ಬೇಲೂರು: ಸನ್ಯಾಸೀಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಶಿವೇಗೌಡ ರೈತರ ಹೈನುಗಾರಿಕೆಗೆ ಅನುಕೂಲವಾಗುವ ಬಿಟ್ರಾವಳ್ಳಿ ಗ್ರಾಮದ ಹಾಲಿನ ಡೇರಿ ಕಟ್ಟಡ ಕಾಮಗಾರಿಗೆ ರಾಜಕೀಯ ದ್ವೇಷದದಿಂದ ಅಡ್ಡಗಾಲು ಹಾಕುತ್ತಿದ್ದು ವಿನಃ ಕಾರಣ ತಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ಹಾಗೂ ಸನ್ಯಾಸೀಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಟ್ರ್ರುವಳ್ಳಿ ಹಾಲಿನ ಡೇರಿ ಕಟ್ಟಡ ನಿರ್ಮಿಸುವಾಗ ಶಾಲಾ ತಡೆಗೋಡೆ ಮತ್ತು ಶಾಲೆಗೆ ಸಂಬಂಧಿಸಿದ ಗಿಡಮರ ಕಡಿದು ಹಾಕಿದ್ದಾರೆ. ಇಂತವರ ಮೇಲೆ ಕ್ರಮ ಕೈಗೊಳ್ಳ ಬೇಕು ಎಂದು ಸನ್ಯಾಹಳ್ಳಿ ಗ್ರಾಪಂ ಅಧ್ಯಕ್ಷ ಪ್ರೇಮಾ ಮತ್ತು ಮಾಜಿ ಅಧ್ಯಕ್ಷ ಶಿವೇಗೌಡ ನಮ್ಮ ವಿರುದ್ಧ ದಾಖಲೆ ರಹಿತ ಆರೋಪಿಸಿದ್ದಾರೆ.
ಸನ್ಯಾಸೀಹಳ್ಳಿ ಗ್ರಾಮದ 34 ಗುಂಟೆ ತೋಪಿಗುಂಡಿ ಭಾಗದಲ್ಲಿ ಈಗಾಗಲೇ ಗ್ರಾಪಂ ಕಟ್ಟಡ, ಅಂಗನವಾಡಿ ಮತ್ತು ಶಾಲಾ ಕಟ್ಟಡಗಳು ಇವೆ. ಇದರ ಪಕ್ಕದ ಜಾಗದಲ್ಲಿ ರೈತರ ಮತ್ತು ಬಡವರ ಅನುಕೂಲಕ್ಕಾಗಿ ಹಾಲಿನ ಡೇರಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಅಲ್ಲಿನ ಹಾಲಿ ಸದಸ್ಯ ಶಿವೇಗೌಡ ಪೂರ್ವಾಗ್ರಹ ಪೀಡಿತರಾಗಿ ರಾಜಕೀಯ ವೈಷಮ್ಯದ ಹಿನ್ನೆಲೆ ತಾವು ಶಾಲಾ ಕಟ್ಟಡ ಕಾಂಪೌಂಡ್ ಕಟ್ಟದಿರುವುದಾಗಿ ಆರೋಪ ಮಾಡಿದ್ದಾರೆ.
ಆದರೆ ಎರಡು ದಶಕಗಳ ಹಿಂದೆ ಶಾಲೆ ಹಾಗೂ ಅಂಗನವಾಡಿ ಕಟ್ಟಡ ನಿರ್ಮಿಸುವಲ್ಲಿ ತಮ್ಮ ಪಾತ್ರ ಏನು ಎಂಬುದು ಈ ಭಾಗದ ಜನತೆಗೆ ತಿಳಿದಿದೆ ಎಂದರು. ಸನ್ಯಾಸಿಹಳ್ಳಿ ಗ್ರಾಪಂಗೆ ಅಮೃತ್ ಯೋಜನೆಯಡಿ ಮಂ ಜೂರಾಗಿರುವ ಮನೆಗಳನ್ನು ಬಿಕ್ಕೋಡು ಗ್ರಾಪಂಗೆ ಸ್ಥಳಾಂತರದ ಮಾಡಿದ್ದೇನೆ ಎಂದು ಆರೋಪ ಮಾಡಿರುತ್ತಾರೆ. ಸ್ಥಳಾಂತರದ ಬಗ್ಗೆ ನನ್ನ ಕೈವಾಡ ಇರುವುದನ್ನು ಸಾಕ್ಷಿ ಆಧಾರ ಸಮೇತ ಹಾಜರುಪಡಿಸಬೇಕು ಎಂದು ಆಗ್ರಹಿಸಿದರು.
ಡೇರಿ ನಿರ್ಮಿಸಲು ಮುಂದಾದ ವೇಳೆ ಶಾಲಾ ತಡೆಗೋಡೆಗೆ ಹಾನಿಯಾಗಿದೆ. ಹಾನಿಯಾಗಿರುವ ಕಾಂಪೌಂಡನ್ನು ಮತ್ತೆ ದುರಸ್ತಿ ಪಡಿಸುವುದಾಗಿ ಈಗಾಗಲೇ ಹೇಳಿದ್ದು ಕಾಮಗಾರಿಗೆ ಮುಂದಾಗಿದ್ದರೂ ಶಿವೇಗೌಡ ಹಾಗೂ ತಂಡ ವಿನಃ ಕಾರಣದಿಂದ ಆರೋಪಿಸುತ್ತಿದ್ದಾರೆ. ತಾವು ಜಿಪಂ ಅಧ್ಯಕ್ಷರಾದ ವೇಳೆ ನಯಾಪೈಸೆ ವಂಚನೆ ಮಾಡಿಲ್ಲ. ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ್ದು ನನ್ನ ಬಗ್ಗೆ ಒಂದೇ ಒಂದು ಆಧಾರ ಸಹಿತ ಭ್ರಷ್ಟಾಚಾರದ ಆರೋಪ ಸಾಬೀತುಪಡಿಸಿದಲ್ಲಿ ರಾಜಕೀಯದಿಂದ ನಿವೃತ್ತಿ ಹೊಂದುವು ದಾಗಿ ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಗ್ರಾಪಂ ಸದಸ್ಯ ಚಂದನ್, ಡೇರಿ ನಿರ್ದೇರಕರಾದ ಚನ್ನಬಸವೇಗೌಡ, ರಾಜಶೇಖರ, ಕಾರ್ಯದರ್ಶಿ ಚಂದೇಗೌಡ ಹಾಜರಿದ್ದರು.