಂದು ತಹಶೀಲ್ದಾರ್ ಅವರನ್ನೇ ಪ್ರಶ್ನಿಸಲು ಸಿದ್ದರಾದರು. ಸಂಜೆ ಐದು ಗಂಟೆಗೆ ಎಲ್ಲ ಫಲಾನುಭವಿಗಳು ತಹಶೀಲ್ದಾರ್ ಕಚೇರಿಯಲ್ಲಿ ಜಮಾಯಿಸಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಪುತ್ತೂರು ಶಾಸಕ ಸಂಜೀವ ಮಠಂದೂರು ಸಹಿತ ಪಕ್ಷ ನಾಯಕರು ಸ್ಥಳಕ್ಕೆ ಧಾವಿಸಿ ಬಂದರಲ್ಲದೆ, ಶಾಸಕರಿಗೆ ಅವಮಾನ ಆಗಿದೆ. ಹಕ್ಕುಪತ್ರ ನೀಡಲೇ ಬೇಕು. ಇದು ನಮ್ಮ ಸ್ವಾಭಿಮಾನದ ಪ್ರಶ್ನೆ ಎಂದು ಆಗ್ರಹಿಸಿದರು.
ಒಪ್ಪಿಗೆ
ಇದರ ಬಳಿಕ ಮಂಗಳೂರು ಸಹಾಯಕ ಕಮಿಷನರ್‌ಗೆ ಮಾತನಾಡಿದ ತಹಶೀಲ್ದಾರ್ ಹಕ್ಕು ಪತ್ರ ನೀಡಲು ಒಪ್ಪಿಗೆ ಪಡೆದುಕೊಂಡರು.
ಎಲ್ಲ ಪ್ರಯತ್ನ
ಸರಪಾಡಿ ಮಣಿನಾಲ್ಕೂರು ಗ್ರಾಮಸ್ಥರಿಗೆ ಇಂದು ಹಕ್ಕುಪತ್ರ ನೀಡಬೇಕಿತ್ತು. ಒಂದು ತಿಂಗಳ ಹಿಂದೆ 94 ಸಿ ಹಕ್ಕುಪತ್ರ ನೀಡಲು ದಿನ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದರು. ಹಾಗೆ ನಾನು ದಿನ ನಿಗದಿ ಮಾಡಿ ತಹಶೀಲ್ದಾರ್‌ಗೆ ವಿಷಯ ತಿಳಿಸಿದ್ದೆ. ಈವತ್ತು ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳುವಲ್ಲಿ ತಹಶೀಲ್ದಾರ್ ಸರಿಯಾದ ಕ್ರಮ ಕೈಗೊಳ್ಳಲಿಲ್ಲ. ಜನರ ಬೇಡಿಕೆಯನ್ನು ಈಡೇರಿಸುವಲ್ಲಿ ಎಲ್ಲ ಪ್ರಯತ್ನ ಮಾಡುತ್ತೇನೆ. ಈಗ ಜಿಲ್ಲಾಧಿಕಾರಿಗಳಲ್ಲಿ ಮಾತನಾಡಿ ಹಕ್ಕುಪತ್ರ ನೀಡುವ ಕ್ರಮ ಆಗಿದೆ. ಅದು ಪೂರ್ಣ ಆಗುವ ತನಕ ಇಲ್ಲಿರುತ್ತೇನೆ.
–
ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ಶಾಸಕರು
ಕುತಂತ್ರ
ತಹಶೀಲ್ದಾರರೇ ಹಕ್ಕು ಪತ್ರ ನೀಡದಂತೆ ಕಂದಾಯ ಇಲಾಖೆಯನ್ನು ನಿರ್ದೇಶಿಸುವುದಕ್ಕೆ ಮಾಜಿ ವ್ಯಕ್ತಿಗೆ ಏನು ಅಧಿಕಾರ ಇದೆ. ಶಾಸಕರು ಹೇಳಿದ್ದನ್ನು ಮಾಡದ ನಿಮ್ಮ ಜಿಲ್ಲಾ ಆಡಳಿತಕ್ಕೆ ಪ್ರತಿಭಟನೆ, ಅಧಿಕಾರಿಗಳಿಗೆ ಘೇರಾವ್ ಕ್ರಮದ ಮೂಲಕ ಬುದ್ಧಿ ಕಲಿಸಬೇಕಾಗಿದೆ. ಅಧಿಕಾರ ಇಲ್ಲದಿದ್ದರೂ ಜನರ ಹಕ್ಕನ್ನು ಕಸಿದುಕೊಳ್ಳಲು, ಜನರನ್ನು ಸತಾಯಿಸಲು ಮಾಡಿರುವ ಕುತಂತ್ರ ಜನರಿಗೆ ಅರ್ಥ ಆಗಬೇಕು.
- ಕೆ. ಹರಿಕೃಷ್ಣ ಬಂಟ್ವಾಳ