ತಮಿಳುನಾಡು ಮತ್ತು ಕರ್ನಾಟಕದ ನಡುವೆ ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಹಲವಾರು ದಶಕಗಳ ಇತಿಹಾಸವಿದೆ. ಪ್ರತೀ ಬಾರಿಯ ಮಳೆಗಾಲದಲ್ಲೂ ಕಾವೇರಿ ನದಿ ನೀರಿಗಾಗಿ ತಮಿಳುನಾಡು, ಕರ್ನಾಟಕದ ಜತೆಗೆ ಕ್ಯಾತೆ ತೆಗೆದು ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ಬಾಗಿಲು ಬಡಿಯುವುದು ಮುಂದುವರಿದಿದೆ. ಕಾವೇರಿ ನ್ಯಾಯ ಮಂಡಳಿಯ ಐ ತೀರ್ಪಿನ ಅನಂತರವೂ ತಮಿಳುನಾಡು ಒಂದಿಲ್ಲೊಂದು ಕಾರಣ ಮುಂದಿಟ್ಟುಕೊಂಡು ಕರ್ನಾಟಕಕ್ಕೆ ಕಿರಿಕ್ ಮಾಡುತ್ತಲೇ ಇದೆ.
ಪ್ರಸಕ್ತ ವರ್ಷದಲ್ಲಿ ಕಾವೇರಿ ನದಿಗೆ ನೀರು ಹರಿದು ಬರುವ ಭಾಗಗಳಲ್ಲಿ ಸರಿಯಾಗಿ ಮಳೆಯೇ ಆಗಿಲ್ಲ. ಅತ್ತ ತಮಿಳುನಾಡು ನೀರಿಗಾಗಿ ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ಮುಂದೆ ಹಠ ಮತ್ತು ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿಕೊಂಡು ಕುಳಿತಿದೆ. ಇದರ ನಡುವೆಯೇ, ಮಂಗಳವಾರ ನಡೆದ ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತೀ ದಿನವೂ 5 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಿದೆ. ಒಂದು ರೀತಿಯಲ್ಲಿ ಇದು ಕರ್ನಾಟಕಕ್ಕೆ ಹಿನ್ನಡೆಯಾದರೂ, ತಮಿಳುನಾಡು ಕೇಳಿದ 24 ಸಾವಿರ ಕ್ಯುಸೆಕ್ ನೀರು ಬಿಡುತ್ತಿಲ್ಲ ಎಂಬುದೇ ಸಮಾಧಾನ.
ಆದರೆ ಕರ್ನಾಟಕ ಸರಕಾರ ಪ್ರಾಧಿಕಾರದ ಆದೇಶ ಪಾಲಿಸುವ ಸ್ಥಿತಿಯಲ್ಲಿ ಇಲ್ಲ. ಇದು ಮಳೆ ಕೊರತೆ ವರ್ಷವಾಗಿದ್ದು, ಈಗಲೂ ಕಾವೇರಿ ನ್ಯಾಯಾಧಿಕರಣದ ಐ ತೀರ್ಪಿನಂತೆ ನೀರು ಬಿಡುಗಡೆ ಮಾಡಲಾಗದು ಎಂದು ರಾಜ್ಯ ಸರಕಾರ ಪಟ್ಟು ಹಿಡಿದಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಮುಂದೆಯೂ ಪ್ರಮಾಣ ಪತ್ರ ಸಲ್ಲಿಕೆ ಮಾಡಲಾಗಿದ್ದು, ನೀರು ಬಿಡುವ ಸ್ಥಿತಿಯಲ್ಲಿ ನಾವಿಲ್ಲ ಎಂದು ಹೇಳಿದೆ. ಇದನ್ನು ಅರಿತೇ ತಮಿಳುನಾಡಿನ ಮಧ್ಯಾಂತರ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಣೆ ಹಾಕದೇ, ವಿಚಾರಣೆಯನ್ನು ಸೆ.1ಕ್ಕೆ ಮುಂದೂಡಿಕೆ ಮಾಡಿದೆ. ಕಾವೇರಿ ವಿಚಾರದಲ್ಲಿ ಪ್ರತೀ ವರ್ಷವೂ ತಮಿಳುನಾಡಿನ ಕಿರಿಕಿರಿಯನ್ನು ಅನುಭವಿಸಿಕೊಂಡು ಬರುತ್ತಿರುವ ಕರ್ನಾಟಕ, ಸಂಕಷ್ಟ ಸೂತ್ರಕ್ಕೆ ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ಮುಂದೆ ಅಹವಾಲು ಸಲ್ಲಿಸುತ್ತಲೇ ಇದೆ. ಸ್ವಾತಂತ್ರ್ಯ ಬರುವುದಕ್ಕಿಂತ ಮುನ್ನವೇ ಈ ವಿಚಾರದಲ್ಲಿ ವಿವಾದ ಶುರುವಾಗಿದ್ದು, ಇದುವರೆಗೆ ಯಾವುದೇ ಪರಿಹಾರ ಕೈಗೊಳ್ಳಲಾಗಿಲ್ಲ. ಸುಪ್ರೀಂ ಕೋರ್ಟ್ ಕೂಡ ಆಗಾಗ್ಗೆ ತೀರ್ಪು ನೀಡಿದೆಯಾದರೂ, ಸಂಕಷ್ಟ ಸೂತ್ರದ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ.
ಮಳೆ ಬರದ ವರ್ಷಗಳಲ್ಲಿ ಕರ್ನಾಟಕ ಕಾವೇರಿ ನದಿಯಿಂದ ನೀರನ್ನು ತಮಿಳುನಾಡಿಗೆ ಹರಿಸಬೇಕೇ ಅಥವಾ ಬೇಡವೇ ಎಂಬ ಜಿಜ್ಞಾಸೆ ಇದೆ. ಒಂದು ವೇಳೆ, ನೀರು ಬಿಟ್ಟರೆ, ರಾಜ್ಯದ ರೈತರ ಹಿತಾಸಕ್ತಿ ಅವಗಣಿಸಿದಂತಾಗುತ್ತದೆ. ಬೆಂಗಳೂರು, ಮೈಸೂರು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ತೊಂದರೆಯುಂಟಾಗುತ್ತದೆ. ಇದಕ್ಕೆ ಬದಲಾಗಿ, ನೀರು ಬಿಡದಿದ್ದರೆ, ಕೋರ್ಟ್, ಪ್ರಾಧಿಕಾರದ ಸಭೆಗಳಿಗೆ ಸುತ್ತಾಡಬೇಕಾಗುತ್ತದೆ.
ಹೀಗಾಗಿ ಸುಪ್ರೀಂ ಕೋರ್ಟ್ ಮುಂದೆ ರಾಜ್ಯ ಸರಕಾರ ಸಂಕಷ್ಟ ಸೂತ್ರದ ಬಗ್ಗೆ ಸಮರ್ಥವಾಗಿ ವಾದ ಮಂಡನೆ ಮಾಡಬೇಕು. ಎಂಥದ್ದೇ ಸನ್ನಿವೇಶದಲ್ಲೂ ಕರ್ನಾಟಕದಿಂದ ನೀರು ಪಡೆದೇ ತೀರುತ್ತೇವೆ ಎಂಬ ತಮಿಳುನಾಡಿನ ವರಸೆಯನ್ನೂ ಬದಲಿಸಬೇಕಾಗಿದೆ. ಇದಕ್ಕೆ ಇರುವ ಒಂದೇ ಮಾರ್ಗ ಸಂಕಷ್ಟ ಸೂತ್ರ ಎಂಬುದನ್ನು ಎಲ್ಲರಿಗೂ ಮನಗಾಣಿಸಬೇಕಾಗಿದೆ.