ರೋಣ: ತಾಲೂಕಿನ 35 ಗ್ರಾಮ ಪಂಚಾಯತ್ ಗಳಲ್ಲಿ ನಡೆದ ಜಮಾಬಂಧಿ ಸಭೆಗಳಲ್ಲಿ ಇಲ್ಲಿಯವರೆಗೆ ಕೋರಂ ಭರ್ತಿಯಾಗುತ್ತಿಲ್ಲ. ಯಾವುದೇ ದಿನಪತ್ರಿಕೆಯಲ್ಲಿ ಪ್ರಕಟಣೆ ನೀಡುತ್ತಿಲ್ಲ. ಕಾನೂನು ಬಾಹಿರವಾಗಿ ಗ್ರಾಪಂ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ.
ಸಂಬಂಧಿಸಿದ ನೋಡಲ್ ಅಧಿಕಾರಿಯನ್ನು ಸಭೆಗೆ ಕರೆಯದೆ, ತಾವೇ ಮಾಡಿಕೊಂಡ ಜಮಾಬಂಧಿ ವರದಿ ತಾಪಂಗೆ ಸಲ್ಲಿಸುತ್ತಾರೆ. ಅಂತಹ ವರದಿ ನೀವೇಕೆ ಸ್ವೀಕಾರ ಮಾಡುತ್ತಿರಿ. ಇದರಲ್ಲಿ ನೀವು ಕೂಡಾ ಭಾಗಿಯಾಗಿದ್ದಿರಾ? ಇಲ್ಲವಾದರೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಸದಸ್ಯ ಪ್ರಭು ಮೇಟಿ ತಾಪಂ ಇಒ ಅವರನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳನ್ನು ಚರ್ಚೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಪಂ ಜಮಾಬಂಧಿಗೆ ಅಧ್ಯಕ್ಷ, ಪಿಡಿಒ ಮಾತ್ರ ಸಹಿ ಮಾಡಿಕೊಳ್ಳುತ್ತಾರೆ. ಸಂಬಂಧಿಸಿದ ನೋಡೆಲ್ ಅಧಿಕಾರಿ ಹಾಗೂ ತಾಪಂ ಅಧಿಕಾರಿಗಳ ಸಹಿ ಹೊಂದಿರದ ವರದಿಗೆ ಯಾವ ಆಧಾರದ ಮೇಲೆ ಅನುಮೋದನೆ ನೀಡುತ್ತಿರಿ ಎಂದು ವಿರೋಧ ಪಕ್ಷದ ಹಾಗೂ ಆಡಳಿತ ಪಕ್ಷದ ಸದಸ್ಯರು ಒಮ್ಮತದಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎಲ್ಲ ಗ್ರಾಪಂಗಳ ಜಮಾಬಂಧಿ ಕುರಿತು ಮಾಹಿತಿ ತರಿಸುವವರೆಗೆ ಸಭೆ ನಡೆಸದಂತೆ ಆಗ್ರಹಿಸಿದರು.
ನಂತರ ತಾ.ಪಂ ಇಒ ಸಂತೋಷ ಪಾಟೀಲ ಮಾತನಾಡಿ, ತಾಲೂಕಿನ 35 ಪಂಚಾಯತ್ ಗಳ ಜಮಾಬಂದಿ ಸಭೆ ಮತ್ತೂಮ್ಮೆ ನಿಯಮಾನುಸಾರವಾಗಿ ಮಾಡಿ ತಾಪಂಗೆ ವರದಿ ಸಲ್ಲಿಸುವಂತೆ ಎಲ್ಲ ಪಂಚಾಯತ್ ಗೆ ನೋಟಿಸ್ ಕೊಡಲು ಠರಾವು ಪಾಸ್ ಮಾಡಲಾಗಿದೆ ಎಂದು ತಿಳಿಸಿದರು. ನರೇಗಾದಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ಕುರಿತು ಸಾಮಾಜಿಕ ಲೆಕ್ಕಪತ್ರದ ವರದಿಯನ್ನು ಕಾರ್ಯರೂಪಕ್ಕೆ ತರದೆ, ದೂಳ ತುಂಬುವಂತೆ ಮಾಡಿದ್ದೀರಿ. ಕಚೇರಿಯಲ್ಲಿ ತಂದು ವರದಿ ಇಟ್ಟುಕೊಳ್ಳುವುದಾದರೆ ಸೋಶಿಯಲ್ ಆಡಿಟ್ ಮಾಡಿಸುವುದಾದರೂ ಯಾಕೆ?. ಯಾವ ಕಾಮಗಾರಿಯಲ್ಲಿ ಎಷ್ಟು ಹಣ ಮರಳಿ ಕಟ್ಟಿಸಬೇಕು ಎಂಬ ವರದಿ ಇದೆ ಎಂಬುವುದನ್ನು ಸಂಪೂರ್ಣ ಮಾಹಿತಿ ಮುಂದಿನ ಸಭೆಯಲ್ಲಿ ಕೊಡಬೇಕು ಎಂದು ಸದಸ್ಯ ಪ್ರಭು ಮೇಟಿ ತಿಳಿಸಿದರು.
