Advertisement
ಸೋಮವಾರ ಬಿಎಸ್‌ವೈ ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕರಾವಳಿ ಭಾಗದ ಶಾಸಕರ ಸಭೆ ನಡೆಸಿದ್ದರು. ಈ ವೇಳೆ ಯಡಿಯೂರಪ್ಪ ಅವರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಮತ್ತು ಆಡಳಿತದಲ್ಲಿ ಇತರರ ಹಸ್ತಕ್ಷೇಪ ಹೆಚ್ಚಾಗುತ್ತಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ, ಕರುಣಾಕರ ರೆಡ್ಡಿ ಸೇರಿದಂತೆ ಕೆಲವು ಹಿರಿಯ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಕರಾವಳಿ ಭಾಗದ ಶಾಸಕರು ನಾವು ಸರ್ಕಾರಕ್ಕೆ ಮುಜುಗರ ತರುವುದಿಲ್ಲ, ನಮ್ಮನ್ನು ನಿರ್ಲಕ್ಷಿಸಬೇಡಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
Related Articles
Advertisement
ರೆಡ್ಡಿ ಆಕ್ಷೇಪ: ಬೆಳಗ್ಗೆ ಕಲ್ಯಾಣ ಕರ್ನಾಟಕ ಭಾಗದ ಶಾಸಕರ ಪ್ರತ್ಯೇಕ ಸಭೆ ನಡೆಸಿದ್ದು, ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಸ್ಥಳೀಯವಾಗಿ ನಾಮ ನಿರ್ದೇಶನ ಮಾಡುವಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ ವಲಸೆ ಬಂದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕರುಣಾಕರ ರೆಡ್ಡಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ರೇಣುಕಾಚಾರ್ಯ ವರ್ಸಸ್ ಯತ್ನಾಳ್: ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರೇಣುಕಾಚಾರ್ಯ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದೆ. ಬಸನಗೌಡ ಪಾಟೀಲ್ ಅವರು ಮಾತನಾಡುವ ವೇಳೆ ರೇಣುಕಾಚಾರ್ಯ ಮಧ್ಯಪ್ರವೇಶಕ್ಕೆ ಯತ್ನಿಸಿದ್ದಾರೆ. ಆಗ, ನಾನು ಮಾತನಾಡುವಾಗ ನೀನು ಮಾತನಾಡಬೇಡ, ನಿನ್ನ ಅಭಿಪ್ರಾಯ ಏನಿದೆ ಅದನ್ನು ನೀನು ಹೇಳು ಎಂದು ಯತ್ನಾಳ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಸಿಎಂ ಬಗ್ಗೆ ಮಾತಾಡುವಾಗ ನೀವು ನೋಡಿಕೊಂಡು ಮಾತಾಡಿ, ಹಗುರವಾಗಿ ಮಾತಾಡುವುದು ಬೇಡ. ಪದೇ ಪದೆ ಅವರ ಕುಟುಂಬ ದವರ ಹೆಸರು ಯಾಕೆ ಹೇಳುತ್ತೀರಿ. ಇಲ್ಲಿ ಅಭಿವೃದ್ಧಿ ಬಗ್ಗೆ ಅಷ್ಟೇ ಮಾತಾಡಿ. ನಿಮ್ಮದು ಬೇರೆ ಏನಿದ್ದರೂ ಮನೆಗೆ ಹೋಗಿ ಮಾತಾಡಿ ಎಂದು ಯತ್ನಾಳ್‌ಗೆ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ ಎಂದು ಹೇಳಲಾಗಿದೆ.
