ಕೆಂಭಾವಿ: ನಿಯಮ ಗಾಳಿಗೆ ತೂರಿ ಪುರಸಭೆ ಮುಖ್ಯಾಧಿಕಾರಿ ಮೂರು ತ್ರಿಚಕ್ರ ವಾಹನಗಳನ್ನು ಅನರ್ಹ ಫಲಾನುಭವಿಗಳಿಗೆ ವಿತರಿಸಿದ್ದಾರೆ ಎಂದು ಆರೋಪಿಸಿ ಪುರಸಭೆ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಶನಿವಾರ ಮಧ್ಯೆರಾತ್ರಿವರೆಗೂ ಧರಣಿ ನಡೆಸಿದರು.
ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಪುರಸಭೆ ಸದಸ್ಯ ಮಲ್ಲಿನಾಥಗೌಡ ಪೊಲೀಸ ಪಾಟೀಲ, ಪುರಸಭೆ ಅನುದಾನದಲ್ಲಿ ಬಂದ ತ್ರಿಚಕ್ರ ವಾಹನಗಳನ್ನು ಮುಖ್ಯಾಧಿಕಾರಿಗಳು ಯಾರ ಗಮನಕ್ಕೂ ತರದೇ, ಶಾಸಕರು ಮೌಖೀಕ ಆದೇಶ ನೀಡಿದ್ದಾರೆ. ಪುರಸಭೆಗೆ ಹೊಸ ಅಧ್ಯಕ್ಷ ಬರುವವರೆಗೂ ಆಡಳಿತಾಧಿಕಾರಿಯ (ಸಹಾಯಕ ಆಯುಕ್ತ) ಅನುಮೋದನೆ ಪಡೆಯದೇ ಅನರ್ಹ ಫಲಾನುಭವಿಗಳಿಗೆ ತರಾತುರಿಯಲ್ಲಿ ವಾಹನ ನೀಡಿದ್ದಾರೆ ಎಂದು ಆರೋಪಿಸಿದರು. ಇದರಿಂದ ಕೆಲಕಾಲ ಅಧಿಕಾರಿಗಳ ಮತ್ತು ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು.
ಪುರಸಭೆ ಮುಂದೆ ಹೈಡ್ರಾಮಾ
ತ್ರಿಚಕ್ರ ವಾಹನ ನೀಡಿಕೆಯಲ್ಲಿ ನಡೆದ ಅಕ್ರಮದ ಬಗ್ಗೆ ಬಿಜೆಪಿ ಸದಸ್ಯರು ಹಾಗೂ ಮುಖಂಡರು ಧರಣಿ ಕುಳಿತರು. ಈ ನಡುವೆ ಸದಸ್ಯರ ಮತ್ತು ಮುಖ್ಯಾಧಿಕಾರಿಗಳ ಮಧ್ಯೆ ವಾಗ್ವಾದ ನಡೆದು ಒಬ್ಬರಿಗೊಬ್ಬರು ಆತ್ಮಹತ್ಯೆ ಬೆದರಿಕೆಗಳ ಮಾತುಗಳು ಕೇಳಿ ಬಂದವು. ಆಗ ಪಿಎಸ್‌ಐ ಗಜಾನಂದ ಬಿರಾದಾರ ಆಗಮಿಸಿ ಸಂಧಾನ ನಡೆಸಿದ ನಂತರ ಮುಖ್ಯಾಧಿಕಾರಿಗಳು, ತ್ರಿಚಕ್ರ ವಾಹನ ವಾಪಸ್ ತರಿಸಿಕೊಂಡು ಅರ್ಹ ಫಲಾನುಭವಿಗಳಿಗೆ ನಿಯಮಾನುಸಾರ ವಿತರಿಸಲಾಗುವುದು ಎಂದು ಲಿಖೀತ ರೂಪದಲ್ಲಿ ಸ್ಪಷ್ಟನೆ ನೀಡಿದ ನಂತರ ಮಧ್ಯರಾತ್ರಿ ಧರಣಿ ಹಿಂಪಡೆಯಲಾಯಿತು.
ಸದಸ್ಯರಾದ ರವಿಶಂಕರ ಸೊನ್ನದ, ಶರಣಪ್ಪ ಯಾಳಗಿ, ರಾಘವೇಂದ್ರ ಕವಲ್ದಾರ, ರಾಮಕೃಷ್ಣ, ರಾಜು ಬಾಂಬೆ, ನಾನಾಗೌಡ ಪಾಟೀಲ, ಮುಖಂಡರಾದ ಸಂಗಣ್ಣ ತುಂಬಗಿ, ಡಾ| ರವಿ ಅಂಗಡಿ, ಮುದೆಪ್ಪ ಪರಸನಹಳ್ಳಿ, ಭೀಮು ಮಲ್ಕಾಪುರ, ಅನ್ವರ ನಾಶಿ, ಶಿವಪ್ಪ ಕಂಬಾರ, ಚಂದ್ರು ಕುಳಗೇರಿ, ಶಂಕರ ಕರಣಗಿ, ರಮೇಶ ಜಾಧವ, ಶಿವು ಮಲ್ಲಿಭಾವಿ, ರಾಜು ಮುತ್ಯಾ, ಬಸವಣ್ಣೆಪ್ಪ ಮಾಳಳ್ಳಿಕರ್, ಮಲ್ಲು ಸೊನ್ನದ, ಹಳ್ಳೆಪ್ಪ ಕವಲ್ದಾರ, ದೇವು ಯಾಳಗಿ ಹಾಗೂ ಸಿದ್ದು ಬೈಚಬಾಳ ಸೇರಿದಂತೆ ಅನೇಕರಿದ್ದರು.
ಆರು ತಿಂಗಳ ಹಿಂದೆಯೇ ವಾಹನ ವಿತರಿಸಬೇಕಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಪ್ರಯುಕ್ತ ವಾಹನಗಳ ವಿತರಣೆ ವಿಳಂಬವಾಗಿದೆ. ಇತ್ತೀಚೆಗೆ ಶಹಾಪುರದಲ್ಲಿ ನಡೆದ ಸಭೆಯಲ್ಲಿ ಶಾಸಕರು, 17 ಜನ ಫಲಾನುಭವಿಗಳ ಪಟ್ಟಿಯಲ್ಲಿ ಮೂರು ಜನ ಫಲಾನುಭವಿಗಳ ಹೆಸರನ್ನು ಅಂತಿಮಗೊಳಿಸಿ ಅವರಿಗೆ ತ್ರಿಚಕ್ರ ವಾಹನ ವಿತರಿಸುವಂತೆ ಸೂಚನೆ ನೀಡಿದ್ದರು. ಈಗ ಶಾಸಕರ ಆದೇಶದ ಮೇರೆಗೆ ಶುಕ್ರವಾರ ಸಂಜೆ 3 ವಾಹನಗಳನ್ನು ವಿತರಿಸಲಾಗಿದೆ.
-ಮಂಜುನಾಥ ಗುಂಡೂರ, ಮುಖ್ಯಾಧಿಕಾರಿ