ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸೇರಿ 17 ಮಂದಿ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿ ಸ್ಪೀಕರ್ ರಮೇಶ್‌ಕುಮಾರ್ ಪ್ರಕಟಿಸಿರುವ ‘ಐತಿಹಾಸಿಕ’ ತೀರ್ಮಾನ ಇದೀಗ ನಾನಾ ಕಾನೂನು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ.
ಈ ತೀರ್ಪಿನ ಬಳಿಕ ಕಾನೂನು ಸನ್ನಿವೇಶ ಏನಾಗಲಿದೆ? ಸ್ಪೀಕರ್ ತೀರ್ಮಾನ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗಲಿದೆಯೆ? ಇದು ‘ನ್ಯಾಯಾಂಗ’ ನಿಂದನೆಗೆ ಕಾರಣವಾಗುತ್ತಾ? ಈ ತೀರ್ಪಿನಲ್ಲಿ ‘ಸಹಜ ನ್ಯಾಯ ತತ್ವ’ ಪಾಲನೆ ಆಗಿಲ್ಲವಾ? ಒಂದೊಮ್ಮೆ ಸ್ಪೀಕರ್ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ಕೊಟ್ಟರೆ, ಅಥವಾ ತೀರ್ಪನ್ನೇ ರದ್ದುಗೊಳಿಸಿದರೆ? ಇದೆಲ್ಲದಕ್ಕೂ ಮೀರಿ ಈ ಪ್ರಕರಣವನ್ನು ಸುಪ್ರೀಂಕೋರ್ಟ್ ಹೈಕೋರ್ಟ್‌ಗೆ ವರ್ಗಾಯಿಸುತ್ತಾ ಎಂಬ ಕಾನೂನು ಪ್ರಶ್ನೆಗಳು ಮೂಡಿವೆ.
ಈ ಎಲ್ಲ ಪ್ರಶ್ನೆಗಳಿಗೆ ಕಾನೂನು ತಜ್ಞರು ತಮ್ಮದೇ ಆದ ಅಭಿಪ್ರಾಯ ಹಾಗೂ ವಿಶ್ಲೇಷಣೆ ಕೊಡುತ್ತಿದ್ದಾರೆ. ತಮ್ಮ ತೀರ್ಪಿಗೆ ಸ್ಪೀಕರ್ ಅವರು ಸಂವಿಧಾನದ ಶೆಡ್ಯೂಲ್ 10ರ ಪ್ಯಾರಾ 2(1)(ಎ) ಹಾಗೂ ಸಂವಿಧಾನದ ಪರಿಚ್ಛೇದ 191(2) ಸೇರಿ ಜೆಡಿಯುನ ಶರದ್ ಯಾದವ್ ಪ್ರಕರಣದಲ್ಲಿ ರಾಜ್ಯಸಭೆ ಉಪಸಭಾಪತಿ ಎಂ. ವೆಂಕಯ್ಯನಾಯ್ಡು ನೀಡಿದ ತೀರ್ಪು, ತಮಿಳುನಾಡು ಪ್ರಕರಣ, ರವಿ ನಾಯಕ್ ವರ್ಸಸ್ ಭಾರತ ಸರ್ಕಾರ ಪ್ರಕರಣವನ್ನು ಬುನಾದಿ ಮಾಡಿಕೊಂಡಿದ್ದಾರೆ. ಆದರೆ, ಇದೇ ಅಂಶಗಳನ್ನು ಮುಂದಿಟ್ಟುಕೊಂಡು ಕಾನೂನು ತಜ್ಞರು ಅದರ ಮತ್ತೂಂದು ಮಗ್ಗಲು ಕುರಿತು ವಿಶ್ಲೇಷಿಸುತ್ತಾರೆ. ‘ನನ್ನ ಅಭಿಪ್ರಾಯದಲ್ಲಿ ಕೆಲವು ಕಾರಣಗಳಿಗೆ ಸ್ಪೀಕರ್ ತೀರ್ಮಾನ ಕಾನೂನು ಬಾಹಿರ. ಏಕೆಂದರೆ, ಇಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ. ‘ಸಹಜ ನ್ಯಾಯ ತತ್ವ’ ಪಾಲನೆ ಆಗಿಲ್ಲ. ಪಕ್ಷಪಾತ ಧೋರಣೆ ಕಂಡು ಬರುತ್ತಿದೆ. ಸದನಕ್ಕೆ ಹಾಜರಾಗಲು ಬಲವಂತಪಡಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿರುವಾಗ ವಿಪ್ ಉಲ್ಲಂಘನೆ ಕಾರಣಕೊಟ್ಟು ಶಾಸಕರನ್ನು ಅನರ್ಹ ಮಾಡಿ ಸ್ಪೀಕರ್ ಬಹಳ ದೊಡ್ಡ ‘ರಿಸ್ಕ್’ ತೆಗೆದುಕೊಂಡಿದ್ದಾರೆ’ ಎಂದು ಮಾಜಿ ಅಡ್ವೋ ಕೇಟ್ ಜನರಲ್ ಬಿ.ವಿ. ಆಚಾರ್ಯ ಹೇಳುತ್ತಾರೆ. ಆದರೆ, ಸ್ಪೀಕರ್ ತೀರ್ಪು ಅವರ ಅಧಿಕಾರ ವ್ಯಾಪ್ತಿಯೊಳಗಿದೆ.
