ಬಂಗಾರಪೇಟೆ: ತಾಲೂಕಿನ ಡಿ.ಕೆ.ಹಳ್ಳಿ ಗ್ರಾಪಂನ ಫ್ಲಾಂಟೇಷನ್‌ನ ಸರ್ವೆ 57 ಮತ್ತು 58ರಲ್ಲಿ ಸರ್ಕಾರಿ ಗೋಮಾಳ ಜಮೀನುಗಳ ಮೇಲೆ ಭೂಗಳ್ಳರ ಕಣ್ಣು ಬಿದ್ದಿದ್ದು, ಎಲ್ಲಲ್ಲಿ ಸರ್ಕಾರದ ಗೋಮಾಳ ಜಮೀನು ಇದೆಯೋ ಅಕ್ಕಪಕ್ಕದಲ್ಲಿರುವ ಭೂ ಮಾಫಿಯಾ ಕೈಹಾಕಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅಕ್ರಮ ಲೇಔಟ್ ನಿರ್ಮಾಣ ಮಾಡುತ್ತಿರುವುದರ ಬಗ್ಗೆ ಉದಯವಾಣಿಯಲ್ಲಿ ಪ್ರಕಟಣೆಗೊಂಡ ಸುದ್ದಿ ಹಿನ್ನೆಲೆ ತಹಶೀಲ್ದಾರ್ ರಶ್ಮಿ ಹಾಗೂ ತಾಪಂ ಇಒ ರವಿಕುಮಾರ್ ದಿಢೀರ್ ಭೇಟಿ ನೀಡಿ ಸರ್ವೆ ನಡೆಸಿ ಪರಿಶೀಲನೆ ಮಾಡಿದರು.
ಈ ವಿವಾದಿತ ಲೇಔಟ್ ನಿರ್ಮಾಣ ದ ಬಗ್ಗೆ ತಹಶೀಲ್ದಾರ್ ಯು.ರಶ್ಮಿ ಆಕ್ಷೇಪ ವ್ಯಕ್ತ ಪಡಿಸಿ ಕಾಮಗಾರಿ ನಡೆಯದಂತೆ ಸೂಚನೆ ನೀಡಿದ್ದರೂ, ಏಕಾಏಕಿ ಲೇಔಟ್ ನಿರ್ಮಾಣ ಮಾಡುತ್ತಿರುವ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ಸುದ್ದಿ ನೋಡಿದ ತಕ್ಷಣ ತಾಲೂಕು ಸರ್ವೆಯರ್‌ಗೆ ಸೂಚನೆ ನೀಡಿ ಈ ಕೂಡಲೇ ಸರ್ವೆ ನಂ. 57 ಮತ್ತು 58 ಜಮೀನು ಗುರುತಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆ ಅಧಿಕಾರಿಗಳ ಸಮ್ಮುಖದಲ್ಲೇ ಸರ್ವೆ ಕಾರ್ಯ ನಡೆಸಿದರು. ಈ ಅಕ್ರಮ ಲೇಔಟ್ ನಿರ್ಮಾಣ ಮಾಡುತ್ತಿ ರುವ ವ್ಯಕ್ತಿಗಳು ಕೆಲವು ನಕಲಿ ದಾಖಲೆ ಇಟ್ಟು ಕೊಂಡು ಅಕ್ರಮವಾಗಿ ಸರ್ಕಾರಿ ಗೋಮಾಳ ಜಮೀನು ಲಪಟಾಯಿಸಿ, ಕನಿಷ್ಠ ಐದಾರು ಜನರಿಗೆ ಮಾರಾಟ ಮಾಡಿರುವ ಹಾಗೇ ಜಮೀನು ಬದಲಾವಣೆ ಮಾಡುವುದೇ ಕಾಯಕವಾಗಿದೆ ಎಂದು ದೊಡ್ಡೂರು ಕರಪನಹಳ್ಳಿ ಗ್ರಾಮದ ಗಿರೀಶ್ ಬಿನ್ ಶ್ರೀನಿವಾಸ್ ಎಂಬುವವರು ತಹಶೀ ಲ್ದಾರ್‌ರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಸರ್ವೆ ಮಾಡಲು ಪುರಾತನ ಕಾಲದಲ್ಲಿ ಗಡಿಗಳನ್ನು ಗುರುತಿಸುವ ಕಲ್ಲು ಮಾಯವಾಗಿವೆ.
