ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕಾರ್ಯಾಂಗದ (ಆಡಳಿತ)ದ ಆಯಕಟ್ಟಿನ ಹುದ್ದೆಗಳಲ್ಲಿ ಭಾರೀ ಸ್ಥಾನಪಲ್ಲಟ ನಡೆಯುವ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೂಡ ಉನ್ನತ ಹುದ್ದೆಗಳಿಗೆ ಸರ್ಜರಿ ಮಾಡಲು ಸಿದ್ಧತೆ ನಡೆಸಿದೆ. ಇದರಲ್ಲಿ ಪ್ರಮುಖವಾಗಿ ಆಡಳಿತ ಹಾಗೂ ಸಿಬ್ಬಂದಿ ಸುಧಾರಣಾ ಇಲಾಖೆ (ಡಿಪಿಎಆರ್), ಲೋಕೋಪಯೋಗಿ, ಗೃಹ ಇಲಾಖೆಯಲ್ಲಿ ಭಾರೀ ಬದಲಾವಣೆಗಳಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಡಿಪಿಎಆರ್ ಕಾರ್ಯದರ್ಶಿಗಳು, ರಾಜ್ಯ ಗುಪ್ತಚರ ದಳದ ಮುಖ್ಯಸ್ಥರು, ನಗರ ಪೊಲೀಸ್ ಆಯುಕ್ತರು, ವಲಯ ಐಜಿಪಿಗಳ ಹುದ್ದೆಗಳಲ್ಲಿ ಬದಲಾವಣೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಧಿಕಾರಿಗಳಿಂದ ಲಾಭಿ ಶುರು: ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ನಡೆದ ಲೋಕೋಪಯೋಗಿ, ಪೊಲೀಸ್ ಇಲಾಖೆಯ ಕೆಲ ಹುದ್ದೆಗಳ ವರ್ಗಾವಣೆ ರದ್ದುಗೊಳ್ಳುವುದನ್ನು ತಳ್ಳಿ ಹಾಕುವಂತಿಲ್ಲ. ಮತ್ತೂಂದೆಡೆ, ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿರುವ ಬೆನ್ನಲ್ಲೇ ಆಯಕಟ್ಟಿನ ಹುದ್ದೆಗಳಲ್ಲಿ ಪ್ರತಿಷ್ಠಾಪನೆಗೊಳ್ಳುವ ಸಲುವಾಗಿ ಅಧಿಕಾರಿಗಳ ವರ್ಗ ಲಾಭಿ ಶುರು ಮಾಡಿದೆ. ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಬೆಂಗಳೂರಿನ ಕಚೇರಿಗಳಿಗೆ ವರ್ಗಾವಣೆಗೊಳ್ಳ ಬಹುದು. ಸಮ್ಮಿಶ್ರ ಸರ್ಕಾರದ ನೆರಳಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದ ಹಲವು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ವರ್ಗಾವಣೆಯಾಗುವ ಆತಂಕ ಎದುರಿಸುತ್ತಿದ್ದಾರೆ.
ಅಧಿಕಾರಿಗಳಿಗೆ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸುವ ಅದೃಷ್ಟ ಕೂಡ ರಾಜಕೀಯ ಪಕ್ಷಗಳ ನಡುವೆ ಹೊಂದಿರುವ ಒಡನಾಟ, ಜಾತಿ ಲೆಕ್ಕಾಚಾರದ ಮೇಲೆಯೂ ಅವಲಂಬಿತವಾಗಿರಲಿದೆ ಎಂಬ ಸಂಗತಿ ಗುಟ್ಟಾಗಿ ಏನೂ ಉಳಿದಿಲ್ಲ. ಸರ್ಕಾರಗಳು ಬದಲಾದ ಮೇಲೆ ನಡೆಯುವ ಸಾಮಾನ್ಯ ಪ್ರಕ್ರಿಯೆ ಇದಾಗಿ ಬಿಟ್ಟಿದೆ ಎಂದು ನಿವೃತ್ತ ಅಧಿಕಾರಿಯೊಬ್ಬರು ಹೇಳುತ್ತಾರೆ.
Advertisement
ಪ್ರತಿ ಬಾರಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಆಡಳಿತದ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಆಯಕಟ್ಟಿನ ಹುದ್ದೆಗಳ ‘ಮೇಜರ್ ಸರ್ಜರಿ’ ನಡೆಸುವ ವಾಡಿಕೆಯಿದೆ. ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ, ಹದಿನಾಲ್ಕು ತಿಂಗಳು ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರ ಕೂಡ ಉನ್ನತ ಹುದ್ದೆಗಳ ಸ್ಥಾನಪಲ್ಲಟಕ್ಕೆ ಕೈ ಹಾಕಿತ್ತು.
Related Articles
ಕನ್ನಡಿಗರಿಗೆ ಸಿಗಲಿದೆಯೇ ಸಿಟಿ ಕಮಿಷನರ್ ಹುದ್ದೆ?:
ಐಪಿಎಸ್ ಆಧಿಕಾರಿಗಳ ಸ್ಥಾನಪಲ್ಲಟ ಸಾಧ್ಯವಾದರೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆ ಹಲವು ವರ್ಷಗಳ ನಂತರ ಕನ್ನಡಿಗ ಐಪಿಎಸ್ ಅಧಿಕಾರಿಯೊಬ್ಬರ ಪಾಲಾಗಲಿದೆ. ಐಜಿಪಿ ಹುದ್ದೆಯನ್ನು ಎಡಿಜಿಪಿ ಹುದ್ದೆಗೆ ಮೇಲ್ದರ್ಜೆಗೆ ಏರಿಸಿ ಅಲೋಕ್ ಕುಮಾರ್ ಅವರನ್ನು ಸಮ್ಮಿಶ್ರ ಸರ್ಕಾರ ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕಗೊಳಿಸಿ ರಾತ್ರೋ ರಾತ್ರಿ ಆದೇಶ ಹೊರಡಿಸಿತ್ತು. ಆಯುಕ್ತರ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದ ಹಿರಿಯ ಐಪಿಎಸ್ ಅಧಿಕಾರಿಗಳ ಸೇವಾ ಹಿರಿತನ ಕಡೆಗಣಿಸಿ ಅಲೋಕ್ ಕುಮಾರ್ ಅವರಿಗೆ ಆಯುಕ್ತರ ಹುದ್ದೆ ಅವಕಾಶ ಲಭಿಸಿದ್ದಕ್ಕೆ ಇಲಾಖೆಯೊಳಗೆ ಅಪಸ್ವರ ಕೇಳಿ ಬಂದಿತ್ತು. ಸದ್ಯ, ನಗರ ಪೊಲೀಸ್ ಆಯುಕ್ತರ ಹುದ್ದೆಯ ರೇಸ್‌ನಲ್ಲಿ ಕೆಎಸ್‌ಆರ್‌ಪಿ ಎಡಿಜಿಪಿ ಕನ್ನಡಿಗರಾದ ಭಾಸ್ಕರ್‌ರಾವ್, ಎಡಿಜಿಪಿಗಳಾದ ಪ್ರತಾಪ್ ರೆಡ್ಡಿ, ಸುನೀಲ್ ಅಗರ್‌ವಾಲ್, ಆರ್.ಪಿ ಶರ್ಮಾ, ಕಮಲ್ಪಂಥ್ ಇದ್ದು ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
● ಮಂಜುನಾಥ್ ಲಘುಮೇನಹಳ್ಳಿ
Advertisement