ಪಟ್ಟಣದ ಡಾ| ಭೀಮಸೇನ ಜೋಶಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿಯೊಬ್ಬ ಹೊರ ರೋಗಿಯಿಂದ ಪಡೆದುಕೊಳ್ಳುವ 5 ರೂ. ಹಣ ದಿನಕ್ಕೆ ಎಷ್ಟು ಕೂಡುತ್ತದೆ. ಜೊತೆಗೆ ನಿತ್ಯ ಆಸ್ಪತ್ರೆಗೆ ಎಷ್ಟು ಜನ ರೋಗಿಗಳು ಬರುತ್ತಾರೆ ಎಂಬ ಸರಿಯಾದ ಮಾಹಿತಿ ತಂದು ಸಭೆಗೆ ಹಾಜರಾಗುವಂತೆ ತಾಲೂಕು ಆರೋಗ್ಯ ಅಧಿಕಾರಿ ಬಿ.ಎಸ್. ಭಜೇಂತ್ರಿ ಅವರನ್ನು ಸಭೆಯಿಂದ ಹೊರಹಾಕಿದರು. ಕೃಷಿ ಇಲಾಖೆ, ನೀರಾವರಿ ಇಲಾಖೆ, ಕುಡಿಯುವ ನೀರು ಮತ್ತು ನೈರ್ಮಲ್ಯ, ಲೋಕೋಪಯೋಗಿ ಸೇರಿದಂತೆ ಅನೇಕ ಇಲಾಖೆಗಳ ಕಾಮಗಾರಿಗಳ ಪ್ರಗತಿ ಕುರಿತು ಚರ್ಚೆ ನಡೆಸಿದರು.
ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ಉಪಾಧ್ಯಕ್ಷೆ ಇಂದಿರಾ ತೇಲಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿರೂಪಾಕ್ಷಗೌಡ ಪಾಟೀಲ, ಸದಸ್ಯರಾದ ಮಹ್ಮದ್‌ಸಾಬ್ ತರಫದಾರ, ಪ್ರಭು ಮೇಟಿ, ಶಶಿಧರ ತೇಲಿ, ಸಿದ್ಧಣ್ಣ ಯಾಳಗಿ, ರಾಮನಗೌಡ ಪಾಟೀಲ, ಶೇಖರಗೌಡ ಚನ್ನಪ್ಪಗೌಡ್ರ, ಹೇಮಾವತಿ ಕಡದಳ್ಳಿ, ಪಡಿಯಪ್ಪ ಮಾದರ, ಮುಖ್ಯ ಇಂಜಿನಿಯರ್ ಉಮೇಶ ಮಂಡಸೊಪ್ಪಿ, ಮಹಾದೇವಪ್ಪ, ಬಿಸಿಎಂ ಮರಿಗೌಡ ಸುರಕೋಡ್, ಅರಣ್ಯ ಇಲಾಖೆ ಅಧಿಕಾರಿ ಪ್ರಕಾಶ ಪವಾಡಿಗೌಡ್ರ ಸೇರಿದಂತೆ ಇದ್ದರು.