ಹೊಸದಿಲ್ಲಿ: ನೀವು ಉಪಯೋಗಿಸುತ್ತಿರುವ ಡೆಬಿಟ್ ಕಾರ್ಡ್, ನಿಮ್ಮ ಪ್ರತಿ ಖರೀದಿಯ ಅನಂತರ ನಿಮ್ಮ ಖಾತೆಯಲ್ಲಿ ಉಳಿದಿರುವ ಹಣದ ಮಾಹಿತಿಯನ್ನು ತೋರಿಸುವಂತಿದ್ದರೆ? ನಿಮ್ಮ ಕ್ರೆಡಿಟ್ ಕಾರ್ಡ್ ನೀವು ಪಡೆಯಬಹುದಾದ ಸಾಲದ ಮಿತಿ ತೋರಿಸುವಂತಿದ್ದರೆ?
ಅಷ್ಟೇ ಅಲ್ಲ, ಈ ಕಾರ್ಡುಗಳು ನಿಮಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುವಂತಿದ್ದರೆ?
ಈ ಪ್ರಶ್ನೆಗಳನ್ನು ಕೇಳಿದರೆ ನಗು ಬರಬಹುದು. ಆದರೆ, ಅಮೆರಿಕದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ವಿಶೇಷ ಕಾರ್ಡುಗಳು ಮೇಲೆ ಹೇಳುವ ಎಲ್ಲ ಕೆಲಸಗಳನ್ನು ಮಾಡುತ್ತವೆ ಎಂದರೆ ನೀವು ಅಚ್ಚರಿಪಡಲೇಬೇಕು.
ಹೌದು. ಡೈನಾಮಿಕ್ಸ್ ಎಂಬ ಕ್ರೆಡಿಟ್, ಡೆಬಿಟ್ ಕಾರ್ಡು ತಯಾರಿಕಾ ಕಂಪೆನಿಯೊಂದು ಹೊರತಂದಿರುವ ಈ ಕಾರ್ಡುಗಳು ತಮ್ಮಲ್ಲಿ ಪುಟ್ಟದೊಂದು ಎಲ್‌ಸಿಡಿ ಮಾದರಿಯ 65,000 ಪಿಕ್ಸೆಲ್‌ಗಳ ಪರದೆ ಹೊಂದಿದ್ದು, ಇದರಲ್ಲಿ ನೀವು ಖರೀದಿಸಿದ ಮೌಲ್ಯ ಹಾಗೂ ಖಾತೆಯಲ್ಲಿ ಉಳಿದ ಹಣದ ಬಗ್ಗೆ ಮಾಹಿತಿ ನೀಡುತ್ತದೆ. ನಿಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ತಿಳಿಸುತ್ತದೆ. ಇದಕ್ಕೆ ಇ-ಇಂಕ್ ಪರದೆ ಎಂದು ಕರೆಯಲಾಗುತ್ತದೆ. ಸದ್ಯಕ್ಕೆ ನಾವು ಬಳಸುತ್ತಿರುವ ಡೆಬಿಟ್, ಕ್ರೆಡಿಟ್ ಕಾರ್ಡುಗಳಷ್ಟೇ ದಪ್ಪ ಇರುವ ಇದು ವಿಶೇಷವಾದ ಮೈಕ್ರೋ ಚಿಪ್ ಹೊಂದಿದ್ದು, ಆ ಮೂಲಕ ನಿಮ್ಮ ಸೆಲ್ಯೂಲರ್ ನಂಬರ್ ಜತೆಗೂ ನಂಟು ಹೊಂದಲಿದೆ. ಅಷ್ಟೇ ಅಲ್ಲ, ಈ ಕಾರ್ಡುಗಳು ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡುಗಳ ಎರಡೂ ಕರ್ತವ್ಯ ನಿಭಾಯಿಸಬಲ್ಲವಾಗಿವೆ.