ಬೆಂಗಳೂರು: ಪಠ್ಯ ಪುಸ್ತಕದ ವಿಚಾರದಲ್ಲಿ ದಿನಕ್ಕೊಂದರಂತೆ ಆಕ್ಷೇಪಗಳು, ವಿರೋಧಗಳು ವ್ಯಕ್ತವಾಗುತ್ತಲೇ ಇದ್ದು, ಕನಕದಾಸರ ಜೀವನ ಚರಿತ್ರೆ ಕಡೆಗಣನೆ ವಿಚಾರಕ್ಕೆ ಸಂಬಂಧಿಸಿ ಕಾಗಿನೆಲೆ ಗುರುಪೀಠದ ನಿರಂಜನಂದಪುರಿ ಶ್ರೀಗಳು ಸೋಮವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
9ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಒಂದು ಪುಟದಲ್ಲಿದ್ದ ಶ್ರೇಷ್ಠ ಕವಿ ಕನಕದಾಸರ ಪಠ್ಯ ಭಾಗವನ್ನು ಕೇವಲ ಒಂದೇ ಸಾಲಿಗೆ ತಂದು, ಕಡಿತ ಗೊಳಿಸಲಾಗಿದೆ. ಈ ಮೂಲಕ ಕನಕದಾಸರ ಆದರ್ಶ ಮತ್ತು ದಾರ್ಶನಿಕ ಸತ್ಯಗಳನ್ನು ಮರೆಮಾಚುವ ದೊಡ್ಡ ಹುನ್ನಾರ ನಡೆದಿದೆ. ಹಿಂದುಳಿದ ಸಮಾಜ ವನ್ನು ಒಳಗೊಂಡಂತೆ ಈ ನೆಲದ ನಾಡು- ನುಡಿಗೆ ಮಾಡಿದ ದ್ರೋಹವಾಗಿದೆ ಎಂದು ಮನವಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಇದು ಚಾರಿತ್ರಿಕ ಮತ್ತು ಸಾಂಸ್ಕೃತಿಕ ದ್ರೋಹವಾಗಿದೆ. ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಸತ್ಯಗಳನ್ನು ತಿರುಚುವ ಕುತಂತ್ರ ಖಂಡಿಸುತ್ತೇನೆ. ಹೀಗಾಗಿ ಮುಖ್ಯಮಂತ್ರಿ ಗಳು ಮಧ್ಯ ಪ್ರವೇಶ ಮಾಡಿ, ಕನಕದಾಸರ ಜೀವನ ವಿವರಗಳ ವಿಸ್ತ್ರತ ನೈಜ ಸಂಗತಿಗಳನ್ನು ಹಿಂದಿನಂತೆ ಅಳವಡಿಸಬೇಕು. ಆಗಿರುವ ಲೋಪ ಸರಿಪಡಿಸಿ, ಸಾಮಾಜಿಕ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬಿಜೆಪಿಯವರು ಯಾಕೆ ದಲಿತರನ್ನ ಸಿಎಂ ಮಾಡಲಿಲ್ಲ?: ಎಂ.ಬಿ ಪಾಟೀಲ್