Advertisement
ಉತ್ತರ ಭಾರತದಲ್ಲಿ ಪಾನ್ ಮಸಾಲ ಕ್ಕಾಗಿ ಮಂಗಳೂರು ಚಾಲಿ ಅಡಿಕೆಗೆ ಸಾಕಷ್ಟು ಬೇಡಿಕೆ ಇದೆ. ಆದರೆ ಮೂರು ವರ್ಷ ಗಳಿಂದ ಕೊಳೆರೋಗ ಮತ್ತು ವಾತಾವರಣದ ಪ್ರತಿಕೂಲ ಪರಿಣಾಮದಿಂದ ದ. ಭಾರತದಲ್ಲಿ ಅಡಿಕೆ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ. ಹೀಗಾಗಿ ಪೂರೈಕೆ ಕೊರತೆಯಾಗಿತ್ತು. ಇದರಿಂದ ಕಾನ್ಪುರ, ಕಟಕ್, ರಾಜ್‌ಕೋಟ್, ಅಹ್ಮದಾಬಾದ್ ಸಹಿತ ಉ. ಭಾರತದ ದಾಸ್ತಾನು ಕೇಂದ್ರಗಳಲ್ಲಿ ಅಡಿಕೆ ದಾಸ್ತಾನು ಕರಗಿದೆ. ಇದು ಧಾರಣೆ ಏರಿಕೆ ಸಾಧ್ಯತೆಗೆ ಒಂದು ಕಾರಣ.
ಈ ಹಿಂದೆ ಬರ್ಮಾ, ಬಾಂಗ್ಲಾ ಮೊದಲಾದೆಡೆಯಿಂದ ಅಕ್ರಮವಾಗಿ ಪೂರೈಕೆ ಆಗುತ್ತಿದ್ದ ಅಡಿಕೆ ಈಗ ಶೇ.90ರಷ್ಟು ನಿಯಂತ್ರಣಕ್ಕೆ ಬಂದಿರುವುದು ದಾಸ್ತಾನು ಕೊರತೆಯಾಗಲು ಮತ್ತೂಂದು ಕಾರಣ. ಬಿಗು ಭದ್ರತೆಯ ಕಾರಣ ನುಸುಳುಕೋರರು ಈಗ ಹಿಂದೇಟು ಹಾಕುತ್ತಿದ್ದಾರೆ. ಶ್ರೀಲಂಕಾವು ಹೊರದೇಶಗಳಿಂದ ನೇರ ಆಮದು ಮತ್ತು ಮರು ರಫ್ತಿಗೆ ನಿಷೇಧ ಹೇರಿರುವುದರಿಂದ ಕಲಬೆರಕೆ, ಕಳ್ಳದಾರಿಯ ಮೂಲಕ ವಿಯೆಟ್ನಾಂ ಮತ್ತು ಬಾಂಗ್ಲಾಗಳಿಂದ ಆಮದಾಗುತ್ತಿದ್ದ ಅಡಿಕೆಗೂ ಕಡಿವಾಣ ಬಿದ್ದಿದೆ. ಇವೆಲ್ಲದರ ಪರಿಣಾಮವಾಗಿ ದಕ್ಷಿಣ ಭಾರತದ ಅಡಿಕೆಗೆ ಬೇಡಿಕೆ ಕುದುರಲಿದೆ. ಇಲ್ಲದಿದ್ದರೆ ಅಲ್ಲಿನ ಮಾರುಕಟ್ಟೆ ಕುಸಿತ ಕಂಡು ವ್ಯವಹಾರ ಸ್ಥಗಿತವಾಗುವುದು ಎರಡನೇ ಕಾರಣ. ಇಳಿಕೆಯ ತಂತ್ರಗಾರಿಕೆ
ಇರಾನ್ -ಅಮೆರಿಕ ಯುದ್ಧ ಸಂಭವದ ನೆಪ ಒಡ್ಡಿ ಅಡಿಕೆ ಮಾರುಕಟ್ಟೆಯಲ್ಲಿ ಹಿಂಜರಿತ ಉಂಟುಮಾಡುವ ತಂತ್ರ ವ್ಯಾಪಾರಿಗಳಿಂದ ನಡೆಯುತ್ತಿದೆ. ಯುದ್ಧವಾದರೆ ಧಾರಣೆ ಇನ್ನಷ್ಟು ಇಳಿಯಲಿದೆ ಎಂದು ಪ್ರಚಾರ ಮಾಡಿ ಈಗಿನ ಧಾರಣೆಗೆ ಅಡಿಕೆ ಖರೀದಿಸಿ ದಾಸ್ತಾನು ಮಾಡಿ ಲಾಭ ಗಳಿಸುವ ಪ್ರಯತ್ನ ಇದರ ಹಿಂದಿದೆ. ವಾಸ್ತವವಾಗಿ ಭಾರತದ ಅಡಿಕೆ ಮಾರುಕಟ್ಟೆಗೂ ಇರಾನ್, ಅಮೆರಿಕಕ್ಕೂ ಯಾವುದೇ ಸಂಬಂಧ ಇಲ್ಲ. ಅಡಿಕೆ ಖರೀದಿ ರಾಜ್ಯಗಳಾದ ಗುಜರಾತ್, ರಾಜಸ್ಥಾನಗಳಲ್ಲಿ ಈ ತಿಂಗಳು ಯಾವುದೇ ಶುಭ ಕಾರ್ಯಗಳು ನಡೆಯುತ್ತಿಲ್ಲವಾದ್ದರಿಂದ ಸದ್ಯ ಧಾರಣೆ ಸ್ಥಿರವಾಗಿದೆ. ಮುಂದಿನ ತಿಂಗಳಿಂದ ಬೇಡಿಕೆ ಹೆಚ್ಚಾಗಿ ಧಾರಣೆ ಏರಿಕೆ ಕಾಣಲಿದೆ.
