ಬೆಳಗಾವಿ: ಕರ್ನಾಟಕದ ಉಪ ರಾಜಧಾನಿ ಆಗಿರುವ ಬೆಳಗಾವಿ ಭಾಗದ ಜನರ ಆಶೋತ್ತರಗಳನ್ನು ಈಡೇರಿಸಲು ಸುವರ್ಣ ವಿಧಾನಸೌಧ ನಿರ್ಮಾಣವಾಗಿದ್ದು, ಇದರ ಸದ್ಬಳಕೆ ನಿರಂತರವಾಗಿ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಬೆಳಗಾವಿ ತಾಲೂಕು 7ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಶಿವಶಂಕರ ಹಿರೇಮಠ ಹೇಳಿದರು.
ಕನ್ನಡಿಗರೊಂದಿಗೆ ಇಲ್ಲಿಯ ಉರ್ದು, ಮರಾಠಿ ಭಾಷಿಕರೂ ಸೇರಿ ಸುವರ್ಣ ವಿಧಾನಸೌಧ ಸದುಪಯೋಗಕ್ಕಾಗಿ ಜನ ಹೋರಾಟ ಆಡಬೇಕಿದೆ. ಆಡಳಿತ ಜನರಿಗೆ ಹತ್ತಿರವಾಗಬೇಕಿದ್ದು, ಈ ನಿಟ್ಟಿನಲ್ಲಿ ರಾಜ್ಯದ ವಿವಿಧ ಅಕಾಡೆಮಿಗಳು, ಸರ್ಕಾರಿ ಕಚೇರಿಗಳು ಬೆಳಗಾವಿಗೆ ಸ್ಥಳಾಂತರಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಮಗುವಿನ ಮಾತೃಭಾಷೆಯಲ್ಲಿಯೇ ವಿಶ್ವವಿದ್ಯಾಲಯ ಮಟ್ಟದವರೆಗೆ ಶಿಕ್ಷಣ ನೀಡಬೇಕು ಎಂಬುದು ಭಾರತದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖೀಸಲಾಗಿದೆ. ಆದರೆ ಅದನ್ನು ಇನ್ನೂ ಕರ್ನಾಟಕದಲ್ಲಿ ಈಡೇರಿಲ್ಲ. ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃಭಾಷೆ, ರಾಜ್ಯ ಭಾಷೆ, ಮಾಧ್ಯಮ ಭಾಷೆಯಲ್ಲಿ ಶಿಕ್ಷಣವನ್ನು ಕಡ್ಡಾಯವಾಗಿ ನೀಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಭಾಷೆ ಪಿತ್ರಾರ್ಜಿತ ಆಸ್ತಿ ಅಲ್ಲ. ಭಾಷೆ ಪರಂಪರಗತವಾಗಿ ತಲೆಮಾರುಗಳಲ್ಲಿ ಮಾತು, ಬರಹ, ಸಾಹಿತ್ಯ, ಸಂಸ್ಕೃತಿಯಾಗಿ ಬೆಳೆಯುತ್ತಲೇ ಬರುತ್ತದೆ. ವ್ಯಕ್ತಿಗೆ ಸ್ವತಂತ್ರವಾಗಿ ಆಲೋಚಿಸುವ ಶಕ್ತಿಯನ್ನು ಮಾತೃಭಾಷೆ ನೀಡುತ್ತದೆ. ಸಹಜವಾಗಿ ಮಗುವಿನಲ್ಲಿ ಉಪಲಬ್ಧವಾಗಿರುವ ಸ್ವಭಾಷಾ ಆಲೋಚನಾ ಶಕ್ತಿಯನ್ನು ಕುಂದುಗೊಳಿಸಿದರೆ ಅದು ಪರಂಪರೆ ಮತ್ತು ಸಂಸ್ಕೃತಿಗೆ ಮಾಡುವ ಅನ್ಯಾಯವಾಗುತ್ತದೆ. ಆಲೋಚನಾ ಶಕ್ತಿ ಮತ್ತು ಸೃಜನಶೀಲತೆಯನ್ನು ಮಗು ಸ್ವಾಭಾವಿಕವಾಗಿ ಬೆಳೆಯಿಸಿಕೊಳ್ಳುವುದನ್ನು ತಡೆದರೆ ಮಾನವ ಪ್ರಗತಿಗೆ ತಡೆದಂತಗಾಗುತ್ತದೆ ಎಂದರು.
