ನವದೆಹಲಿ: ಕಾಂಗ್ರೆಸ್ ಮತ್ತು ಜೆಡಿಎಸ್‌ನ 10 ಅತೃಪ್ತ ಶಾಸಕರು ಈಗ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ತಮ್ಮ ರಾಜೀನಾಮೆಯನ್ನು ಉದ್ದೇಶಪೂರ್ವಕವಾಗಿ ಸ್ಪೀಕರ್ ಸಮ್ಮತಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅತೃಪ್ತ ಶಾಸಕರ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದಿಸಿದ್ದು, ಈ ಕುರಿತು ತ್ವರಿತ ವಿಚಾರಣೆಗೆ ಮನವಿ ಮಾಡಿದ್ದಾರೆ.
ತುರ್ತು ವಿಚಾರಣೆ ಕೈಗೆತ್ತಿಕೊಳ್ಳಬೇಕೇ ಎಂಬುದನ್ನು ಗುರುವಾರ ಅಂದರೆ ಜುಲೈ 11 ರಂದು ನಿರ್ಧರಿಸುವುದಾಗಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ತಿಳಿಸಿದ್ದಾರೆ. ಬುಧವಾರವೇ ಈ ಬಗ್ಗೆ ವಿಚಾರಣೆ ನಡೆಸಬೇಕು ಎಂದು ವಕೀಲ ರೋಹಟಗಿ ಆಗ್ರಹಿಸಿದ್ದರು.
ಶಾಸಕರು ಈಗಾಗಲೇ ವಿಧಾನಸಭೆಗೆ ರಾಜೀನಾಮೆ ನೀಡಿ, ಹೊಸದಾಗಿ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ಆದರೆ ಇವರ ರಾಜೀನಾಮೆಗೆ ಸಮ್ಮತಿ ನೀಡದೇ ಸ್ಪೀಕರ್ ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ. ಬಹುಮತ ಕೊರತೆ ಎದುರಿಸುತ್ತಿರುವ ಸರ್ಕಾರವನ್ನು ಸ್ಪೀಕರ್ ರಕ್ಷಣೆ ಮಾಡುತ್ತಿದ್ದಾರೆ ಎಂದು ರೋಹಟಗಿ ವಾದಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ವಿಚಾರವನ್ನು ನಾವು ಪರಿಶೀಲಿಸುತ್ತೇವೆ ಎಂದಿತು. ಈ ಪ್ರಕರಣದಲ್ಲಿ ಸಮಯ ಅತ್ಯಂತ ಪ್ರಮುಖವಾಗಿದ್ದು ತುರ್ತು ವಿಚಾರಣೆ ನಡೆಸಬೇಕು. ರಾಜೀನಾಮೆ ಸ್ವೀಕರಿಸುವಂತೆ ಸ್ಪೀಕರ್‌ಗೆ ನಿರ್ದೇಶಿಸಬೇಕು ಎಂದು ಕೋರ್ಟ್‌ಗೆ ವಿನಂತಿಸಲಾಗಿದೆ.
ಅಲ್ಲದೆ, ತಮ್ಮನ್ನು ಅನರ್ಹಗೊಳಿಸದಿರುವಂತೆ ಸ್ಪೀಕರ್‌ಗೆ ಸೂಚಿಸಬೇಕೆಂದೂ ಅರ್ಜಿಯಲ್ಲಿ ವಿನಂತಿಸಲಾಗಿದೆ. ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಕಾಂಗ್ರೆಸ್ ವಿನಂತಿ ಮಾಡಿದೆ. ಅನರ್ಹಗೊಳಿಸುವುದು ಅಕ್ರಮವಾಗಿದ್ದು, ಇದಕ್ಕೆ ಸ್ಪೀಕರ್‌ಗೆ ಅವಕಾಶ ನೀಡಬಾರದು ಎಂದು ಕೋರ್ಟ್‌ಗೆ ಅತೃಪ್ತ ಶಾಸಕರು ಮೊರೆಯಿಟ್ಟಿದ್ದಾರೆ.