ಶಾಸಕರ ಸಂತಸ: ಸಿಎಂ ಬಿಎಸ್‌ವೈ ಶಾಸಕರ ಸಭೆ ಕರೆದಿರುವುದಕ್ಕೆ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ವರ್ಷಾರಂಭದಿಂದಲೂ ಕೊರೊನಾ ಹಿನ್ನೆಲೆ ಕುಡಿಯುವ ನೀರು, ರಸ್ತೆ ಕಾಮಗಾರಿ ಸೇರಿ ಸಣ್ಣ ಪುಟ್ಟ ಯೋಜನೆ ಗಳಿಗೂ ಅನುದಾನವಿಲ್ಲದೆ ಕಷ್ಟವಾಗಿತ್ತು. ಈ ಬಗ್ಗೆ ಸಮಸ್ಯೆ ಹೇಳಿಕೊಳ್ಳಲು ಅವಕಾಶ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಕೆಲವು ಶಾಸಕರು ಸಂತಸ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಂಕಷ್ಟದಿಂದ ಆರ್ಥಿಕ ತೊಂದರೆಯುಂಟಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿದ್ದು, ಹಣಕಾಸಿನ ಲಭ್ಯತೆ ನೋಡಿಕೊಂಡು ಅನುದಾನ ಬಿಡುಗಡೆ ಮಾಡಲಾಗುವುದು. ಇನ್ನು ಮುಂದೆ ಅಭಿವೃದ್ಧಿ ವೇಗ ಹೆಚ್ಚಿಸಲು ಪ್ರತಿ 3 ತಿಂಗಳಿಗೊಮ್ಮೆ ಶಾಸಕರ ಸಭೆ ಕರೆದು ಚರ್ಚಿಸುವ ಭರವಸೆಯನ್ನು ಶಾಸಕರಿಗೆ ಸಿಎಂ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೇಂದ್ರ ಶಿಕ್ಷಣ ನೀತಿಯಿಂದ ಪ್ರಾದೇಶಿಕ ಭಾಷೆಗೆ ಬಲ: ಸುರೇಶ್ ಕುಮಾರ್
ಯತ್ನಾಳ್‌ಗೆ ಸಿಎಂ ಪಾಠ
“ನಿಮ್ಮದು ಏನಾದರೂ ಸಮಸ್ಯೆ ಇದ್ದರೆ ನೇರವಾಗಿ ನನ್ನ ಬಳಿಯೇ ಬಂದು ಮಾತಾಡಿ, ಕಾವೇರಿ, ಕೃಷ್ಣಾ ಪ್ರವೇಶಕ್ಕೆ ಮುಕ್ತ ಅವಕಾಶ ಇದೆ. ವಿಜಯಪುರದಲ್ಲಿ ಒಂದು, ಬೆಂಗಳೂರಿನಲ್ಲಿ ಒಂದು ಹೇಳಿಕೆ ಕೊಟ್ಟು ಪಕ್ಷ ಮತ್ತು ಸರ್ಕಾರಕ್ಕೆ ಧಕ್ಕೆ ಮಾಡಬೇಡಿ,’ ಎಂದು ಸಿಎಂ ಯಡಿಯೂರಪ್ಪ ಯತ್ನಾಳ್‌ಗೆ ಸೂಚನೆ ನೀಡಿದ್ದಾರೆ.
ಇದಕ್ಕೆ ಯತ್ನಾಳ್, ಯಾರಿಂದ ಸರ್ಕಾರಕ್ಕೆ ಧಕ್ಕೆಯಾಗುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಹಿರಿಯ ಶಾಸಕರು ಎಲ್ಲದಕ್ಕೂ ಬೆಂಗಳೂರಿಗೆ ಬಂದು ಮಾತನಾಡಲು ಆಗುವುದಿಲ್ಲ, ದೂರವಾಣಿ ಮೂಲಕವೂ ಸಮಸ್ಯೆ ಪರಿಹರಿಸಬೇಕು ಎಂದೂ ಹೇಳಿದ್ದಾರೆ ಎನ್ನಲಾಗಿದೆ. ಈ ವೇಳೆ ಹಿರಿಯ ಸಚಿವರು ಮಧ್ಯಪ್ರವೇಶಿಸಿ ವಿಷಯಾಂತರ ಮಾಡಿದ್ದಾರೆ. ಆದರೆ, ಸಭೆ ಮುಗಿಯುವ ಮೊದಲೇ ಬಸನಗೌಡ ಪಾಟೀಲ್ ಯತ್ನಾಳ್ ಸಭೆಯಿಂದ ಹೊರ ನಡೆದಿದ್ದಾರೆ