Advertisement
ಇಲ್ಲಿಯ ವಡಗಾವಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಮಂಗಲ ಕಾರ್ಯಾಲಯದಲ್ಲಿ ರವಿವಾರ ನಡೆದ ಬೆಳಗಾವಿ ತಾಲೂಕು 7ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದ ಅವರು, ವಿಧಾನಸೌಧವನ್ನು ಕನ್ನಡ ಆಡಳಿತ, ಕನ್ನಡ ಸಂಸ್ಕೃತಿ-ಪರಂಪರೆಗಳ ವಿಸ್ತರಣಾ ಕೇಂದ್ರವನ್ನಾಗಿ ರೂಪಿಸಬೇಕು ಎಂದರು.
Related Articles
Advertisement
ಬೆಳಗಾವಿಯನ್ನು ಯಾವ ದಿಕ್ಕಿನಿಂದ ಪ್ರವೇಶಿಸಿದರೂ ನಮಗೆ ರಾಷ್ಟ್ರ ಧ್ವಜ ಕಾಣುತ್ತದೆ. ಬೆಳಗಾವಿಯ ಕೆರೆಯಲ್ಲಿ ಪ್ರತಿಷ್ಠಾಪಿತಗೊಂಡ ಬಾವುಟ ಇಲ್ಲಿಯ ಹೆಗ್ಗುರುತು. ಅದರಂತೆ ಬೆಳಗಾವಿಯ ವೈಶಿಷ್ಟ್ಯ ಕನ್ನಡದ ಬಾವುಟ. ಈ ಬಾವುಟವನ್ನು ಎತ್ತಿ ಹಿಡಿಯಬೇಕಾದ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಕರ್ನಾಟಕ ಎಂಬ ಪರಿಕಲ್ಪನೆ ಮೊದಲು ಇರಲಿಲ್ಲ. ಸಾಹಿತ್ಯ ಪ್ರೀತಿ ಇದ್ದವರು ಕರ್ನಾಟಕ ಎಂಬ ಹೆಸರು ಕೊಟ್ಟಿದ್ದಾರೆ ಎಂದರು.
ಬೆಳಗಾವಿ ಪ್ರದೇಶದಲ್ಲಿಯ ಎರಡು ದಶಗಳ ಇತಿಹಾಸದ ಬಗ್ಗೆ ಸುದೀರ್ಘ ಭಾಷಣ ಮಾಡಿದ ಶಿವಶಂಕರ ಹಿರೇಮಠ ಅವರು, ಬೆಳಗಾವಿಯಲ್ಲಿ ಮೊದಲ ಮುದ್ರಣ ಮಾಧ್ಯಮ, ಪತ್ರಿಕೆ, ಶಿಕ್ಷಣ ವ್ಯವಸ್ಥೆ, ಜೀವನ ಶಿಕ್ಷಣ, ಸರ್ಕಾರಿ ಕಚೇರಿಗಳ ಸ್ಥಿತಿಗತಿ, ಕನ್ನಡ ಮುದ್ರಣಾಲಯ, ಸಂಘ-ಸಂಸ್ಥೆಗಳು, ಸಾಹಿತ್ಯ ಕುರಿತು ಇಸ್ವಿ ಸಮೇತ ಸಮಗ್ರವಾಗಿ ವಿವರಿಸಿದರು.
19, 20ನೇ ಶತಮಾನದಲ್ಲಿ ಬೆಳಗಾವಿಯಲ್ಲಿ ಆಗಿ ಹೋದ ವಿವಿಧ ವಿಷಯಗಳನ್ನು ಚರ್ಚಿಸುತ್ತ ಹೋದ ಸಮ್ಮೇಣಾಧ್ಯಕ್ಷರು, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳ ನಡುವಿನ ಸಂಬಂಧ ಕುರಿತು ವಿವರಣೆ ನೀಡಿದರು. ಮಹಾತ್ಮಾ ಗಾಂಧಿ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ, ಕರ್ನಾಟಕ ಏಕೀಕರಣ ಚಳವಳಿ, ಸಂಸ್ಕೃತಿ, ಇತಿಹಾಸ, ಸಾಹಿತ್ಯ, ಶಿಲ್ಪ, ಪರಿಸರ, ನೆಲ-ಜಲ ಕುರಿತು ದೃಷ್ಟಾಂತಗಳ ಸಹಿತ ಮಾತನಾಡಿದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಬೆಳಗಾವಿಯಲ್ಲಿ ಕನ್ನಡ ಉಳಿಯಲು ಮುಖ್ಯ ಕಾರಣ ವಡಗಾವಿ ಹಾಗೂ ಖಾಸಬಾಗ ಜನರ ಹೋರಾಟವೇ ಕಾರಣ. ಈಗ ಕನ್ನಡದ ಸದ್ಬಳಕೆ ಎಷ್ಟಿದೆ ಎಂಬುದರ ಬಗ್ಗೆ ಅವಲೋಕನ ಮಾಡಬೇಕಿದೆ. ಎಷ್ಟು ಜನ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ ಎಂಬುದರ ಬಗ್ಗೆಯೂ ನಾವು ಆತ್ಮಾವಲೋಕನ ಮಾಡಬೇಕಿದೆ. ಮಕ್ಕಳು ಕನ್ನಡ ಶಾಲೆಗಳಲ್ಲಿ ಕಲಿಯುವುದರಿಂದ ಇಂಥ ಸಮ್ಮೇಳನಗಳು ಸಾರ್ಥಕ ಆಗುತ್ತವೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ ಮಾತನಾಡಿ, ಕನ್ನಡ ಎಂದರೆ ಕೇವಲ ಅಕ್ಷರ ಅಲ್ಲ. ಜೀವನದ ಸಂಸ್ಕೃತಿ. ಬೆಳಗಾವಿಯಲ್ಲಿ ಕನ್ನಡ ಬೆಳೆಸುವಲ್ಲಿ ಅನೇಕರ ಪಾತ್ರವಿದೆ. ಸುವರ್ಷ ವಿಧಾನಸೌಧವನ್ನು ಕಟ್ಟಿದರೂ ಅದನ್ನು ಬಳಸಿಕೊಳ್ಳಲು ಆಗುತ್ತಿಲ್ಲ. ಇದರ ಸದ್ಬಳಕೆ ಆಗಬೇಕಿದೆ. ಕನ್ನಡ ಕಟ್ಟುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದರು.
ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ತಾಲೂಕಾಧ್ಯಕ್ಷ ಬಸವರಾಜ ಸಸಾಲಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಮೇಯರ್ ಸಿದ್ದನಗೌಡ ಪಾಟೀಲ, ಸಾಹಿತಿ ನೀಲಗಂಗಾ ಚರಂತಿಮಠ, ಧುರೀಣರಾದ ಶಂಕರ ಬುಚಡಿ, ರಮೇಶ ಸೊಂಟಕ್ಕಿ, ಕೃಷ್ಣರಾಜೇಂದ್ರ ತಾಳೂಕರ, ಪ್ರದೀಪ ತೆಲಸಂಗ, ಬಸವರಾಜ ಅತ್ತಿಮರದ, ಬಸವರಾಜ ರೊಟ್ಟಿ, ಜಿಲ್ಲೆಯ ಎಲ್ಲ ತಾಲೂಕುಗಳ ಕಸಾಪ ಅಧ್ಯಕ್ಷರು ಸೇರಿದಂತೆ ಇತರರು ಇದ್ದರು.
ಬೆಳಗಾವಿ 7ನೇ ತಾಲೂಕು ಸಾಹಿತ್ಯ ಸಮ್ಮೇಳನ ಸಂಪನ್ನ:
ಕನ್ನಡ ಶಾಲೆ ಬಗ್ಗೆ ತಾತ್ಸಾರ ಬೇಡ: ಶಾಸಕ ಅಭಯ ಪಾಟೀಲ
ಸಾಹಿತಿಗಳು, ಕನ್ನಡ ಹೋರಾಟಗಾರರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಬೇಕು. ನಮ್ಮ ಮಾತೃಭಾಷೆಯನ್ನು ಕಲಿಸಿ ಸರ್ಕಾರಿ ಶಾಲೆಗಳತ್ತ ಹೆಜ್ಜೆ ಹಾಕಬೇಕು. ಇತ್ತೀಚಿನ ದಿನಗಳಲ್ಲಿ ಡ್ಯಾಡಿ, ಮಮ್ಮಿಯ ಹಾವಳಿಯಲ್ಲಿ ಅಪ್ಪ-ಅಮ್ಮ ಎನ್ನಲು ಸಂಕೋಚ ಪಡುತ್ತಿದ್ದೇವೆ. ಇಂಗ್ಲಿಷ್ ವ್ಯಾಮೋಹದಿಂದ ಸರ್ಕಾರಿ ಶಾಲೆಗಳಿಗೆ ತೊಡಕಾಗುತ್ತಿದೆ. ಈ ನಿಟ್ಟಿನಲ್ಲಿ ಸದ್ಯ ನಮ್ಮ ಕ್ಷೇತ್ರದಲ್ಲಿ ಎಲ್ಲ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ. ಶಾಲೆಗಳನ್ನು ಸ್ಮಾರ್ಟ್ ಮಾಡುವುದರ ಬಗ್ಗೆ ಕಾಳಜಿ ಹೊಂದಿದ್ದೇವೆ. ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಶಾಸಕ ಅಭಯ ಪಾಟೀಲ ಹೇಳಿದರು.