Related Articles
ದಾಸ್ತಾನು ಕುಸಿತ ಮತ್ತು ವ್ಯಾಪಾರಸ್ಥರ ಧಾರಣೆ ಇಳಿಕೆಯ ತಂತ್ರ ಅರಿತಿರುವ ಬೆಳೆಗಾರರು ಅಡಿಕೆ ಮಾರಾಟ ಮಾಡುವ ಆತುರಕ್ಕೆ ಕಡಿವಾಣ ಹಾಕಿದ್ದಾರೆ. ಬೇಡಿಕೆ ಹೆಚ್ಚಲಿರುವ ಅಂಶವನ್ನು ಅವರು ಗಮನಿಸಿದ್ದು, ಧಾರಣೆ ಏರಿದ ಮೇಲಷ್ಟೇ ಮಾರಾಟ ಮಾಡಲುದ್ದೇಶಿಸಿದ್ದಾರೆ. ಈ ಜಾಣತನದ ನಡೆಯಿಂದಾಗಿ ಮಾರುಕಟ್ಟೆಯಲ್ಲಿ ಅಡಿಕೆ ಪೂರೈಕೆ ಮತ್ತಷ್ಟು ಕುಸಿತ ಕಂಡು ಧಾರಣೆ ಏರಿ ಕೃಷಿಕರಿಗೆ ಲಾಭವಾಗಲಿದೆ. ಮಾರುಕಟ್ಟೆ ಮತ್ತು ಕೃಷಿ ತಜ್ಞರ ಮಾಹಿತಿ ಪ್ರಕಾರ 2020ರ ಮೊದಲ ಭಾಗದಲ್ಲಿ ಬೆಳೆಗಾರರಿಗೆ ಧಾರಣೆ ಏರಿಕೆಯ ಸಿಹಿ ಸುದ್ದಿ ಸಿಗಲಿದೆ.
Advertisement
ಧಾರಣೆ ಇಳಿಸುವ ತಂತ್ರಈಗ ಅಡಿಕೆ ಧಾರಣೆ ಕೊಂಚ ಏರುಗತಿಯಲ್ಲಿದೆ. ಯುದ್ಧದ ನೆಪ ಹೇಳಿ ಧಾರಣೆ ತಗ್ಗಿಸುವ ಪ್ರಯತ್ನ ಕೂಡ ನಡೆದಿದೆ. ಮುಂದೆ ಧಾರಣೆ ಇಳಿಕೆ ಆಗಲಿದೆ ಎಂದು ಹೇಳಿ ಈಗಿನ ಧಾರಣೆಯಲ್ಲಿ ಅಡಿಕೆ ಖರೀದಿಸಲಾಗುತ್ತಿದೆ. ಮುಂದೆ ಧಾರಣೆ ಏರುವ ಕಾರಣಕ್ಕಾಗಿ ಈ ತಂತ್ರ ಹೆಣೆಯಲಾಗಿದ್ದು, ರೈತರು ಇದನ್ನು ಅರಿತುಕೊಂಡು ಪ್ರತಿತಂತ್ರ ರೂಪಿಸಿಕೊಂಡಿದ್ದಾರೆ.
-ಮಹೇಶ್ ಸುಳ್ಯ
ಅಡಿಕೆ ಬೆಳೆಗಾರ – ಕಿರಣ್ ಪ್ರಸಾದ್ ಕುಂಡಡ್ಕ