ಚಿತ್ರದುರ್ಗ: ಮೌಢ್ಯಾಚರಣೆ ದೇಶದ ಅಭಿವೃದ್ಧಿಗೆ ಕಂಟಕವಾಗಿವೆ. ಬಾಲಕಾರ್ಮಿಕ ಪದ್ದತಿ ಮತ್ತು ಬಾಲ್ಯವಿವಾಹಗಳು ಸಮಾಜದ ಅನಿಷ್ಠ ಪದ್ದತಿಯಾಗಿದ್ದು ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ ಕರೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕಾರ್ಮಿಕ ಇಲಾಖೆ ಹಾಗೂ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸೊಸೈಟಿ ಇವುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಜಾಗೃತಿ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.
ಮಕ್ಕಳು ದೇಶದ ಸಂಪತ್ತಾಗಿದ್ದು ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಬೆಳೆಯಬೇಕು. ಈ ವಯೋಮಾನದಲ್ಲಿ ಆಗುವ ಬೆಳವಣಿಗೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಬಾರದು. ಆದರೆ ಬಾಲ್ಯದಲ್ಲಿಯೇ ಕಾರ್ಮಿಕರಾಗುವುದರಿಂದ ದೈಹಿಕ, ಮಾನಸಿಕ ಹಾಗೂ ಶೈಕ್ಷಣಿಕ ಬೆಳವಣಿಗೆ ಆಗುವುದಿಲ್ಲ. ಇದರಿಂದ ಮಕ್ಕಳ ಮುಂದಿನ ಜೀವನದ ಮೇಲೆ ಪರಿಣಾಮವಾಗಲಿದೆ. ಈ ನಿಟ್ಟಿನಲ್ಲಿ ಮಕ್ಕಳನ್ನು 1 ರಿಂದ 18 ನೇ ವಯಸ್ಸಿನವರೆಗೆ ಯಾವುದೇ ದುಡಿಮೆಗೆ ಕಳುಹಿಸದೆ ಶಿಕ್ಷಣ ಕೊಡಿಸುವಂತಹ ಕೆಲಸವನ್ನು ನಾವು ನೀವೆಲ್ಲರೂ ಮಾಡಬೇಕಾಗಿದೆ ಎಂದರು.
ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾತನಾಡಿ, ಬಾಲಕಾರ್ಮಿಕ ನಿರ್ಮೂಲನೆ ಮಾಡುವ ಉದ್ದೇಶದಿಂದ ಜಿಲ್ಲೆಯ ಎಲ್ಲ 189 ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಪ್ರಚಾರ ಗೀತೆ, ಕರಪತ್ರ, ವಸ್ತುಪ್ರದರ್ಶನದ ಮೂಲಕ ಬಾಲಕಾರ್ಮಿಕ ಪದ್ಧತಿಯ ದುಷ್ಪರಿಣಾಮಗಳನ್ನು ಜನರಿಗೆ ಮನವರಿಕೆ ಮಾಡಲಾಗುವುದು ಎಂದರು. ಉಪವಿಭಾಗಾಧಿಕಾರಿ ವಿಜಯಕುಮಾರ್, ವಕೀಲರ ಸಂಘದ ಅಧ್ಯಕ್ಷ ವಿಶ್ವನಾಥ್, ಕಾರ್ಮಿಕ ಇಲಾಖೆ ಅಧಿಕಾರಿ ಇಬ್ರಾಹಿಂ, ನಿರೀಕ್ಷಕ ರಾಜಣ್ಣ ಮತ್ತಿತರರು ಇದ್ದರು.
ಬಾಲಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದು ಅಪರಾಧವಾಗಿದೆ. ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದ್ದರೂ ಅಲ್ಲಲ್ಲಿ ಪ್ರಕರಣಗಳು ಕಂಡುಬರುತ್ತಿವೆ. ಆದರೂ
ಇಂತಹ ಪ್ರಕರಣಗಳು ಕಂಡುಬಂದಲ್ಲಿ ದೂರು ನೀಡಬಹುದಾಗಿದೆ. ನ್ಯಾಯಾಲಯ ಸಹ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ಬಾಲಕಾರ್ಮಿಕರು, ಕಿಶೋರರು
ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು.
ಎಸ್.ಬಿ. ವಸ್ತ್ರಮಠ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು.