Advertisement

ಯುರೋಪ್‌ ಮಾದರಿ ಕಸದ ವಿಲೇವಾರಿ!

03:32 PM Oct 25, 2021 | Team Udayavani |

ಬೆಳಗಾವಿ: ಯುರೋಪ್‌ ಮಾದರಿಯ ಅತ್ಯಾಧುನಿಕ ಕಸ ಸಂಗ್ರಹಣೆ ವ್ಯವಸ್ಥೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಬೆಳಗಾವಿ ನಗರದಲ್ಲಿ ಜಾರಿಯಾಗುತ್ತಿದೆ. ಈ ಮೂಲಕ ಬೆಳಗಾವಿ ಹೈಟೆಕ್‌ ನಗರವಾಗುವ ನಿಟ್ಟಿನಲ್ಲಿ ಮತ್ತೂಂದು ದಿಟ್ಟ ಹೆಜ್ಜೆಯಿಟ್ಟಿದೆ.

Advertisement

ಬೆಳಗಾವಿ ನಗರ ಅದರಲ್ಲೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ದಿನಕ್ಕೊಂದು ಹೊಸ ವಿಶಿಷ್ಟ ಯೋಜನೆಗಳನ್ನು ಅಳವಡಿಸುತ್ತಿರುವ ಶಾಸಕ ಅಭಯ ಪಾಟೀಲ ಈ ವಿನೂತನ ಯೋಜನೆ ಮೂಲಕ ಪ್ರಗತಿಯ ಹಾದಿಯಲ್ಲಿ ಹೊಸ ಹೆಜ್ಜೆ ತುಳಿದಿದ್ದಾರೆ.

ಈಗಾಗಲೇ ದಕ್ಷಿಣ ಕ್ಷೇತ್ರದಲ್ಲಿ ಹೈಟೆಕ್‌ ಡಿಜಿಟಲ್‌ ಲೈಬ್ರರಿ, ಬುದ್ಧಿಮಾಂದ್ಯ-ವಿಕಲ ಚೇತನ ಮಕ್ಕಳ ಮನರಂಜನೆಗೆ ವಿಶೇಷ ಪಾರ್ಕ್‌, ತಿನಿಸು ಕಟ್ಟೆ (ಖಾವು ಕಟ್ಟಾ) ನಿರ್ಮಾಣ ಜೊತೆಗೆ ವ್ಯಾಕ್ಸಿನ್‌ ಡಿಪೋ ಆವರಣದಲ್ಲಿ ಎವಿಯೇಶನ್‌ ಸೆಂಟರ್‌ ಮತ್ತು ನಾಥ ಪೈ ಸರ್ಕಲ್‌ ಬಳಿಯ ರಸ್ತೆಯ ಡಿವೈಡರ್‌ ಜಾಗದಲ್ಲಿ ಬೀದಿ ವ್ಯಾಪಾರಿಗಳಿಗೆ ವಿಶೇಷ ಮಳಿಗೆ ನಿರ್ಮಾಣ ಸೇರಿದಂತೆ ಹತ್ತು ಹಲವು ವಿಶೇಷ ಸವಲತ್ತುಗಳನ್ನು ತಂದು ಕೊಟ್ಟಿರುವ ಅಭಯ ಪಾಟೀಲ ಈಗ ಸ್ವತ್ಛತೆಯ ವಿಚಾರದಲ್ಲೂ ಹೈಟೆಕ್‌ ಮಾದರಿ ಅನುಸರಿಸಲು ಮುಂದಾಗಿದ್ದಾರೆ.

ನಗರದಲ್ಲಿ ಕಸದ ಸಂಗ್ರಹ ಹಾಗೂ ವಿಲೇವಾರಿ ಸಮಸ್ಯೆ ಹೊಸದೇನಲ್ಲ. ಸಾರ್ವಜನಿಕರು ಪದೇ ಪದೇ ಕಸದ ವಿಲೇವಾರಿ ಸಮಸ್ಯೆ ಬಗ್ಗೆ ದೂರು ನೀಡುತ್ತಿದ್ದರೂ ಅದಕ್ಕೆ ಪರಿಹಾರ ಸಿಕ್ಕಿಲ್ಲ. ಮಹಾನಗರಪಾಲಿಕೆ ಇದಕ್ಕಾಗಿ ಕೋಟಿಗಟ್ಟಲೇ ಹಣ ವೆಚ್ಚ ಮಾಡುತ್ತಿದ್ದರೂ ಸಮಸ್ಯೆ ಹಾಗೆಯೇ ಉಳಿದಿದೆ. ಪಾಲಿಕೆಯ ನಿರ್ಲಕ್ಷದಿಂದ ಬೇಸತ್ತಿದ್ದ ಪಾಟೀಲ ಸ್ವತಃ ಪಾಲಿಕೆ ಆಯುಕ್ತರ ಮನೆಯ ಮುಂದೆ ಕಸ ಚೆಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದರು.

ಶಾಸಕರ ಈ ಕ್ರಮ ಭಾರೀ ಸುದ್ದಿಮಾಡಿತ್ತು. ಪಾಲಿಕೆಯಲ್ಲಿ ಮೊದಲೇ ಸಿಬ್ಬಂದಿಗಳ ಕೊರತೆ ಇದೆ. ಇನ್ನೊಂದು ಕಡೆ ಕಸ ಸಂಗ್ರಹಣೆ ವಿಷಯದಲ್ಲಿ ಸಾರ್ವಜನಿಕರು ಹಾಗೂ ಪೌರ ಕಾರ್ಮಿಕರ ನಡುವೆ ಪರಸ್ಪರ ದೂರುಗಳಿವೆ. ಸಮರ್ಪಕ ಕಸ ವಿಲೇವಾರಿ ಆಗುತ್ತಿಲ್ಲ ಎಂಬು ದೂರು ಒಂದು ಕಡೆಯಾದರೆ ಸಾರ್ವಜನಿಕರು ಸರಿಯಾಗಿ ಸಹಕಾರ ನೀಡುತ್ತಿಲ್ಲ ಎಂಬ ಆರೋಪ ಸಹ ಇದೆ. ಈ ಎಲ್ಲ ಕಾರಣಗಳಿಂದ ಕಸದ ಸಮಸ್ಯೆ ಬಗೆಹರಿಯದೇ ಇರುವುದನ್ನು ಮನಗಂಡ ಅಭಯ ಪಾಟೀಲ ಈಗ ತಾವೇ ಹೊಸ ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದ್ದಾರೆ.

Advertisement

ಇದನ್ನೂ ಓದಿ: ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು

ಅಂಡರ್‌ಗ್ರೌಂಡ್‌ ಹೈಡ್ರೋಲಿಕ್‌ ಕಸದ ತೊಟ್ಟಿಗಳನ್ನು ಅಳವಡಿಸುವ ಯೋಜನೆಯನ್ನು ತಮ್ಮ ಕ್ಷೇತ್ರದಲ್ಲಿ ಆರಂಭಿಸಲು ಸಿದ್ಧರಾಗಿದ್ದಾರೆ. ಈ ರೀತಿಯ ವ್ಯವಸ್ಥೆ ಭಾರತ ದೇಶದಲ್ಲೇ ಪ್ರಥಮ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಒಟ್ಟು ಎರಡು ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಪ್ರಥಮ ಹಂತದಲ್ಲಿ 30 ಕಡೆಗಳಲ್ಲಿ ಭೂಗತ ಕಸದತೊಟ್ಟಿಗಳನ್ನು ನಿರ್ಮಾಣ ಮಾಡುವದು. ಎರಡನೇ ಹಂತದಲ್ಲಿ 28 ಕಡೆ ಹಾಗೂ ಮೂರನೇ ಹಂತದಲ್ಲಿ 52 ಕಡೆಗಳಲ್ಲಿ ಇದರ ನಿರ್ಮಾಣ ಕಾರ್ಯ ನಡೆಯಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಬರುವ 15 ದಿನಗಳಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಹಾಪುರದಲ್ಲಿ ಈ ವಿನೂತನ ವ್ಯವಸ್ಥೆಯ ಈ ಕಾರ್ಯ ಆರಂಭವಾಗಲಿದೆ.

ಈ ಭೂಗತ ಹೈಡ್ರೋಲಿಕ್‌ ಕಸದತೊಟ್ಟಿಗಳಲ್ಲಿ ಶೇ.50ರಷ್ಟು ಕಸ ತುಂಬಿದರೆ ನೇರವಾಗಿ ಕಸ ವಿಲೇವಾರಿ ಮಾಡುವ ಕಾರ್ಮಿಕರಿಗೆ ಇದರ ಸಂದೇಶ ಹೋಗುತ್ತದೆ. ನಂತರ ಶೇ.70ರಿಂದ 80 ರಷ್ಟು ಕಸ ತುಂಬಿದರೂ ಅದರ ವಿಲೇವಾರಿ ಆಗದಿದ್ದರೆ ಹಿರಿಯ ಅಧಿಕಾರಿಗಳಿಗೆ ಮತ್ತು ಶಾಸಕರಿಗೆ ಸಂದೇಶ ಹೋಗುವ ವ್ಯವಸ್ಥೆ ಮಾಡಲಾಗಿದೆ. ಪ್ರತಿಶತ 100ರಷ್ಟು ಕಸ ತುಂಬಿದ ನಂತರವೂ ವಿಲೇವಾರಿ ಮಾಡದೇ ಹೋದರೆ ಆಗ ಅದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರು, ವಾಹನ ಮಾಲೀಕರು ಹಾಗೂ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ದಂಡ ಆಕರಿಸಲಾಗುವದು ಎಂದು ಶಾಸಕ ಅಭಯ ಪಾಟೀಲ ವಿವರಿಸಿದರು.

ಜನರಲ್ಲಿ ಈಗ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡುತ್ತಿದೆ. ಎಲ್ಲೆಂದರಲ್ಲಿ ಕಸ ಹಾಕಬಾರದು ಎಂಬುದು ಅವರಿಗೂ ಮನವರಿಕೆಯಾಗಿದೆ. ಈಗ ನಾವು ಅಳವಡಿಸುತ್ತಿರುವ ಹೈಡ್ರೋಲಿಕ್‌ ಕಸದ ತೊಟ್ಟಿಗಳಿಂದ ಇನ್ನಷ್ಟು ಅನುಕೂಲವಾಗಲಿದೆ. ಜನರಿಗೂ ಸಹ ಇದರಲ್ಲಿ ಕಸ ಹಾಕಲು ಬಹಳ ಸುಲಭವಾಗಲಿದೆ. ನಾವು ಮಾಡುತ್ತಿರುವ ಈ ವಿನೂತನ ಯೋಜನೆಯ ಬಗ್ಗೆ ಕೇಂದ್ರದ ಸ್ಮಾಟ್‌ ಸಿಟಿ ಅಧಿಕಾರಿಗಳು ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ ಎಂಬುದು ಅಭಯ ಪಾಟೀಲ ಅವರ ಹೆಮ್ಮೆಯ ಮಾತು.

ಕಸದ ತೊಟ್ಟಿಯಲ್ಲಿ ಒಂದು ಟನ್‌ ಕಸ ಸಂಗ್ರಹಿಸುವ ಸಾಮರ್ಥ್ಯ ಇದೆ. ಇದನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗುವ ವಾಹನವನ್ನು 45 ಲಕ್ಷ ರೂ. ವೆಚ್ಚದಲ್ಲಿ ಖರೀದಿಸಲಾಗಿದ್ದು ಮುಂದಿನ ವಾರ ಬೆಳಗಾವಿಗೆ ಈ ವಾಹನ ಬರಲಿದೆ. ಭೂಗತ ಹೈಡ್ರೋಲಿಕ್‌ ಕಸದ ತೊಟ್ಟಿಗಳನ್ನು ನಿರ್ಮಾಣ ಮಾಡುವ ಕಾರ್ಯ ಆರಂಭವಾಗಿದ್ದು ಶಹಾಪುರದಲ್ಲಿ ಈ ವಾರದಲ್ಲಿ ಇದರ ಕೆಲಸ ಪೂರ್ಣಗೊಳ್ಳಲಿದೆ.

ಇದು ದೇಶದಲ್ಲಿ ಮೊಟ್ಟಮೊದಲ ಪ್ರಯತ್ನ. ಯುರೋಪ್‌ನ ಬಹುತೇಕ ದೇಶಗಳಲ್ಲಿ ಈ ವ್ಯವಸ್ಥೆ ಇದೆ. ನಮ್ಮಲ್ಲಿನ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಇದು ಬಹಳ ಪ್ರಯೋಜನವಾಗಲಿದೆ. ಬೆಳಗಾವಿಯಲ್ಲಿ ಸುಮಾರು 500 ಕಡೆಗಳಲ್ಲಿ ಇಂತಹ ಭೂಗತ ಹೈಡ್ರೋಲಿಕ್‌ ಕಸದತೊಟ್ಟಿಗಳನ್ನು ಅಳವಡಿಸುವ ಚಿಂತನೆ ಇದೆ. ಇದು ಸಾಧ್ಯವಾದರೆ ಬೆಳಗಾವಿ ಕಸದಿಂದ ಮುಕ್ತಿ ಕಾಣಬಹುದು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆದಿದೆ. -ಅಭಯ ಪಾಟೀಲ, ಶಾಸಕರು, ಬೆಳಗಾವಿ ದಕ್ಷಿಣ

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next