ಬೆಂಗಳೂರು: ಲೋಕಸಭಾ ಚುನಾವಣೆಗೆ ಹಣ ಮಾಡುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಕೆಲ ಅಧಿಕಾರಿಗಳು ಕೆಆರ್ ಐಡಿಎಲ್ ಮೂಲಕ ಆಹ್ವಾನಿಸಿದ ಟೆಂಡರ್‌ನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಎನ್.ಆರ್. ರಮೇಶ್ ಆರೋಪಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಲೋಕೋಪ ಯೋಗಿ ಇಲಾಖೆ ಮೂಲಕ ನಡೆಸಲಾಗುವ ಕಾಮಗಾರಿಗಳಿಗೆ ಹೆಚ್ಚುವರಿ ಮೊತ್ತ ನಮೂದಿಸಿ 611 ಕೋಟಿ ರೂ. ಕಿಕ್‌ಬ್ಯಾಕ್ ಪಡೆಯಲಾಗಿದೆ. ಹೀಗಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಹಾಗೂ ಐದು ಅಧಿಕಾರಿಗಳ ವಿರುದ್ಧ ಎಸಿಬಿ ಹಾಗೂ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆ ಯಿಂದ 2018-19ನೇ ಸಾಲಿನಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಮೂಲಕ 10 ಪ್ಯಾಕೇಜ್‌ಗಳಲ್ಲಿ 1,433 ಕೋಟಿ ರೂ. ಮೊತ್ತದ ಟೆಂಡರ್ ಪ್ರಕ್ರಿಯೆ ನಡೆದಿದೆ.
2017-18ನೇ ಅವಧಿಯಲ್ಲಿ 15 ಪ್ಯಾಕೇಜ್‌ನಲ್ಲಿ 1,714 ಕೋಟಿ ರೂ. ಹಾಗೂ 25 ಪ್ಯಾಕೇಜ್‌ನಲ್ಲಿ 2,552 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿಗಳಿಗೆ 611 ಕೋಟಿ ರೂ. ಗಳಷ್ಟು ಅಧಿಕ ಮೊತ್ತ ಸೇರಿ 3,163 ಕೋಟಿ ರೂ.ಗಳಿಗೆ
ಅನುಮೋದನೆ ಪಡೆದು ಅಕ್ರಮ ನಡೆಸಲಾಗಿದೆ ಎಂದು ದೂರಿದರು.
ಲೋಕಸಭಾ ಚುನಾವಣೆಗೂ ಮೊದಲು ಕೆಟಿಪಿಪಿ ಕಾಯ್ದೆಗೆ ವಿರುದ್ಧವಾಗಿ ಆತುರವಾಗಿ 1,433 ಕೋಟಿ ರೂ. ಮೊತ್ತದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗಳಿಗೆ ಅನುಮೋದನೆ ನೀಡಲಾಗಿದೆ. ಸ ಚಿವ ಎಚ್.ಡಿ.ರೇವಣ್ಣಸೂಚನೆಯಂತೆ ಟೆಂಡರ್‌ನಲ್ಲಿ ಭಾರಿ ಅಕ್ರಮ ನಡೆದಿದೆ. ಹೀಗಾಗಿ ಕೆಆರ್ ಐಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿವಕುಮಾರ್, ಐಎಎಸ್ ಅಧಿಕಾರಿಗಳಾದ ರಜನೀಶ್ ಗೋಯಲ್, ಏಕರೂಪ್ ಕೌರ್, ನವೀನ್ ರಾಜ್ ಸಿಂಗ್, ಡಾ.ಸಂದೀಪ್ ದಾವೆ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣಾರೆಡ್ಡಿ ಸೇರಿ 10 ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.