ತುಮಕೂರು: ಕೋವಿಡ್-19ರ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರಿಗೆ ಒಟಿಪಿ ಅಥವಾ ಬಯೋಮೆಟ್ರಿಕ್‌ಗೆ ಕಾಯದೇ ಸಹಿ ಮಾಡಿಸಿ ಕೊಂಡು ಏ. 10ರೊಳಗೆ ಪಡಿತರವನ್ನು ವಿತರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಗುಬ್ಬಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೋವಿಡ್ – 19ರ ನಿಯಂತ್ರಣದ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ನಡೆಸಿ ಮಾತನಾಡಿ, ಪಡಿತರ ಚೀಟಿ ಇಲ್ಲದಿದ್ದರೂ ಪಡಿತರ ವಿತರಿಸಬೇಕು. ನ್ಯಾಯ ಬೆಲೆ ಅಂಗಡಿ ಗಳಲ್ಲಿ ಸಾರ್ವಜನಿಕರು ಗುಂಪು ಸೇರದಂತೆ 1 ಮೀಟರ್ ಅಂತರದಲ್ಲಿ ಬಾಕ್ಸ್ ಹಾಕಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರ ದಿಂದ ನೀಡಲಾಗುವ ವಸ್ತುಗಳನ್ನು ಮಾತ್ರ ಮಾರಾಟ ಮಾಡುವಂತೆ ಸೂಚಿಸಿ ದಲ್ಲದೇ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಲಿಕ್ಕರ್ ಶಾಪ್ ಇರುವ ಕಡೆ ಹೆಚ್ಚಿನ ಗಸ್ತು ಮಾಡಿ ಎಂದು ತಿಳಿಸಿದರು.
ಗುಬ್ಬಿಯಲ್ಲಿ ಜನರು ಅನಗತ್ಯವಾಗಿ ಓಡಾಡುತ್ತಿದ್ದಾರೆ. ಇಲ್ಲಿಯೇ ಜನರು ಹೆಚ್ಚಾಗಿ ಓಡಾಡುತ್ತಿದ್ದಾರೆ. ಪ್ರತಿದಿನ ನಾನು ಈ ರಸ್ತೆಯಲ್ಲಿ ಓಡಾಡುತ್ತಿದ್ದೇನೆ ಹೆಚ್ಚಾಗಿ ಜನರು ಓಡಾಡುತ್ತಿದ್ದಾರೆ ಅಂಗಡಿ, ಮೆಡಿಕಲ್‌ಗೆ ಇಬ್ಬರ ಬದಲು ಒಬ್ಬರು ಹೋಗುವಂತೆ ತಿಳಿಸಿ, ನಿಟ್ಟೂರು, ಕೊಂಡ್ಲಿ ಕ್ರಾಸ್ ಮಾರ್ಗವಾಗಿ ಬರುವ ದ್ವಿಚಕ್ರ ವಾಹನಗಳಿಗೆ ನಿರ್ಬಂಧ ಹೇರಬೇಕು. ಕೃಷಿ ಚಟುವಟಿಕೆಗಳಲ್ಲಿ ಭಾಗಿ ಯಾಗುವವರನ್ನು ಬಿಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗವಾಗಿದ್ದು, ಇದಕ್ಕೆ ಯಾವುದೇ ಔಷಧವಿಲ್ಲ. ಇದನ್ನು ತಡೆಗಟ್ಟಲು ಇರುವ ಏಕೈಕ ಮಾರ್ಗ ಎಂದರೆ ಅದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಈ ನಿರ್ಧಾರ ಅನಿವಾರ್ಯ ವೆಂದು ಪ್ರಧಾನಿ ಲಾಕ್‌ಡೌನ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಈ ಜವಾಬ್ದಾರಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.
ಉಪವಿಭಾಗಾಧಿಕಾರಿ ಅಜಯ್, ತಹಶೀಲ್ದಾರ್, ಡಾ. ಪ್ರದೀಪ್‌ಕುಮಾರ್, ಡಿಎಚ್‌ಒ ಡಾ. ಬಿ.ಆರ್. ಚಂದ್ರಿಕಾ, ಜಿಲ್ಲಾ ಪಂಚಾಯತ್ ಸದಸ್ಯೆ ಡಾ. ನವ್ಯಬಾಬು ಇದ್ದರು.