Advertisement

ನಶಿಸುತ್ತಿರುವ ಸಾಂಪ್ರದಾಯಿಕ ಕಲೆ

11:19 AM May 03, 2018 | |

ಬೆಂಗಳೂರು: ಅಸಕ್ತಿ ಹಾಗೂ ಪ್ರೊತ್ಸಾಹದ ಕೊರತೆಯಿಂದ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಸಾಂಪ್ರದಾಯಿಕ ಕಲೆಗಳು ನಶಿಸಿ ಹೋಗುತ್ತಿವೆ ಎಂದು ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ಕೆಇಆರ್‌ಸಿ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಬುಧವಾರ ಚಿತ್ರಕಲಾ ಮಹಾವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿರುವ ಗಂಜೀಫಾ ಕಲೆ ಕುರಿತ ಕಾರ್ಯಗಾರ, ಪ್ರದರ್ಶನ ಹಾಗೂ ವಿಚಾರ ಸಂಕಿರಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮರೆಯಾಗುತ್ತಿರುವ ಕಲೆಗಳಲ್ಲಿ ಗಂಜೀಫಾ ಕಲೆಯೂ ಒಂದಾಗಿದೆ. ಮೊಘಲರ ಕಾಲದಲ್ಲಿ ಆಟದ (ಇಸ್ಪೀಟ್‌) ಎಲೆಗಳ ಮೇಲೆ ವಿವಿಧ ಬಗೆಯ ಗುರುತಿನ ಚಿತ್ರಗಳನ್ನು ಬಿಡಿಸುವ ಮೂಲಕ ಈ ಕಲೆಯನ್ನು ಬಳಸಲಾಗುತ್ತಿತ್ತು. ಆದರೆ, ಈಗ ಇದೇ ಇಸ್ಪೀಟ್‌ ಆಟದ ಎಲೆಗಳಲ್ಲಿ ರಾಜ ಹಾಗೂ ರಾಣಿಯ ಎರಡು ಚಿತ್ರಗಳು ಮಾತ್ರವೇ ಉಳಿದಿವೆ ಎಂದರು.

ಇಂದಿನ ಜನರು ಕಲೆಗಳಿಂದ ದೂರ ಉಳಿಯುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ನಿರಾಸಕ್ತಿಯೇ ಆಗಿದೆ. ಈ ನಿರಾಸಕ್ತಿ
ಮುಂದುವರಿದರೆ ಮುಂದೊಂದು ದಿನ ಕಲೆಗಳು ಕಲೆಗಳನ್ನು ಹುಡುಕಿಕೊಂಡು ವಸ್ತು ಸಂಗ್ರಹಾಲಯಕ್ಕೆ ಹೋಗುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಗೃಹಿಣಿಯರು ತಮ್ಮ ಬಿಡುವಿನ ಸಮಯದಲ್ಲಿ ಕರಕುಶಲಕಲೆ ಹಾಗೂ ಇತರೆ ಕಲೆಗಳನ್ನು
ಹವ್ಯಾಸವಾಗಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಲಾವಿದೆ ವಿಮಲಾ ರಂಗಚಾರ್‌ ಮಾತನಾಡಿ, ಇಂದು ಸಾಂಪ್ರದಾಯಿಕ ಕಲೆಗಳ ಕುರಿತು ಮಕ್ಕಳಿಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಮುಖ್ಯವಾಗಿ ಶಾಲೆ ಹಾಗೂ ಮನೆಗಳಲ್ಲಿ ಮಕ್ಕಳಿಗೆ ವಿವಿಧ ಕಲೆಯ ಬಗ್ಗೆ ತಿಳಿಸಿ ಆಸಕ್ತಿ ಮೂಡಿಸಿದಾಗ ನಮ್ಮ ಕಲೆಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.

ಕರ್ನಾಟಕ ಚಿತ್ರಕಲಾ ಪರಿಷತ್‌ ಪ್ರಧಾನ ಕಾರ್ಯದರ್ಶಿ ಪ್ರೊ. ಎಂ.ಜೆ.ಕಮಲಾಕ್ಷಿ ಮಾತನಾಡಿ, ಗಂಜೀಫಾ ಕಲೆಯ ಪುನರು ಜ್ಜೀವನ ಹಾಗೂ ಪುನಶ್ಚೇತನದ ಉದ್ದೇಶದಿಂದ ಈ ಕಾರ್ಯಗಾರ ಹಮ್ಮಿಕೊಂಡಿದ್ದೇವೆ. ಮೇ 8ರವರೆಗೆ ನಡೆಯುವ ಕಾರ್ಯ ಗಾರದಲ್ಲಿ ಗಂಜೀಫಾ ಕುರಿತು ವಿವಿಧ ಉಪನ್ಯಾಸ ಹಾಗೂ ಪಾರಂಪರಿಕ ಆಟಗಳು ಇರುತ್ತವೆ. ಅನೇಕ ಕಲಾವಿದರು ಸ್ಥಳ ದಲ್ಲಿಯೇ ಚಿತ್ರ ಬಿಡಿಸುತ್ತಾರೆ. ಆಸಕ್ತರು ಅದನ್ನು ಕೊಂಡುಕೊಳ್ಳ ಬಹುದು ಅಥವಾ ಮುಂಗಡ ಕಾಯ್ದಿರಿಸಬಹುದು ಎಂದರು. ಕಾರ್ಯಕ್ರಮದಲ್ಲಿ ವಿವಿಧ ರಾಜ್ಯದ ಕಲಾವಿದರು ತಮ್ಮ ಚಿತ್ರಬರಹ ಹಾಗೂ ಸಂಗ್ರಹಗಳ ಮೂಲಕ ಭಾಗವಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next