ಸಂವಿಧಾನದ ಶೆಡ್ಯೂಲ್ 10 (2) (ಎ) ಅನ್ವಯ ಆಗಲಿದೆ ಎಂದು ಅವರಿಗೆ ಮನವರಿಕೆಯಾದರೆ ಶಾಸಕರನ್ನು ಅನರ್ಹಗೊಳಿಸುವ ವಿವೇಚನಾಧಿಕಾರ ಮತ್ತು ಪರಮಾಧಿಕಾರ ಅವರಿಗಿದೆ. ಆದರೆ, ಈ ತೀರ್ಪನ್ನು ನ್ಯಾಯಾಂಗದ ಪರಾಮರ್ಶೆಗೊಳಪಡಿಸುವ ಅವಕಾಶಗಳು ಇರುತ್ತವೆ ಎಂದು ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಡುತ್ತಾರೆ. ಅದೇ ರೀತಿ ಸ್ಪೀಕರ್ ಅವರ ಅನರ್ಹತೆ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿದರೆ ಅಥವಾ ತೀರ್ಪು ರದ್ದುಗೊಳಿಸಿದರೆ ಅನರ್ಹಗೊಂಡವರು ಶಾಸನ ಸಭೆಯ ಸದಸ್ಯರಾಗಿ ಮುಂದುವರಿಯುತ್ತಾರೆ. ಆಗಿನ ಕಾನೂನು ಸನ್ನಿವೇಶ ಮತ್ತು ರಾಜಕೀಯ ಲೆಕ್ಕಾಚಾರಗಳ ಬಗ್ಗೆ ಈಗಲೇ ಹೇಳಲಾಗುವುದಿಲ್ಲ. ಸ್ಪೀಕರ್ ತೀರ್ಪಿಗೆ ತಡೆ ಸಿಕ್ಕು, ಅದು ಇತ್ಯರ್ಥ ಆಗುವವರೆಗೆ ಉಪಚುನಾವಣೆಗಳೂ ನಡೆಸುವಂತಿಲ್ಲ ಅನ್ನುವುದು ಬಿ.ವಿ. ಆಚಾರ್ಯ ಅವರ ನಿಲುವು.
ಅನರ್ಹತೆ ಆದೇಶಕ್ಕೆ ತಡೆ ಸಿಕ್ಕರೆ ಅನರ್ಹ ಗೊಂಡವರು ರಾಜೀನಾಮೆ ವಿಚಾರ ಇತ್ಯರ್ಥಗೊಳ್ಳುವವರೆಗೆ ಶಾಸಕರಾಗಿ ಮುಂದುವರಿಯುತ್ತಾರೆ. ಆದರೆ, ಅನರ್ಹತೆಗೂ, ಉಪಚುನಾವಣೆಗೂ ಸಂಬಂಧವಿಲ್ಲ. ಯಾವುದೇ ಒಂದು ಕ್ಷೇತ್ರ ತೆರವುಗೊಂಡರೆ ಆರು ತಿಂಗಳೊಳಗಾಗಿ ಅದನ್ನು ಭರ್ತಿ ಮಾಡಬೇಕಿರುವುದು ಸಾಂವಿಧಾನಿಕ ಅಗತ್ಯತೆಯಾಗಿದೆ ಎಂದು ಪೊನ್ನಣ್ಣ ಅವರ ವಾದವಾಗಿದೆ.
ಹೈಕೋರ್ಟ್ ಅಂಗಳಕ್ಕೆ ಬರುತ್ತಾ?: ಈ ಪ್ರಕರಣ ಹೈಕೋರ್ಟ್ ಅಂಗಳಕ್ಕೆ ಬರುತ್ತಾ ಎಂಬ ಪ್ರಶ್ನೆಗೆ ವಕೀಲ ಅರುಣ್ ಶ್ಯಾಮ್ ಅವರು, ಅದರ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳುತ್ತಾರೆ. ಏಕೆಂದರೆ, ರಾಜೀನಾಮೆ ಕೊಟ್ಟ 15 ಶಾಸಕರು ‘ತಮ್ಮ ರಾಜೀನಾಮೆಯನ್ನು ಬೇಗ ಅಂಗೀಕರಿಸುವಂತೆ ಸ್ಪೀಕರ್ ಅವರಿಗೆ ನಿರ್ದೇಶನ ನೀಡಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. ಈಗ ಸ್ಪೀಕರ್ ಅವರು ಅನರ್ಹಗೊಳಿಸಿ ತೀರ್ಪು ಪ್ರಕಟಿಸಿದ್ದರಿಂದ ಸುಪ್ರೀಂಕೋರ್ಟ್‌ನಲ್ಲಿರುವ ಅರ್ಜಿಯಲ್ಲಿನ ಮನವಿ ‘ಅಪ್ರಸ್ತುತ’ (ಇನ್‌ಫ್ಲೆಕ್ಚುಯೆಸ್) ಆಗಲಿದೆ. ಹಾಗಾಗಿ, ಕರ್ನಾಟಕದ ಶಾಸಕರ ಪ್ರಕರಣ ಆಗಿರುವುದರಿಂದ ಸ್ಪೀಕರ್ ತೀರ್ಪನ್ನು ಮೊದಲು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಎಂದು ಅರ್ಜಿದಾರರಿಗೆ ಹೇಳಬಹುದು ಅಥವಾ ನೇರವಾಗಿ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಹೈಕೋರ್ಟ್‌ಗೆ ವರ್ಗಾಯಿಸಬಹುದು ಅನ್ನುವುದು ಹೈಕೋರ್ಟ್ ವಕೀಲ ಅರುಣ್ ಶ್ಯಾಮ್ ಅವರ ಸಮರ್ಥನೆಯಾಗಿದೆ.
-ರಫೀಕ್ ಅಹ್ಮದ್