ಸಿರುಗುಪ್ಪ: ಪಡಿತರ ಚೀಟಿ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ವಿತರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಆಗ್ರಹಿಸಿದರು. ನಗರದ ಅಭಯಾಂಜನೇಯಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ರಾಜ್ಯ ಪಡಿತರ ವಿತರಕರ ಸಂಘದ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 1 ಕೆಜಿ ಅಕ್ಕಿಗೆ 29 ರೂ., ರಾಜ್ಯ ಸರ್ಕಾರ 3 ರೂ. ಸಹಾಯಧನದೊಂದಿಗೆ ಪಡಿತರದಾರರಿಗೆ ಅಕ್ಕಿ ವಿತರಿಸಲಾಗುತ್ತಿದೆ. ರಾಜ್ಯ ಸರ್ಕಾರ ಪಡಿತರ ಚೀಟಿ ಕುಟುಂಬದ ಪ್ರತಿ ಸದಸ್ಯರಿಗೆ 2 ಕೆಜಿ ಕಡಿತಗೊಳಿಸಿ 5 ಕೆಜಿಗೆ ನಿಗದಿಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು.
ಪಡಿತರ ಚೀಟಿ ಪ್ರತಿ ಸದಸ್ಯರಿಗೂ 10 ಕೆಜಿ ಅಕ್ಕಿ ವಿತರಿಸಬೇಕು. ನಿಜವಾದ ಫಲಾನುಭವಿಗಳಿಗೆ ಆಹಾರಧಾನ್ಯ ವಿತರಿಸುವ ಮೂಲಕ ತಲುಪಿಸಬೇಕೆನ್ನುವ ನಿಟ್ಟಿನಲ್ಲಿ ಅನೇಕ ಸುಧಾರಣೆಗಳನ್ನು ಆಹಾರ ಇಲಾಖೆ ಮೂಲಕ ಕೈಗೊಂಡಿದ್ದು, ಗಣಕೀಕೃತ ಬಯೋಮೆಟ್ರಿಕ್ ಲಾಗಿನ್ ವ್ಯವಸ್ಥೆಯಿಂದಾಗಿ ಪಡಿತರ ಕಾರ್ಡ್‌ದಾರರಿಗೆ ಇಂದು ಆಹಾರಧಾನ್ಯ ನೇರವಾಗಿ ತಲುಪುತ್ತಿವೆ ಎಂದರು.
ಜಿಲ್ಲಾ ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಧರ್ ಮಾತನಾಡಿ, ಕೇಂದ್ರ ಸರ್ಕಾರ ಆಹಾರ ಪದಾರ್ಥಗಳನ್ನು ಕೂಲಿಗಾಗಿ ಕಾಳು ಯೋಜನೆ ಮೂಲಕ ವಿತರಿಸಿದರೆ, ರಾಜ್ಯ ಸರ್ಕಾರ ಹಸಿವು ಮುಕ್ತ ಕರ್ನಾಟಕಕ್ಕಾಗಿ ಅನ್ನಭಾಗ್ಯ ಯೋಜನೆ ಮೂಲಕ ಆನ್‌ಲೈನ್‌ನಲ್ಲಿ ಬಯೋಮೆಟ್ರಿಕ್ ಗುರುತು ಪಡೆದು ಅರ್ಹ ಪಡಿತರದಾರರಿಗೆ ಪಡಿತರ ವಿತರಕರ ಮೂಲಕ ಆಹಾರಧಾನ್ಯ ವಿತರಿಸುತ್ತಿದೆ ಎಂದರು.
ವಯಸ್ಸಾದವರ ಹೆಬ್ಬೆಟ್ಟಿನ ಗುರುತು ದಾಖಲಾಗದಿರುವ ದೂರುಗಳು ಬಂದಿದ್ದು, ಅಂತಹ ಮುಖ್ಯಸ್ಥರನ್ನು ಬದಲಿಸಿ ಕುಟುಂಬದ ಇತರೆ ಸದಸ್ಯರನ್ನು ಮುಖ್ಯಸ್ಥರನ್ನಾಗಿ ಬದಲಾಯಿಸುವ ವ್ಯವಸ್ಥೆ ಅಳವಡಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಪಡಿತರ ವಿತರಕರ ಸಂಘದ ಅಧ್ಯಕ್ಷ ಮೀನಳ್ಳಿ ತಾಯಣ್ಣ ಮಾತನಾಡಿ, ರಾಜ್ಯದಲ್ಲಿ ಪಡಿತರ ವಿತರಕರಿಗೆ ಕೇವಲ 100 ರೂ. ಕಮಿಷನ್ ನೀಡಲಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ನೀಡುವಂತೆ 150 ರೂ. ಗೆ ಹೆಚ್ಚಿಸಬೇಕು. ಕೆಲವೆಡೆ ಇಂಟರ್‌ನೆಟ್ ಸಮಸ್ಯೆ, ವಯಸ್ಸಾದವರ ಹೆಬ್ಬರಳಿನ ರೇಖೆಗಳು ಸವಿಯುವುದರಿಂದ ಅಕ್ಕಿ ವಿತರಿಸಲು ತೊಂದರೆಯಾಗುತ್ತಿದೆ. ಗೋದಾಮಿನಲ್ಲಿ ಸರಿಯಾದ ತೂಕದ ಪಡಿತರ ಧಾನ್ಯ ವಿತರಿಸಬೇಕೆಂದು ಮನವಿ ಮಾಡಿದರು.
ತಾಲೂಕು ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ ಮಾತನಾಡಿ, ತಾಲೂಕು ಘಟಕದ ವತಿಯಿಂದ ಸಾಮಾಜಿಕ ಕಾರ್ಯಕ್ರಮ ಹಾಗೂ ಬಡ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಸೇರಿದಂತೆ ವಿದ್ಯಾರ್ಥಿ ವೇತನವನ್ನು ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಆಹಾರ ಇಲಾಖೆಯ ತಾಲೂಕು ಶಿರಸ್ತೇದಾರ್ ಶರಣಯ್ಯಸ್ವಾಮಿ, ಆಹಾರ ಇಲಾಖೆನಿರೀಕ್ಷಕ ಮಹೇಶ್, ಭುವನೇಶ್ವರರಾವ್, ಶ್ರೀನಿವಾಸರೆಡ್ಡಿ, ಗೋವಿಂದರೆಡ್ಡಿ, ಮಾರೆಪ್ಪ, ಜಿ.ಸಿದ್ದಪ್ಪ, ಎಚ್.ಕೆ.ತಿಮ್ಮಪ್ಪ, ಮಮ್ಮದ್‌ಅಲಿ, ಕೆ.ಕ್ರಿಷ್ಣ ಇದ್ದರು. ಇದೇ ಸಂದರ್ಭದಲ್ಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಹಾಗೂ ಜಂಟಿ ಆಹಾರ ನಿರ್ದೇಶಕ ಶ್ರೀಧರ್ ಅವರನ್ನು ಸನ್ಮಾನಿಸಲಾಯಿತು.