ನವ ದೆಹಲಿ : ಭಾರತದಲ್ಲಿ ಆತಂಕ ಸೃಷ್ಟಿಸಿದ ರೂಪಾಂತರಿ ಕೋವಿಡ್ ಸೋಂಕು ಬಿ .1.617 ನನ್ನು ‘ಇಂಡಿಯನ್ ವೇರಿಯಂಟ್’ ಎಂದು ಕರೆದಿರುವುದಕ್ಕಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಸ್ಪೀಕರ್ ಗೆ ಪತ್ರದ ಮೂಲಕ ಕೇಳಿಕೊಂಡಿದ್ದಾರೆ.
ಪತ್ರದಲ್ಲಿ, ಐಟಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಶಿ ತರೂರ್, ಸಮಿತಿಯನ್ನು “ಕಾಂಗ್ರೆಸ್ಸಿನ ವಿಸ್ತರಣೆಯನ್ನಾಗಿ” ಮಾಡಿದ್ದಾರೆ ಎಂದು ದುಬೆ ಉಲ್ಲೇಖಿಸಿದ್ದಲ್ಲದೇ, ಇದು “ಡಾ. ಶಶಿ ತರೂರ್ ಅವರ ಅಸಹ್ಯ, ಅನ್ಯಾಯ ಮತ್ತು ರಾಕ್ಷಸ ವರ್ತನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕೋವಿಡ್ ವಿರುದ್ಧ ಹೋರಾಡಲು ಆತ್ಮಸ್ಥೈರ್ಯವೇ ಮುಖ್ಯ: ಕೋವಿಡ್ ಗೆದ್ದ ತರೀಕೆರೆಯ ವೈದ್ಯ
ವಿಶ್ವ ಆರೋಗ್ಯ ಸಂಸ್ಥೆಯೂ ಕೂಡ ಕೋವಿಡ್ ಸೋಂಕಿನ ಈ ರೂಪಾಂತರವನ್ನು ಬಿ .1.617 ಎಂದು ಹೇಳಿದೆ. ಹಾಗಿರುವಾಗ ಕಾಂಗ್ರೇಸ್ ಸಂಸದ ತರೂರ್ ಅವರು ತಮ್ಮ “ಶ್ರೀಮಂತ ರಾಜತಾಂತ್ರಿಕ ಅನುಭವ”ದ ಹೊರತಾಗಿಯೂ “ಇಂಡಿಯನ್ ವೆರಿಯಂಟ್” ಎಂಬ ಪದವನ್ನು ತಮ್ಮ ಟ್ವೀಟ್ ಗಳಲ್ಲಿ ಬಳಸಿದ್ದಾರೆ ಎಂದು ದುಬೆ ಪತ್ರದಲ್ಲಿ ಆರೋಪಿಸಿದ್ದಾರೆ.
ಇನ್ನು, ಸಂಸದ ಭಾರತೀಯರ ಬಗ್ಗೆ ಅವೈಜ್ಞಾನಿಕ ಮತ್ತು ಅವಹೇಳನಕಾರಿ ಭಾಷೆಯನ್ನು ಏಕೆ ಬಳಸುತ್ತಾರೆ ಎಂಬುದು ನನ್ನ ಗ್ರಹಿಕೆಯನ್ನು ಮೀರಿದೆ. ಈ ಪದದ ಬಳಕೆಯನ್ನು ತೆಗೆದುಹಾಕಲು ಭಾರತ ಸರ್ಕಾರ ಈಗಾಗಲೇ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್‌ಗಳಿಗೆ ಪತ್ರ ಬರೆದಾಗ, ನಮ್ಮ ಗೌರವಾನ್ವಿತ ಲೋಕಸಭೆಯ ಸದಸ್ಯರೊಬ್ಬರು ದೇಶದ ಬಗ್ಗೆ ಈ ರೀತಿಯಾಗಿ ತುಚ‍್ಛವಾಗಿ ನೋಡುತ್ತಿರುವುದು ನಾಚಿಕೆಗೇಡಿನ ಸಂಗತಿ ”ಎಂದು ಪರೋಕ್ಷವಾಗಿ ತರೂರ್ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ತರೂರ್ ತಮ್ಮ “ತಮ್ಮ ರಾಜಕೀಯದ ನಾಯಕರನ್ನು” ಸಂತೋಷಪಡಿಸಲು ಹೀಗೆ ಮಾಡುತ್ತಿದ್ದಾರೆಂದು ಆರೋಪಿಸಿದ ಅವರು, “ಇಂತಹ ಕೆಲಸವನ್ನು ಮಾಡುವವರಿಗೆ ಸಂಸತ್ತಿನಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡುವುದು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಪ್ರವೃತ್ತಿಯಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.
ದೇಶಕ್ಕಿಂತ ಅವರ ಪಕ್ಷ ಹಾಗೂ ರಾಹುಲ್ ಗಾಂಧಿ ಅವರ ಸಿದ್ಧಾಂತವೇ ತರೂರ್ ಅವರಿಗೆ ಮುಖ್ಯವಾಗಿದ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಹತ್ತು ವರ್ಷವಾದರೂ ಬಾಕಿ ಹಣ ಕೊಟ್ಟಿಲ್ಲ ಕೊಚ್ಚಿ ಟಸ್ಕರ್ಸ್ ತಂಡ: ಬ್ರಾಡ್ ಹಾಗ್ ಆರೋಪ