ಕಾಸರಗೋಡು: ಬೇಕಲ ಕೋಟೆಯ ಆಂಜನೇಯ ದೇವಸ್ಥಾನ ರಸ್ತೆಗೆ ಕಳಪೆ ಡಾಮರೀಕರಣ ಕಾಮಗಾರಿ ಯನ್ನು ಸ್ಥಳೀಯರು ತಡೆದಿದ್ದಾರೆ.
ಬಿಆರ್‌ಡಿಸಿಯ ನಿಯಂತ್ರಣ ದಲ್ಲಿರುವ ರಸ್ತೆ ನವೀಕರಣ ಜವಾಬ್ದಾರಿ ಯನ್ನು ಡಿಟಿಪಿಸಿಗೆ ವಹಿಸಲಾಗಿತ್ತು. ಚಂದ್ರಗಿರಿ, ಕಾಂಞಂಗಾಡ್ ಕೆ.ಎಸ್. ಟಿ.ಪಿ. ರಸ್ತೆಯ ಕೋಟಕುನ್ನು ಜಂಕ್ಷನ್ ನಿಂದ ಬೇಕಲಕೋಟೆಗೆ ತೆರಳುವ ರಸ್ತೆಯನ್ನು ಅಗಲಗೊಳಿಸಿ ಡಾಮರೀಕರಣ ನಡೆಸಲಾಗುತ್ತಿದೆ.
ಕೆ.ಎಸ್.ಟಿ.ಪಿ. ರಸ್ತೆಯನ್ನು ನಿರ್ಮಿಸು ತ್ತಿದೆ. ಕೋಟಕುನ್ನು ಜಂಕ್ಷನ್‌ನಿಂದ 18 ಮೀಟರ್ ಅಗಲದ ರಸ್ತೆಯ ಮಧ್ಯೆ 5 ಮೀಟರ್ ವೃತ್ತಾಕೃತಿಯಲ್ಲಿ ಡಿವೈಡರ್, ಇಕ್ಕೆಲಗಳಲ್ಲಿ 5 ಮೀಟರ್ ಅಗಲದಲ್ಲಿ ರಸ್ತೆ, ರಸ್ತೆಯ ಇಕ್ಕೆಲಗಳಲ್ಲಿ ಕಾಲ್ದಾರಿ ಎಂಬಂತೆ ರೂಪುರೇಷೆ ತಯಾರಿಸಲಾಗಿದೆ. ಆದರೆ ರಸ್ತೆಯನ್ನು ಅಳೆದಾಗ ಕೇವಲ 15 ಮೀ. ಅಗಲವಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಕಾಮಗಾರಿಯನ್ನು ತಡೆದರು.
ಈ ಕಾರಣದಿಂದ ಡಿಟಿಪಿಸಿ ಸಂಬಂಧಪಟ್ಟವರು ಸ್ಥಳಕ್ಕೆ ಧಾವಿಸಿ ಬಂದಾಗ ರಸ್ತೆ ನಿರ್ಮಾಣದಲ್ಲಿನ ಕಳಪೆ ಕಾಮಗಾರಿಯ ಬಗ್ಗೆ ಪ್ರಶ್ನಿಸಿದಾಗ ಸ್ಪಷ್ಟವಾದ ಉತ್ತರ ಅವರಿಂದ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಡಾಮರೀಕರಣ ಕಾಮಗಾರಿಯನ್ನು ನಿಲ್ಲಿಸಿ ಕಾರ್ಮಿಕರು ತೆರಳಿದರು.
ರಸ್ತೆ ಕಳಪೆ ಬಗ್ಗೆ ವಿಜಿಲೆನ್ಸ್‌ಗೆ ದೂರು ನೀಡುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ರಸ್ತೆ ನವೀಕರಣಕ್ಕಾಗಿ 99,94,176 ರೂ. ನಿಧಿ ಕಾದಿರಿಸಲಾಗಿತ್ತು.