ಬೆಂಗಳೂರು: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಹೊರತುಪಡಿಸಿ ಬೇರೆ ವಿಶ್ವವಿದ್ಯಾಲಯಗಳಲ್ಲಿ ದೂರಶಿಕ್ಷಣ ವಿಭಾಗ ರದ್ದುಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ದೂರ ಶಿಕ್ಷಣ ಬೇರೆ ವಿವಿಗಳಲ್ಲಿ ಇರುವುದಿಲ್ಲ. ಸಚಿವ ಸಂಪುಟದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಮೈಸೂರಿನ ಮುಕ್ತ ವಿಶ್ವವಿದ್ಯಾಲಯ ಹೊರತು ಪಡಿಸಿ ಇತರೆ ವಿಶ್ವವಿದ್ಯಾಲಯಗಳಲ್ಲಿ ದೂರಶಿಕ್ಷಣ ಇರುವುದಿಲ್ಲ ಎಂದರು.
ಬೆಂಗಳೂರು ಕೇಂದ್ರ ವಿವಿಗೆ ಬೆಂಗಳೂರು ಸಿಟಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲು, ಬೆಂಗಳೂರು ಸೆಂಟ್ರಲ್ ಕಾಲೇಜು ವ್ಯಾಪ್ತಿಯ ಸರ್ಕಾರಿ ವಿಜ್ಞಾನ ಕಾಲೇಜು ಬೇರ್ಪ ಡಿಸಿ ವಿಶ್ವವಿದ್ಯಾಲಯ ಸ್ವಾಯತ್ತತೆ ನೀಡಲು ಸಂಪುಟ ತೀರ್ಮಾನಿಸಿದೆ ಎಂದು ಹೇಳಿದರು. ರಾಜ್ಯದ 8 ಜಿಲ್ಲೆಗಳ 47 ತಾಲೂಕುಗಳಲ್ಲಿರುವ 1307 ಆರೋಗ್ಯ ಉಪಕೇಂದ್ರ, 1694 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಕ್ಷೇಮ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಸಂಪುಟ ತೀರ್ಮಾನಿಸಿದೆ. ಕೇಂದ್ರ ಸರ್ಕಾರ ಇದಕ್ಕಾಗಿ 12.62 ಕೋಟಿ ರೂ. ಅನುದಾನ ನೀಡಲಿದೆ ಎಂದು ತಿಳಿಸಿದರು.
ಹಾಸನ ಹಾಗೂ ಸಿಂಧಗಿಯಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದ್ದ ತೋಟಗಾರಿಕಾ ಕಾಲೇಜು ಸದ್ಯಕ್ಕೆ ಮುಂದೂಡಲು ಸಂಪುಟ ತೀರ್ಮಾನಿಸಿದೆ. ಹಾಲಿ ಇರುವ ತೋಟಗಾರಿಕೆ ಕಾಲೇಜು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಮೂಲಸೌಕರ್ಯ ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಬೆಂಗಳೂರಿನಲ್ಲಿ 86.75 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಗ್ಯಾಲರಿ ಸ್ಥಾಪನೆಗೆ ಸಂಪುಟ ಒಪ್ಪಿಗೆ ನೀಡಿದ್ದು ಇದಕ್ಕಾಗಿ ಸರ್ಕಾರ 20 ಕೋಟಿ ರೂ. ನೀಡಲಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಚಿಕ್ಕಬೇಗೂರಿನ ಸಂಸ್ಕರಣಾಕೇಂದ್ರದ 15 ದಶಲಕ್ಷ ಲೀಟರ್, ಹುಳಿಮಾವು ಸಂಸ್ಕರಣಾ ಕೇಂದ್ರದಿಂದ 10 ದಶಲಕ್ಷ ಲೀಟರ್ ತ್ಯಾಜ್ಯ ನೀರು ಕೆ.ಸಿ.ವ್ಯಾಲಿ ಯೋಜನೆಯಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸಲು 40 ಕೋಟಿ ರೂ. ಮೊತ್ತದ ಆಂದಾಜಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು. ಸಿಎಆರ್, ಡಿಎಎಆರ್, ಕೆಎಸ್ ಆರ್‌ಪಿ, ಕೆಎಸ್‌ಐಎಸ್‌ಎಫ್ನ ಪೊಲೀಸ್ ಪೇದೆ, ಅಧಿಕಾರಿಗಳು ಸಿವಿಲ್ ಪೊಲೀಸ್ ನೇಮಕಾತಿಗೆ ಅರ್ಜಿ ಸಲ್ಲಿಸಿದರೆ ಶೇ.10 ಕೃಪಾಂಕ ಕೊಡಲು ಸಂಪುಟದಲ್ಲಿ ತೀರ್ಮಾನ ಮಾಡ ಲಾಗಿದೆ ಎಂದು ಹೇಳಿದರು.
ಕೆಪಿಎಸ್‌ಸಿಗೆ ಅಧಿಕಾರ ಕಟ್: ಕೆಪಿಎಸ್‌ಸಿ ಮೂಲಕ ಆಯ್ಕೆಯಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಮುಂಬಡ್ತಿ ನೀಡುವಾಗ ಅಥವಾ ಕರ್ತವ್ಯ ನಿರ್ಲಕ್ಷ್ಯ ಸೇರಿ ಇತರೆ ತಪ್ಪು ಮಾಡಿದಾಗ ಶಿಕ್ಷೆ ವಿಧಿಸುವ ಸಂಬಂಧ ಕೆಪಿಎಸ್‌ಸಿ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ವ್ಯವಸ್ಥೆ ಬದಲಿಸಿ ಸರ್ಕಾರವೇ ನೇರವಾಗಿ ಕ್ರಮ ಕೈಗೊಳ್ಳುವ ಅಧಿಕಾರ ಇಟ್ಟುಕೊಳ್ಳಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಅದೇ ರೀತಿ 1998ರ ಬ್ಯಾಚ್‌ನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಆಯ್ಕೆಯಾಗಿ ನ್ಯಾಯಾಲಯದ ತೀರ್ಮಾನದಂತೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಯ ವೇತನ ಭತ್ಯೆ ನೀಡಲು ಸಂಪುಟ ತೀರ್ಮಾನಿಸಿದೆ.