ಪುರಾತನ ಕಾಲದಿಂದಲೂ ಇಲ್ಲಿ ರಾಜಕಾಲುವೆ ವಿಸ್ತಾರವಾಗಿ ರುವುದನ್ನು ಸಣ್ಣದಾಗಿ ಮಾಡಿ ರಾಜಕಾಲುವೆ ಯನ್ನೇ ನುಂಗಿದ್ದಾರೆ ಎಂದು ಆರೋಪಿಸಿದ್ದರು. ಇಲಾಖೆಯಿಂದ ಹಾಕಿರುವ ಕಲ್ಲುಗಳೇ ಮಾಯ: ಶುಕ್ರವಾರ ಮಧ್ಯಾಹ್ನ ವೇಳೆಗೆ ಸರ್ವೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸರ್ವೆ ಆರಂಭಿ ಸಿದರು. ಈ ವೇಳೆಯಲ್ಲಿ ತಹಶೀಲ್ದಾರ್ ಹಾಗೂ ತಾಪಂ ಇಒ ಸಮ್ಮುಖದಲ್ಲಿಯೇ ಎರಡು ಗುಂಪು ಗಳ ನಡುವೆ ವಾದ-ವಿವಾದ ನಡೆದವು. ಸರ್ವೆ ಯನ್ನು ಗುರು ತಿಸಲು ಇಲಾಖೆಯಿಂದ ಹಾಕಿರುವ ಕಲ್ಲುಗಳೇ ಮಾಯಾವಾಗಿವೆ. ಅಕ್ರಮವಾಗಿ ಲೇಔಟ್ ನಿರ್ಮಾಣ ಮಾಡುವ ವೇಳೆ ಜಮೀನು ಸಮತಟ್ಟು ಮಾಡುವ ಸಂದರ್ಭದಲ್ಲಿ ಕಲ್ಲುಗಳನ್ನು ಉದ್ದೇಶಪೂರ್ವಕವಾಗಿ ಕಿತ್ತೆಸುದಿದ್ದಾರೆ ಎನ್ನಲಾಗಿದೆ.
ಸಂಜೆಯವರೆಗೂ ಸರ್ವೆ ಮಾಡಿದರೂ ಸರ್ವೆ ನಂ.57 ಮತ್ತು 58ರ ಸ್ಪಷ್ಟ ಚಿತ್ರಣ ಸಿಗದೇ ಇರುವುದರಿಂದ ಇಟಿಎಸ್ ಸರ್ವೆ ಮಾಡಿಸಲು ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ. ಡಿ.ಕೆ. ಹಳ್ಳಿ ಗ್ರಾಪಂ ಅಧ್ಯಕ್ಷ ಜೆ.ಸುರೇಶ್, ಪಿಡಿಒ ವಿ. ಭಾಸ್ಕರ್, ಕಾರ್ಯದರ್ಶಿ ದಾದಾಪೀರ್, ಸರ್ವೆ ಯರ್ ತೌಸಿಪ್, ಗ್ರಾಮಲೆಕ್ಕಿಗ ವಿನಯ್ ಇದ್ದರು. ತಾಲೂಕಿನ ಡಿ.ಕೆ.ಹಳ್ಳಿ ಗ್ರಾಪಂನ ಫ್ಲಾಂಟೇಶನ್ ಸರ್ವೆ ನಂ. 57 ಮತ್ತು 58ರಲ್ಲಿ ವಿವಾದಿತ ಲೇಔಟ್ ನಿರ್ಮಾಣದ ಬಗ್ಗೆ ಹಲವಾರು ದೂರು ಬಂದಿವೆ.
ಈ ಹಿಂದೆ ಕಾಮಗಾರಿ ನಿಲ್ಲಿಸುವಂತೆ ಸೂಚನೆ ನೀಡಿದ್ದರೂ ಕೆಲಸ ಮಾಡುತ್ತಲೇ ಇದ್ದಾರೆ. ಲೇಔಟ್ ನಿರ್ಮಾಣ ಮಾಡುತ್ತಿರುವವರು ಸಂಬಂಧಪಟ್ಟ ಮೂಲ ದಾಖಲೆ ನೀಡುವಂತೆ ಸೂಚನೆ ನೀಡಿದ್ದು, ಈ ದಾಖಲೆಗಳನ್ನು ಕಂದಾಯ ಇಲಾಖೆಯಲ್ಲಿ ಹಾಗೂ ಭೂ ಪರಿವರ್ತನೆ ದಾಖಲೆ ಪರಿಶೀಲನೆ ಮಾಡುವವರೆಗೂ ಯಾವುದೇ ಕೆಲಸ ಮಾಡದಂತೆ ತಡೆಹಿಡಿಯಲು ಗ್ರಾಪಂ ಪಿಡಿಒಗೆ ಸೂಚನೆ ನೀಡಲಾಗಿದೆ.
– ಯು.ರಶ್ಮಿ, ತಹಶೀಲ್ದಾರ್