ಹುಮನಾಬಾದ: ಪುರಸಭೆ ಸದಸ್ಯರು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು. ಆಡಳಿತ ವ್ಯವಸ್ಥೆ ಸರಿಪಡಿಸಿಕೊಳ್ಳುವಂತೆ ಅನೇಕ ಬಾರಿ ಸೂಚಿಸಿದರೂ ಅಧಿಕಾರಿಗಳು ಸೂಕ್ತ ಕೆಲಸ ನಿರ್ವಹಿಸಿಲ್ಲ. ಇಲ್ಲಿನ ಆಡಳಿತ ಕುರಿತು ಸಿಬಿಐ, ಸಿಐಡಿ ಮೂಲಕ ತನಿಖೆ ನಡೆಸುವ ಸ್ಥಿತಿ ಎದುರಾಗುತ್ತಿದೆ ಎಂದು ಶಾಸಕ ರಾಜಶೇಖರ ಪಾಟೀಲ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆ ಎದುರಿಗೆ ಮಂಗಳವಾರ ಏರ್ಪಡಿಸಿದ್ದ 2021-22ನೇ ಸಾಲಿನ ಡಾ| ಬಿ.ಆರ್. ಅಂಬೇಡ್ಕರ್ ಹಾಗೂ ವಾಜಪೇಯಿ ನಗರ ವಸತಿ ಯೋಜನೆಗೆ ಆಯ್ಕೆಗೊಂಡಿರುವ ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಹಾಗೂ 2018-19ನೇ ಸಾಲಿನ ಎಸ್‌ಎಫ್‌ಸಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿನ ಯುಜಿಡಿ ಕಾಮಗಾರಿ, ಲೇಔಟ್ ಗಳ ನಿವೇಶನ ಬಿಡುಗಡೆ, ಸರ್ಕಾರಿ ಭೂಮಿ ಕಬಳಿಕೆ, ಸಿಎ ನಿವೇಶ, ಒಂದು ಕೆಲಸಕ್ಕೆ ಎರೆಡು ಬಿಲ್ ಪಾವತಿ ಸೇರಿದಂತೆ ಅನೇಕ ಆರೋಪಗಳು ಸದಸ್ಯರೇ ಮಾಡುತ್ತಿದ್ದಾರೆ. ವಿವಿಧ ಲೇಔಟ್‌ಗಳ ಅನುಮೋದನೆ ನೀಡಿದರೆ ಪುರಸಭೆಗೆ ಅನುದಾನ ಬರುತ್ತೆ ಎಂದು ಕೆಲ ಸದಸ್ಯರು ಹೇಳುತ್ತಿದ್ದಾರೆ. ಹಾಗಾದರೆ ಈ ಹಿಂದೆ ಬಂದಿರುವ ಅನುದಾನ ಎಲ್ಲಿ ಖರ್ಚು ಆಯ್ತು ಎಂದು ಪ್ರಶ್ನಿಸಿದ ಅವರು, ಸೆ. 6ರಂದು ಪುರಭೆಯಲ್ಲಿ ಸಾಮಾನ್ಯ ಸಭೆ ನಡೆಯಲ್ಲಿದ್ದು, ವಿವಿಧ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಲಕ್ಷ್ಮೀ ಪುತ್ರ ಮಾಳಗೆ ಮಾತನಾಡಿ, ನಿವೇಶನ ಮಂಜೂರು ಮಾಡಲು ಕೆಲ ಸದಸ್ಯರು 50 ಸಾವಿರ ರೂ. ಹಣ ಪಡೆದುಕೊಂಡಿದ್ದಾರೆ ಎಂದು ಬಹಿರಂಗವಾಗಿ ಆರೋಪಿಸಿದರು. ಈ ಕುರಿತು ಮಾತನಾಡಿದ ಶಾಸಕರು, ಅಧಿಕೃತವಾಗಿ ಮಾಹಿತಿ ನೀಡಿ, ಸುಮ್ಮನೆ ಆರೋಪ ಮಾಡುವುದು ಬೇಡ. ಒಂದು ವೇಳೆ ಹಾಗೆ ನಡೆದಿದ್ದರೆ ಅಂತಹ ಫಲಾನುಭವಿಗಳ ಹೆಸರು ಪಟ್ಟಿಯಿಂದ ಕೈಬಿಡಲಾಗುವುದು ಎಂದು ತಿಳಿಸಿದರು.
ಗ್ರಾಪಂ, ಪುರಸಭೆ, ತಾಪಂ, ಜಿಪಂ ವ್ಯಾಪ್ತಿಯ ಜನ ಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಕೆಲಸಗಳು ಸೂಕ್ತವಾಗಿ ನಿಭಾಯಿಸಬೇಕು. ಎಲ್ಲ ಕಡೆಗಳಲ್ಲಿ ಶಾಸಕರೇ ನಿಗಾವಹಿಸಲು ಸಾಧ್ಯವಾಗುವುದಿಲ್ಲ. ನಾನು ಎಲ್ಲ ಸದಸ್ಯರ ಅಭಿಪ್ರಾಯಗಳು ಪಡೆದುಕೊಂಡು ಫಲಾನುಭವಿಗಳ ಆಯ್ಕೆಗೆ ಸಹಕಾರ ನೀಡಿದ್ದೇನೆ. ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದರು.
ಈ ಸಂದರ್ಭದಲ್ಲಿ ವಿವಿಧ ವಸತಿ ಯೋಜನೆ ಫಲಾನುಭವಿಗಳಿಗೆ ಮನೆ ನಿರ್ಮಾಣದ ಆದೇಶ ಪತ್ರ ಹಾಗೂ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು. ಅಲ್ಲದೆ, ನೂತನ ಪುರಸಭೆ ಅಧ್ಯಕ್ಷೆ ನೀತು ಮಲ್ಲಿಕಾರ್ಜುನ ಶರ್ಮಾ ಅವರ ಕೋಣೆಯನ್ನು ಶಾಸಕ ರಾಜಶೇಖರ ಪಾಟೀಲ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ಉಪಾಧ್ಯಕ್ಷೆ ಸತ್ಯವತಿ ಮಠಪತಿ, ತಹಶೀಲ್ದಾರ್ ಪ್ರದೀಪಕುಮಾರ, ಸದಸ್ಯರಾದ ಅಪ್ಸರ್ ಮಿಯ್ನಾ, ಅಬ್ದುಲ್ ಗೋರೆಮಿಯ್ನಾ, ವೀರೇಶ ಸೀಗಿ, ಎಸ್‌ಎ ಬಾಸಿದ್, ಅನಿಲ ಪಲ್ಲರಿ, ಗಿರೀಶ ಪಾಟೀಲ, ರಮೇಶ ಕಲ್ಲೂರ್, ಸುನೀಲ ಪಾಟೀಲ ಸೇರಿದಂತೆ ಇತರೆ ಸದಸ್ಯರು ಇದ್ದರು.