Advertisement

ವಾರದೊಳಗೆ ಬೆಳೆ ಹಾನಿ ಪರಿಹಾರ ವಿತರಿಸಿ: ಆರ್‌.ವಿ. ದೇಶಪಾಂಡೆ

09:12 PM Jun 19, 2019 | Lakshmi GovindaRaj |

ಚಾಮರಾಜನಗರ: ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿರುವ ಬೆಳೆ ಸಂಬಂಧ ಪರಿಹಾರವನ್ನು ಇನ್ನು 7 ದಿನಗಳೊಳಗೆ ವಿತರಿಸುವಂತೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಪ್ರಕೃತಿ ವಿಕಕ್ರಮಗಳು ಹಾಗೂ ಕಂದಾಯ ಇಲಾಖೆ ವಿಷಯಗಳ ಕುರಿತ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಕೃತಿ ವೈಪರಿತ್ಯದಿಂದ ಜಿಲ್ಲೆಯಲ್ಲಿ ಹಾನಿಗೆ ಒಳಗಾಗಿರುವ ಬಾಳೆ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆದ ರೈತ ಬೆಳೆಗಾರರಿಗೆ ನಿಯಮಾನುಸಾರ ಬೆಳೆ ಪರಿಹಾರ ವಿತರಿಸುವ ಕೆಲಸವನ್ನು ವಿಳಂಬ ಮಾಡಬಾರದು. ಕೂಡಲೇ ಅಗತ್ಯ ಕ್ರಮ ವಹಿಸಿ ಇನ್ನು 7 ದಿನಗಳ ಒಳಗೆ ಸಂಬಂಧ ಪಟ್ಟ ಎಲ್ಲರಿಗೂ ಪರಿಹಾರ ನೀಡಬೇಕು ಎಂದು ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಶಾಸಕ‌ ಆರ್‌.ನರೇಂದ್ರ ಮಾತನಾಡಿ, ಬೆಳೆ ಹಾನಿಗೆ ನೀಡಲಾಗುತ್ತಿರುವ ಪರಿಹಾರ ತೀರಾ ಕಡಿಮೆಯಿದೆ. ವೈಜ್ಞಾನಿಕವಾಗಿ ಬೆಳೆ ಪರಿಹಾರ ನೀಡಬೇಕಿದೆ. ಬೆಳೆಗಾರರು ಬೆಳೆ ಬೆಳೆಯಲು ಮಾಡಿದ ವೆಚ್ಚಕ್ಕೆ ಅನುಗುಣವಾಗಿ ಪರಿಹಾರ ಲಭ್ಯವಾದರೆ ಅನುಕೂಲವಾಗಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿ ಪ್ರಗತಿ ಪರಿಶೀಲಿಸಿದ ಸಚಿವರು, ಬರ ಪರಿಹಾರ ಕಾಮಗಾರಿಗಳಿಗೆ ಹಣದ ಕೊರತೆಯಿಲ್ಲ, ತಾಲೂಕು ಟಾಸ್ಕ್ ಪೋರ್ಸ್‌ ನಲ್ಲಿಯೂ ಸಹ ಹಣ ಬಳಸಿ ಬರಪರಿಹಾರ ಸಂಬಂಧ ಕಾಮಗಾರಿಗಳನ್ನು ನಿರ್ವಹಿಸಬೇಕು, ಅಧಿಕಾರಿಗಳು ವ್ಯಾಪಕವಾಗಿ ಕ್ಷೇತ್ರ ಪ್ರವಾಸ ಮಾಡಿ ಜನರ ಸಮಸ್ಯೆಗಳಗೆ ಸ್ಪಂದಿಸಬೇಕು, ವಿಶೇಷವಾಗಿ ಹಿರಿಯ ಅಧಿಕಾರಿಗಳು ಪ್ರವಾಸ ಮಾಡಿದರೆ ಅಧೀನ ಅಧಿಕಾರಿಗಳು ಸಹ ಚುರುಕಾಗುತ್ತಾರೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕೆಂದು ಸಚಿವರು ತಿಳಿಸಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ‌ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಆಮೆ ಕೆರೆ ಜಮೀನು ಸಂಬಂಧ ಇನ್ನೂ ಅರ್ಹರಿಗೆ ಪರಿಹಾರ ದೊರೆತಿಲ್ಲ, ಅರಣ್ಯ ಇಲಾಖೆಯವರು ಪರಿಹಾರ ನೀಡುವ ಸಂಬಂಧ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಕಂದಾಯ ಸಚಿವರ ಗಮನಸೆಳೆದರು.

ಶಾಸಕ‌ ಎನ್‌.ಮಹೇಶ್‌ ಅವರೂ ಸಹ ಆಮೆ ಕೆರೆ ವಿಷಯ ಪ್ರಸ್ತಾಪಿಸಿ ಪರಿಹಾರಕ್ಕಾಗಿ 9 ರಿಂದ 10 ಕೋಟಿ ರೂ ಅಗತ್ಯವಿದೆ ಎಂಬ ಮಾಹಿತಿ ಇದೆ. ಈ ಸಂಬಂಧ ತುರ್ತಾಗಿ ಕ್ರಮ ವಹಿಸಬೇಕೆಂದು ಕೋರಿದರು.

ಜಿಪಂ ಅಧ್ಯಕ್ಷೆ ಶಿವಮ್ಮ, ಕೃಷಿ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್‌ ಕಟಾರಿಯ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ವಿ.ಯಶವಂತ, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಪಂ ಸಿಇಒ ಕೆ.ಎಸ್‌.ಲತಾಕುಮಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಇತರರು ಸಭೆಯಲ್ಲಿ ಹಾಜರಿದ್ದರು.

ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು, ತಾಲೂಕಿನ ಬದನಗುಪ್ಪೆ ಗ್ರಾಮದಲ್ಲಿ ಹಾನಿಗೀಡಾಗಿರುವ ಬಾಳೆ ಬೆಳೆಯನ್ನು ವೀಕ್ಷಿಸಿದರು. ಇದೇ ವೇಳೆ ರೈತರು ಬೆಳೆ ಹಾನಿ, ಅಕಾಲಿಕ ಮಳೆ, ಇನ್ನಿತರ ಅಹವಾಲುಗಳನ್ನು ಸಚಿವರ ಮುಂದೆ ಹೇಳಿಕೊಂಡರು.

ತಾಲೂಕಿನ ಬೆಂಡರವಾಡಿ ಕೆರೆಗೂ ಭೇಟಿ ನೀಡಿದ ಸಚಿವರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಮಾಹಿತಿ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next