ಚಿಕ್ಕಬಳ್ಳಾಪುರ: ಶಾಲೆಯ ಆರಂಭದ ಮೊದಲ ದಿನವೇ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿರುವ ಶಿಕ್ಷಣ ಇಲಾಖೆ, ಇದೀಗ 2023-24ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ 1 ಜೊತೆ ಶೂ ಮತ್ತು 2 ಜೊತೆ ಸಾಕ್ಸ್ ಗಳನ್ನು ಜುಲೈ ತಿಂಗಳ ಒಳಗೆ ವಿತರಿಸುವಂತೆ ಗುರುವಾರ ಮಹತ್ವದ ಆದೇಶ ಹೊರಡಿಸಿದೆ.
ಶಾಲಾ ಮಕ್ಕಳಿಗೆ ಉಚಿತ ಶೂ ಹಾಗೂ ಸಾಕ್ಸ್‌ಗಳನ್ನು ವಿತರಿಸುವ ಹೊಣೆ ಆಯಾ ಶಾಲೆಗಳ ಶಾಲಾ ಅಭಿವೃದ್ಧಿ ಸಮಿತಿಗಳಿಗೆ ವಹಿಸಿರುವ ಶಿಕ್ಷಣ ಇಲಾಖೆ, ಒಂದು ಜೊತೆ ಕಪ್ಪು ಬಣದ ಶೂ ಹಾಗೂ ಎರಡು ಜೊತೆ ಬಿಳಿ ಬಣ್ಣದ ಸಾಕ್ಸ್‌ಗಳನ್ನು ಖರೀದಿಸಿ ವಿತರಿಸುವಂತೆ ಸುತ್ತೋಲೆಯಲ್ಲಿ ಸೂಚಿಸಿದೆ.
ಪಾದರಕ್ಷೆ ಖರೀದಿಗೆ ಸಮಿತಿ: ಶಾಲಾ ಹಂತದಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣಮವಾಗಿ ಶೂ ಹಾಗೂ ಸಾಕ್ಸ್‌ಗಳನ್ನು ಖರೀದಿಸಲು ಅನುಕೂಲವಾಗುವಂತೆ ಶಿಕ್ಷಣ ಇಲಾಖೆ ಆಯಾ ಶಾಲೆಗಳ ಎಸ್‌ಡಿಎಂಸಿ ಸಮಿತಿಗಳ ಮೇಲುಸ್ತುವಾರಿಯಲ್ಲಿ ಖರೀದಿ ಪ್ರಕ್ರಿಯೆಗೆ ಅನುಕೂಲವಾಗುವಂತೆ ಪಾದರಕ್ಷೆ ಸಮಿತಿ ರಚಿಸಿದ್ದು, ಸಮಿತಿಯಲ್ಲಿ ಆಯಾ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದು, ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರು ಸದಸ್ಯರು ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸಮಿತಿಯಲ್ಲಿ ಇಬ್ಬರು ಮಹಿಳಾ ಸದಸ್ಯರು: ಎಸ್ ಡಿಎಂಎಸಿ ನಾಮ ನಿರ್ದೇಶಿತ ಮೂವರು ಸದಸ್ಯರು ಇದರಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳಾ ಸದಸ್ಯರು ಸಮಿತಿ ಸದಸ್ಯರಾಗಿ ಸಮಿತಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ಉಪ ನಿರ್ದೇಶಕರಿಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದೆ.
ಜಿಲ್ಲೆಗೆ 1,61 ಕೋಟಿ ಅನುದಾನ ಬಿಡುಗಡೆ: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ 1ರಿಂದ 5 ನೇ ತರಗತಿ ಓದುತ್ತಿರುವ ಒಟ್ಟು 40,858 ಮಕ್ಕಳಿಗೆ ಒಟ್ಟು 1,08,27,635 ರೂ. ಬಿಡುಗಡೆಗೊಳಿ ಸಿದ್ದು, 6 ರಿಂದ 8ನೇ ತರಗತಿವರೆಗೂ ವ್ಯಾಸಂಗ ಮಾಡುತ್ತಿರುವ ಒಟ್ಟು 17,879 ಮಕ್ಕಳಿದ್ದು ಅವ ರಿಗೆ ಒಟ್ಟು 52,74,305 ಸೇರಿ ಒಟ್ಟು 1,61, 01,940 ರೂ.ಶಿಕ್ಷಣ ಇಲಾಖೆ ಶೂ ಹಾಗೂ ಸಾಕ್ಸ್ ಗಳ ಖರೀದಿಗೆ ಬಿಡುಗಡೆ ಮಾಡಿ ಆದೇಶಿಸಿದೆ.
ಸದ್ಯಕ್ಕೆ 1ರಿಂದ 8ನೇ ತರಗತಿ ಮಕ್ಕಳಿಗೆ ಮಾತ್ರ: ಇನ್ನೂ ಸಾರ್ವಜನಿಕ ಶಿಕ್ಷಣ ಇಲಾಖೆ 1 ರಿಂದ 8ನೇ ತರಗತಿ ಓದುತ್ತಿರುವ ಮಕ್ಕಳಿಗೆ ಮಾತ್ರ ಜುಲೈ 30 ರೊಳಗೆ ಶೂ ಹಾಗೂ ಸಾಕ್ಸ್‌ಗಳನ್ನು ವಿತರಿಸುವಂತೆ ಆದೇಶಿಸಿದ್ದು, 9 ರಿಂದ 10ನೇ ತರಗತಿ ಓದುತ್ತಿರುವ ಮಕ್ಕಳಿಗೆ ಆಯಾ ಪ್ರೌಢ ಶಾಲಾ ಮುಖ್ಯ ಶಿಕ್ಷಕರೇ ಡಿಡಿಒಗಳಾಗಿರುವುದರಿಂದ ಅನುದಾನವನ್ನು ನೇರವಾಗಿ ಅವರಿಗೆ ಬಿಡುಗಡೆ ಮಾಡಲು ಡಿಡಿಒ ಕೋಡ್‌ಗಳನ್ನು ಕೆ-2ನಲ್ಲಿ ಮ್ಯಾಪಿಂಗ್ ಮಾಡಲಾಗುತ್ತಿದೆ. ಕೆ-2 ಮ್ಯಾಪಿಂಗ್ ಕಾರ್ಯ ಶೀಘ್ರ ಪೂರ್ಣಗೊಂಡ ಬಳಿಕ ಆಯಾ ಡಿಡಿಒಗಳಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶೂ ಹಾಗೂ ಸಾಕ್ಸ್‌ಗಳ ಖರೀದಿಗಾಗಿ ಅನುದಾನ ಬಿಡುಗಡೆ ಮಾಡಲಿದ್ದು, ಬಳಿಕ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಪ್ರೌಢ ಶಾಲಾ ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಆಯುಕ್ತರಾದ ಆರ್.ವಿಶಾಲ್ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.
– ಕಾಗತಿ ನಾಗರಾಜಪ್ಪ