ಮಂಡ್ಯ: ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 275ರ ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನವಾಗಿರುವ ಕಟ್ಟಡಗಳ ತೆರವು ಕಾಮಗಾರಿಗೆ ತಾಲೂಕಿನ ಹೊಸಬೂದನೂರು ಗ್ರಾಮಸ್ಥರು ಅಡ್ಡಿಪಡಿಸಿದ ಘಟನೆ ಶನಿವಾರ ನಡೆದಿದೆ.
ತಹಶೀಲ್ದಾರ್ ನಾಗೇಶ್ ನೇತೃತ್ವದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ತಂಡ ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಜೆಸಿಬಿ ಯಂತ್ರಗಳೊಂದಿಗೆ ಮುಂದಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಕಾಮಗಾರಿಗೆ ಅಡ್ಡಿಪಡಿಸಿದರು.
ಹೆದ್ದಾರಿ ಕಾಮಗಾರಿಗೆ ಸ್ವಾಧೀನಪಡಿಸಿಕೊಂಡಿರುವ ಮನೆಗಳು, ನಿವೇಶನಗಳು, ಕಟ್ಟಡಗಳಿಗೆ ಆಸ್ತಿ ಮೌಲ್ಯಮಾಪನ ಮಾಡಲಾಗಿದ್ದು, ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ಆಸ್ತಿಮೌಲ್ಯಕ್ಕೆ ತಕ್ಕಂತೆ ಫಲಾನು ಭವಿಗಳಿಗೆ ವೈಜ್ಞಾನಿಕ ರೀತಿಯಲ್ಲಿ ತಾರತಮ್ಯ ಮಾಡದೆ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಜೆಸಿಬಿ ಯಂತ್ರಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸರ್ಕಾರದಿಂದ ವೈಜ್ಞಾನಿಕ ಪರಿಹಾರ ದೊರಕಿಸಲು ಕ್ರಮ ವಹಿಸಬೇಕು. ಅಲ್ಲಿಯವರೆವಿಗೂ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ. ನಮ್ಮ ಗ್ರಾಮದಲ್ಲೇ ಪರಿಹಾರ ವಿತರಣೆಯಲ್ಲಿ ಸಾಕಷ್ಟು ತಾರತಮ್ಯ ಮಾಡಲಾಗಿದೆ. ಇದರಿಂದ ಬಡವರು, ಮಧ್ಯಮ ವರ್ಗದವರು ಹಾಗೂ ರಾಜಕೀಯ ಬೆಂಬಲ ಇಲ್ಲದವರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ನಾಗೇಶ್ ಅವರು ಗ್ರಾಮಸ್ಥರ ಮನವೊಲಿಸಲು ಮುಂದಾದರೂ ಸಾಧ್ಯವಾಗಲಿಲ್ಲ. ವಿವಾದವಿಲ್ಲದ ಕೆಲವು ಕಟ್ಟಡಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾದರು. ಸಂಜೆಯವರೆವಿಗೂ ಕಾದು ಕುಳಿತ ಗ್ರಾಮಸ್ಥರು ಸೂಕ್ತ ಪರಿಹಾರ ನೀಡುವವರೆವಿಗೂ ಕಟ್ಟಡ ತೆರವಿಗೆ ಬಿಡುವುದಿಲ್ಲವೆಂದು ಪಟ್ಟು ಹಿಡಿದು ಕುಳಿತಿದ್ದು ಅಧಿಕಾರಿಗಳಿಗೆ ತಲೆಬಿಸಿ ಉಂಟುಮಾಡಿತ್ತು.