Advertisement

ಹಿಂಸೆಯಿಂದ ಲೇಖನಿಗೆ ಅಡ್ಡಿಪಡಿಸುವುದು ಸಲ್ಲ; ಶಾಸಕ ಎಚ್‌.ಹಾಲಪ್ಪ ಹರತಾಳು

06:32 PM Oct 27, 2022 | Nagendra Trasi |

ಸಾಗರ: ಲೇಖಕರು, ಸಾಹಿತಿಗಳು ನಿರ್ಭಯವಾಗಿ ಬರವಣಿಗೆ ಮಾಡಲು ಅವಕಾಶವಾಗಬೇಕು. ಹಿಂಸೆ, ಭಯದ ಮೂಲಕ ಲೇಖನಿಯನ್ನು ತಡೆಯುವ ಯಾವುದೇ ಪ್ರಯತ್ನ ಸರಿಯಲ್ಲ ಎಂದು ಶಾಸಕ ಎಚ್‌.ಹಾಲಪ್ಪ ಹರತಾಳು ತಿಳಿಸಿದರು.

Advertisement

ಇಲ್ಲಿನ ನೆಹರೂ ನಗರದಲ್ಲಿ ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಡಾ| ನಾ.ಡಿಸೋಜಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ ಅವರು ಮಾತನಾಡಿದರು. ಹಿಂದೆ ಗೌರಿ ಲಂಕೇಶ್‌, ಕಲಬುರ್ಗಿ ಅಂತವರ ಹತ್ಯೆ ನಡೆದಿದೆ. ಬೇರೆ ಬೇರೆ ವಿಚಾರಧಾರೆಯುಳ್ಳವರಿಂದ ಇಂತಹ ಕೆಲಸ ನಡೆದಿದೆ.

ಚರ್ಚೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೇ ವಿನಃ ಹಿಂಸೆಗೆ ಇಳಿಯಬಾರದು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಈ ಹಿನ್ನೆಲೆಯಲ್ಲಿ ಸಾಹಿತಿ ಡಾ| ನಾ.ಡಿಸೋಜ ಅವರಿಗೆ ಬೆದರಿಕೆ ಪತ್ರ ಬಂದಿರುವ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಅವರ ಮನೆಗೆ ಭೇಟಿ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ನಗರ ಠಾಣೆ ವೃತ್ತ ನಿರೀಕ್ಷಕರಿಗೆ ಡಿಸೋಜಾ ಅವರ ಮನೆಗೆ ಭೇಟಿ ನೀಡಿ ವರದಿ ಪಡೆಯಲು ತಿಳಿಸಲಾಗಿತ್ತು. ಘಟನೆ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿಗಳ ಜೊತೆ ಸಹ ಮಾತುಕತೆ ನಡೆಸಲಾಗುತ್ತದೆ.

ಸಾಹಿತಿ ನಾ.ಡಿಸೋಜ ಅವರು ಮುಂಜಾಗ್ರತೆ ಹಿನ್ನೆಲೆಯಲ್ಲಿ ನಗರ ಠಾಣೆಗೆ ದೂರು ನೀಡಲು ಸಲಹೆ ನೀಡಿದ್ದೇನೆ ಎಂದು ಹೇಳಿದರು. ನಾ.ಡಿಸೋಜಾ ಮಾತನಾಡಿ, ಸುಮಾರು 6 ತಿಂಗಳ ಹಿಂದೆ ಎರಡು ಬೆದರಿಕೆ ಪತ್ರ ಬಂದಿತ್ತು. ಪತ್ರದಲ್ಲಿ ವಿಳಾಸ ಇಲ್ಲ. ದಾವಣಗೆರೆಯಿಂದ ನನಗೆ ಪತ್ರ ಬಂದಿದೆ. ನನಗೆ ಪ್ರತಿ ದಿನ ಹತ್ತಾರು ಪತ್ರಗಳು ಅಂಚೆ ಮೂಲಕ ಬರುತ್ತವೆ. ನನ್ನ ಸಾಹಿತ್ಯ ಹೊಗಳಿಯೋ, ವಿಮರ್ಶೆ ಮಾಡಿ ಪತ್ರ ಬರುವುದು ಸಹಜ. ಆದರೆ ಅನಾಮಧೇಯವಾಗಿ ಎರಡು ಪತ್ರ ಬಂದಾಗ ನಾನು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅನಗತ್ಯವಾಗಿ ಪೊಲೀಸರಿಗೆ ದೂರು ನೀಡಿ ವಿಷಯ ಇನ್ನಷ್ಟು ದೊಡ್ಡದು ಮಾಡುವ ಇಷ್ಟ
ತಮಗೆ ಇಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಪ್ಸ್‌ಕೋಸ್‌ ಸದಸ್ಯ ಆರ್‌.ಎಸ್‌.ಗಿರಿ, ಬಗರ್‌ಹುಕುಂ ಸಮಿತಿ ಸದಸ್ಯ ರೇವಪ್ಪ ಹೊಸಕೊಪ್ಪ, ನಗರಸಭೆ ಸದಸ್ಯೆ ನಾದೀರಾ ಪರ್ವಿನ್‌, ಲೇಖಕ ವಿಲಿಯಂ, ರವೀಂದ್ರ ಬಸರಾಣಿ, ವಿನಾಯಕ ರಾವ್‌ ಮನೇಘಟ್ಟ ಇನ್ನಿತರರು ಇದ್ದರು.

Advertisement

ಪೊಲೀಸರ ಭೇಟಿ: ಇದಕ್ಕೂ ಮೊದಲು ನಗರ ಠಾಣೆ ವೃತ್ತ ನಿರೀಕ್ಷಕ ಸೀತಾರಾಂ ಸಿಬ್ಬಂದಿ ಜೊತೆ ಸಾಹಿತಿ ಡಾ| ನಾ.ಡಿಸೋಜಾ ಅವರ ಮನೆಗೆ ತೆರಳಿ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಮಾಹಿತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next