ನವದೆಹಲಿ: ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಬಳಿಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ವಿಸರ್ಜಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಸೋಮವಾರ ಉತ್ತರಪ್ರದೇಶ ಕಾಂಗ್ರೆಸ್‌ನ ಜಿಲ್ಲಾ ಸಮಿತಿಗಳನ್ನೂ ವಿಸರ್ಜಿಸಿದೆ. ಅಷ್ಟೇ ಅಲ್ಲ, ಚುನಾವಣೆ ವೇಳೆ ಕೆಲವು ನಾಯಕರು ಅಶಿಸ್ತು ತೋರಿರುವ ಕುರಿತು ಬಂದಿರುವ ದೂರುಗಳನ್ನು ಪರಿಶೀಲಿಸಲು ಮೂವರು ಸದಸ್ಯರ ಸಮಿತಿಯನ್ನೂ ರಚಿಸಿದೆ.
ಪೂರ್ವ ಉತ್ತರಪ್ರದೇಶದ ಉಸ್ತುವಾರಿ ಹೊತ್ತಿರುವ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹಾಗೂ ಪಶ್ಚಿಮ ಉ.ಪ್ರದೇಶದ ಉಸ್ತುವಾರಿ ಹೊತ್ತಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಲ್ಲಿಸಿರುವ ಪ್ರಸ್ತಾಪವನ್ನು ಸ್ವೀಕರಿಸಿ, ಪಕ್ಷದ ಘಟಕದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.
Advertisement
ಇದೇ ವೇಳೆ, ಉ.ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಚುನಾವಣಾ ಸಿದ್ಧತೆಯನ್ನು ನೋಡಿಕೊಳ್ಳಲು ಇಬ್ಬರು ಸದಸ್ಯರ ಸಮಿತಿಯನ್ನು ನೇಮಿಸಲಾಗಿದೆ.