ಸೋಮವಾರಪೇಟೆ : ಕಳೆದ ಮುಂಗಾರುನಲ್ಲಿ ಸಂಭವಿಸಿದ ಬೆಳೆಹಾನಿ ಪರಿಹಾರವನ್ನು ಕೂಡಲೇ ವಿತರಿಸಬೇಕೆಂದು ರೈತಪರ ಹಾಗೂ ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿ ಕಾರಿಗಳು ತಾಲೂಕು ಕಚೇರಿ ಎದುರು ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಿ ತಹಶಿಸೀಲ್ದಾರ್ ಗೋವಿಂದರಾಜ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಬೆಳೆಹಾನಿ ಹಾಗೂ ಆಸ್ತಿಪಾಸ್ತಿ ಹಾನಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಪ್ರಾರಂಭವಾಗಲಿದೆ. ಆದರೆ ಇದುವರೆಗೆ ಮಳೆಹಾನಿ ಪರಿಹಾರ ನೀಡದಿರುವುದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಹಾಮಳೆಯಿಂದ ತಾಲೂಕಿನಲ್ಲಿ ಕಾಫಿ, ಏಲಕ್ಕಿ, ಕಾಳುಮೆಣಸು, ಕಿತ್ತಳೆ, ಭತ್ತ ಮುಂತಾದ ಬೆಳೆ ಶೇ.70ರಿಂದ 80ರಷ್ಟು ಹಾನಿಯಾಗಿದೆ. ಆದರೆ ಇದೂವರೆಗೆ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ. ಬೆರಳಣಿಕೆ ಮಂದಿಗೆ ಒಂದೆರಡು ಸಾವಿರ ಪರಿಹಾರ ನೀಡಲಾಗಿದೆ. ಇಂತಹ ಅವೈಜ್ಞಾನಿಕ ಪರಿಹಾರದಿಂದ ರೈತಾಪಿ ವರ್ಗಕ್ಕೆ ಪ್ರಯೋಜನಲ್ಲ ಎಂದು ಕಾಫಿ ಬೆಳೆಗಾರರ ಸಂಘ ಉಪಾಧ್ಯಕ್ಷ ಕೆ.ಪಿ.ಬಸಪ್ಪ ಹೇಳಿದರು.
ಭೂಕುಸಿತ, ಪ್ರವಾಹದಿಂದ ಕಾಫಿ ತೋಟ, ಏಲಕ್ಕಿ ತೋಟ, ಭತ್ತದ ಗದ್ದೆಗ ಳನ್ನು ಕಳೆದುಕೊಂಡವರಿಗೆ ಪರಿಹಾರ ಹಾಗೂ ಬದಲಿ ಜಾಗ ನೀಡಬೇಕು. ಮನೆ ಕಳೆದುಕೊಂಡವರಿಗೆ ಮನೆಗಳನ್ನು ಕೂಡಲೆ ನಿರ್ಮಿಸಿಕೊಡಬೇಕು. ಏಲಕ್ಕಿ, ಕಾಫಿ ತೋಟಗಳಲ್ಲಿ ಬಿದ್ದಿರುವ ಮರಗಳನ್ನು ತೋಟದ ಮಾಲàಕರು ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ.ಮುದ್ದಪ್ಪ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಎಸ್.ಜಿ.ಮೇದಪ್ಪ, ಮೇ14ರಂದು ಚರ್ಚಿಸಲು ಜಿಲ್ಲಾಧಿಕಾರಿಗಳು ಕಚೇರಿಗೆ ಆಹ್ವಾನ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಬಿ.ಎಂ.ಲವ, ಪದಾಧಿಕಾರಿಗಳಾದ ಸೋಮಶೇಖರ್, ಲಕ್ಷ್ಮಣ್, ರಾಮಚಂದ್ರ, ದಿನೇಶ್, ಕುಶಾಲಪ್ಪ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.