ಅಫಜಲಪುರ: ಹೊರಗುತ್ತಿಗೆ ನೌಕರರ ವೇತನದಲ್ಲಿ ಸುಮಾರು 4.5 ಲಕ್ಷ ರೂ.ಗೂ ಹೆಚ್ಚು ಅವ್ಯವಹಾರವಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹೊರಗುತ್ತಿಗೆ ನೌಕರರು ಬುಧವಾರ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದರು.
ಈ ಕುರಿತಂತೆ ಪ್ರಥಮ ದರ್ಜೆ ಸಹಾಯಕ ಶ್ರೀಶೈಲ ಸಾಲೋಟಗಿಯನ್ನು ತರಾಟೆ ತೆಗೆದುಕೊಂಡ ಹೊರಗುತ್ತಿಗೆ ಕಾರ್ಮಿಕರು ತಾಲೂಕಿನಲ್ಲಿ ಒಟ್ಟು 32 ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿ ತಿಂಗಳು ಅವರ ಸಂಬಳದಲ್ಲಿ ಶೇ. 2ರಷ್ಟು ಟಿಡಿಎಸ್ ಕಡಿತವಾಗಿ ಉಳಿದ ಹಣ ಸಂದಾಯವಾಗಬೇಕು. ಆದರೆ ನೀವು ಎಸ್‌ಟಿಒ ಮೌಖೀಕ ಆದೇಶದ ಮೇರೆಗೆ ಶೇ. 20ರಷ್ಟು ಟಿಡಿಎಸ್ ಕಡಿತಗೊಳಿಸಿದ್ದಾಗಿ ಒಪ್ಪಿಕೊಂಡಿದ್ದಿರಿ. ಈ ಕುರಿತು ಎಸ್‌ಟಿಒ ಅವರನ್ನು ದೂರವಾಣಿ ಮುಖಾಂತರ ಕೇಳಿದರೆ ಅವರು ಇದನ್ನು ತಳ್ಳಿಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ರಾಜು ಆರೇಕರ್, ಎಸ್‌ಟಿಒ ಅವರು ದೂರವಾಣಿಯಲ್ಲಿ ಈ ಆರೋಪ ತಳ್ಳಿ ಹಾಕಿದ್ದು, ಸರ್ಕಾರಿ ಆದೇಶವಿಲ್ಲದ್ದನ್ನು ಮಾಡಲು ಬರುವುದಿಲ್ಲ. ಯಾವುದೇ ಮೌಖೀಕ ಆದೇಶ ನೀಡಿಲ್ಲ ಎಂದಿದ್ದಾರೆ. ಹಾಗಾದರೆ ಒಬ್ಬ ನೌಕರರಿಂದ ಪ್ರತಿ ತಿಂಗಳಿಗೆ ಎರಡು ಸಾವಿರ ರೂ. ಉಳಿಕೆಯಾಗುತ್ತಿದೆ. ಈ ಹಣ ಏನಾಗಿದೆ? ಏನು ಮಾಡಿದ್ದೀರಿ ಎಂದು ಪ್ರಥಮ ದರ್ಜೆ ಸಹಾಯಕರನ್ನು ಪ್ರಶ್ನಿಸಿದರೆ ವಾರದೊಳಗೆ ಸೆಟಲ್‌ಮೆಂಟ್ ಮಾಡುತ್ತೇನೆ. ನೀವ್ಯಾಕೆ ಕಚೇರಿಗೆ ಬಂದಿದ್ದೀರಿ ಎಂದು ಜೋರು ಮಾಡುತ್ತಿದ್ದಿರಾ ಎಂದು ತರಾಟೆ ತೆಗೆದುಕೊಂಡರು.
ಮುಖಂಡರಾದ ಶ್ರೀಶೈಲ ಸಿಂಗೆ, ರವಿ ಗೌರ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಇಲ್ಲಿನವರಿಗೆ ಯಾರು ಹೇಳುವವರು ಇಲ್ಲದಂತಾಗಿದೆ. ಪದೆ ಪದೇ ಸೆಟಲ್ ಮೆಂಟ್ ಎನ್ನುತ್ತಾರೆ. ಇವರು ಸರ್ಕಾರಿ ನೌಕರರೋ ಅಥವಾ ರಿಯಲ್ ಎಸ್ಟೇಟ್ ಬ್ರೋಕರೋ ತಿಳಿಯುತ್ತಿಲ್ಲ. ಕಡಿತಗೊಳಿಸಿದ ಹಣವನ್ನು ನೌಕರರಿಗೆ ವಿತರಿಸಬೇಕು. ಇಲ್ಲದಿದ್ದರೆ ಪ್ರ.ದ ಸಹಾಯಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡರಾದ ಶಾಮರಾವ್ ದೊಡ್ಮನಿ ಬಂದರವಾಡ, ರಾಜು ಹೊಸ್ಮನಿ, ಜೈಭೀಮ ಹೊಸ್ಮನಿ ಹಾಗೂ 32 ಜನ ಹೊರ ಗುತ್ತಿಗೆ ನೌಕರರು ಈ ಸಂದರ್ಭದಲ್ಲಿದ್ದರು.
ಎರಡು ದಿನಗಳಲ್ಲಿ ಸಂಪೂರ್ಣ ಮಾಹಿತಿ ಪಡೆದು ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅವ್ಯವಹಾರ ವಾದ ಎಲ್ಲ ಹಣವನ್ನು ಪ್ರಥಮ ದರ್ಜೆ ಸಹಾಯಕ ಹಾಗೂ ಅವರಿಗೆ ಸಹಕರಿಸಿದವರಿಂದ ಪಡೆದು ಹೊರಗುತ್ತಿಗೆ ನೌಕರರ ಖಾತೆಗೆ ಜಮಾ ಮಾಡಲಾಗುತ್ತದೆ.
• ಚೇತನ ಗುರಿಕಾರ,ತಾಲೂಕು ಸಮಾಜ ಕಲ್ಯಾಣಾಧಿಕಾರಿ