Advertisement

ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆ ವಿತರಿಸಿ

11:19 AM Jun 30, 2019 | Suhan S |

ಗದಗ: ನಗರದ ಹೊರವಲಯದ ಗಂಗಿಮಡಿ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಆಶ್ರಯ ಮನೆಗಳ ವಿತರಣೆಯಲ್ಲಿ ಪಕ್ಷ ರಾಜಕೀಯ ಮಾಡದೇ, ಪಾರದರ್ಶಕವಾಗಿ ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು ಎಂದು ಆಗ್ರಹಿಸಿ ಇಲ್ಲಿನ ವಸತಿ ರಹಿತರು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಇಲ್ಲಿನ ಒಕ್ಕಲಗೇರಿ ರಾಚೋಟೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಬೃಹತ್‌ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ನಗರಸಭೆ ಆವರಣದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಿ ಅಂಗಡಿ, ಗಂಗಿಮಡಿ ಪ್ರದೇಶದಲ್ಲಿ ಕೇಂದ್ರ ಸರಕಾರದ ಹೌಸಿಂಗ್‌ ಫಾರ್‌ ಆಲ್ ಯೋಜನೆಯಡಿ ಆಶ್ರಯ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಮನೆಗಳಿಗೆ ಶೇ. 50ರಷ್ಟು ಅನುದಾನವನ್ನು ಕೇಂದ್ರ ಸರಕಾರ ಭರಿಸುತ್ತಿದೆ. ಇನ್ನುಳಿದಂತೆ ರಾಜ್ಯ ಸರಕಾರ ಹಾಗೂ ಸ್ಥಳೀಯ ನಗರಸಭೆ ವಂತಿಗೆಯಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಶಾಸಕ ಎಚ್.ಕೆ. ಪಾಟೀಲ ಮತ್ತು ಅವರ ಬೆಂಬಲಿಗರು ಮಾತ್ರ ತಾವೇ ಈ ಯೋಜನೆಯ ಮಾಲೀಕರು, ಯೋಜನೆಯ ರೂವಾರಿಗಳು ಎಂಬಂತೆ ´ೋಸು ಕೊಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಕಾರ್ಯಕರ್ತರು ಅವಳಿ ನಗರದಲ್ಲಿ ತಮಗೆ ಬೇಕಾದವರಿಗೆ ಮನೆ ನೀಡುವುದಾಗಿ ಹೇಳುವ ಮೂಲಕ ಯೋಜನೆ ದುರುಪಯೋಗ ಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ, ಕೇಂದ್ರ ಸರಕಾರದ ಆರ್ಥಿಕ ನೆರವಿನಿಂದ ನಿರ್ಮಾಣಗೊಳ್ಳುತ್ತಿರುವ ಮನೆಗಳು ಕಾಂಗ್ರೆಸ್‌ ಕಾರ್ಯಕರ್ತರು, ಅವರು ಹಿಂಬಾಲಕರು, ಮರಿ ಪುಡಾರಿಗಳ ಪಾಲಾಗಬಾರದು. ಮನೆ ವಿತರಣೆಗೆ ಸರಕಾರ ರೂಪಿಸಿದ ಮಾನದಂಡಗಳ ಪ್ರಕಾರವೇ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಅರ್ಹರಿಗೆ ಸೂರು ಕಲ್ಪಿಸುವ ಮೂಲಕ ಯೋಜನೆಯ ಮೂಲ ಉದ್ದೇಶ ಈಡೇರುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಎಸ್‌.ಎಂ. ಕೃಷ್ಣಾ ನಗರದ ಆಶ್ರಯ ಮನೆಗಳಂತೆ ಗಂಗಿಮಡಿ ಮನೆಗಳೂ ಕೇವಲ ಕಾಂಗ್ರೆಸ್‌ ಕಾರ್ಯಕರ್ತರಿಗೆ, ಏಜೇಂಟರಿಗೆ ವಿತರಿಸಿದ್ದೇ ಆದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಗರಸಭೆ ವಿರುದ್ಧ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.

Advertisement

ಶ್ರೀರಾಮ ಸೇನೆ ಧಾರವಾಡ ವಿಭಾಗೀಯ ಸಂಚಾಲಕ ರಾಜೂ ಖಾನಪ್ಪನವರ, ಸುರೇಶ ಹೆಬಸೂರ, ವಿನಾಯಕ ಕಿರೇಸೂರು, ಚೇತನ್‌ ಅಬ್ಬಿಗೇರಿ, ನಾಗರಾಜ ದೊಡ್ಡಮನಿ, ಅಂದಪ್ಪ ಕುಂಬಾರ, ಅರುಣ, ನಾಗರತ್ನಾ ಅಂಗಡಿ, ನೀಲಾ ಮೆಣಸಿನಕಾಯಿ, ಹಮೀದಾಬೇಗಂ ದಖನಿ, ಶಿವಲೀಲಾ ಮುಗುಳಿ, ಶೋಭಾ ಪಿಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next