ಭಟ್ಕಳ: ಅರಣ್ಯ ಹಕ್ಕು ಕಾಯಿದೆಯಡಿ ಸಲ್ಲಿಸಿದ ಅರ್ಜಿಯನ್ನು ಕಾನೂನಿನಲ್ಲಿ ಉಲ್ಲೇಖೀಸಿದಂತೆ ಕ್ಲೇಮಿನ ಪರಿಗಣನೆಗಾಗಿ ನಿರ್ದಿಷ್ಟ ದಾಖಲಾತಿ ಸಾಕ್ಷ್ಯಗಳನ್ನು ಒತ್ತಾಯಿಸದೇ ಮಂಜೂರಿ ಪ್ರಕ್ರಿಯೆ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ತಕರಾರು ಸಲ್ಲಿಸುವ ಅಭಿಯಾನ ಭಟ್ಕಳ ತಾಲೂಕಿನಲ್ಲಿ ಫೆ.19 ರಂದು ಸಂಘಟಿಸಲು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕರ ಅಧ್ಯಕ್ಷತೆಯಲ್ಲಿ ನಗರದ ಸತ್ಕಾರ ಹೋಟೇಲ್‌ನ ಸಭಾಂಗಣದಲ್ಲಿ ನಡೆದ ತಾಲೂಕು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದ ಸಮಿತಿ ಕ್ಲೇಮುಗಳನ್ನು ನಿರ್ಧರಿಸುವಾಗ ಕ್ಲೇಮಿನ ಮಂಜೂರಿ ಪರಿಗಣನೆಗಾಗಿ ನಿರ್ದಿಷ್ಟ ದಾಖಲಾತಿ ಸಾಕ್ಷವನ್ನು ಆಗ್ರಹಿಸಲು ಒತ್ತಾಯಿಸತಕ್ಕದ್ದಲ್ಲ ಎಂದು ಅರಣ್ಯ ಹಕ್ಕು ಕಾಯಿದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಅಲ್ಲದೇ 75 ವರ್ಷದ ಅತಿಕ್ರಮಣ ಸ್ಥಳದ ಸ್ವಾಧೀನತೆ ದಾಖಲೆ ಅವಶ್ಯಕತೆ ಇಲ್ಲ. ಪಾರಂಪರಿಕ ಅರಣ್ಯವಾಸಿಗಳು ವಾಸಿಸುವ ಪ್ರದೇಶವು 75 ವರ್ಷದ ಜನ ವಸತಿ ಪ್ರದೇಶದ ಆಧಾರದ ಮೇಲೆ ಸಾಗುವಳಿ ಹಕ್ಕು ನೀಡಬಹುದೆಂದು ಕೇಂದ್ರ ಬುಡಕಟ್ಟು ಮಂತ್ರಾಲಯವು ಸಹಿತ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು ಮಂಜೂರಿಗೆ ಸುಗಮವಾಗಿದೆ.
ಜಿಲ್ಲೆಯಲ್ಲಿ ಪಾರಂಪರಿಕ ಅರಣ್ಯವಾಸಿಗಳ 63,002 ಅರ್ಜಿಯಲ್ಲಿ ಅರ್ಜಿದಾರರಿಗೆ ವೈಯಕ್ತಿಕ ಮೂರು ತಲೆಮಾರಿನ ದಾಖಲೆ ಸಾಕ್ಷಕ್ಕೆ ಒತ್ತಾಯಿಸಿ ಅರ್ಜಿಗಳನ್ನು ತಿರಸ್ಕರಿಸಿರುವುದರಿಂದ ಜಿಲ್ಲಾದ್ಯಂತ ಅತಿಕ್ರಮಣದಾರರು ವೈಯಕ್ತಿಕವಾಗಿ ಜಿಲ್ಲಾಧಿಕಾರಿಗಳಿಗೆ ತಕರಾರು ಸಲ್ಲಿಸುವ ಅಭಿಯಾನ ಜಿಲ್ಲಾದ್ಯಂತ ಪ್ರಾರಂಭಿಸಲಾಗಿದೆ ಎಂದೂ ತಿಳಿಸಲಾಗಿದೆ.
ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಖಯೂಮ ಸಾಬ, ಮಾದೇವ ನಾಯ್ಕ ಹಾಡವಳ್ಳಿ, ಜಿಲ್ಲಾ ಸಂಚಾಲಕ ಅಲಿ, ಮುನೀರ ಸಾಬ, ಅಬ್ದುಲ್ ಸಾಬ ಮುಂತಾದವರು ಹಾಜರಿದ್ದರು.