Advertisement
ಮೆಜೆಸ್ಟಿಕ್‌ನಲ್ಲಿರುವ ಕೆಎಸ್‌ಆರ್‌ಟಿಸಿಯ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್-3ರಲ್ಲಿರುವ ಬಸ್‌ಗಳನ್ನು ಸಂಚಾರದಟ್ಟಣೆ ಹಿನ್ನೆಲೆಯಲ್ಲಿ ಟರ್ಮಿನಲ್ 2 ಅಥವಾ 2ಎಗೆ ಸ್ಥಳಾಂತರಿಸುವ ವಿಚಾರವು ಪರಸ್ಪರ ವ್ಯಾಪಾರಿ ವರ್ಗಗಳ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಈ ಗುದ್ದಾಟದಲ್ಲಿ ಪ್ರಯಾಣಿಕರ ಹಿತಾಸಕ್ತಿ ಗೌಣವಾಗಿದ್ದು, ವ್ಯಾಪಾರಿಗಳು ಮತ್ತು ಅವರ “ಪ್ರಭಾವ’ಗಳ ಮೇಲಾಟವೇ ನಿರ್ಣಾಯಕವಾಗುತ್ತಿದೆ.
Related Articles
Advertisement
ಯಾಕೆಂದರೆ, 600ರಿಂದ 700 ನಿರ್ಗಮನಗಳಿದ್ದು, ತಲಾ 26ರಿಂದ 27 “ಬಸ್ ಬೇ’ಗಳಿವೆ. ಈ ಹಿನ್ನೆಲೆಯಲ್ಲಿ ಟರ್ಮಿನಲ್-3ರಲ್ಲಿದ್ದ ಬಸ್‌ಗಳನ್ನು ಸ್ಥಳಾಂತರಿಸಬೇಕು ಎಂಬುದು ಅಧಿಕಾರಿಗಳ ಪ್ರತಿಪಾದನೆ. ಇದೇ ಕಾರಣಕ್ಕೆ ಸ್ಥಳಾಂತರಿಸುವ ಬಗ್ಗೆ ಎರಡು ಬಾರಿ ಪತ್ರಿಕಾ ಪ್ರಕಟಣೆಯನ್ನೂ ಕೊಡಲಾಗಿತ್ತು. ಮತ್ತೆ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.
ತಾಂತ್ರಿಕವಾಗಿ ಅಧಿಕಾರಿಗಳ ವಾದ ಸರಿಯಾಗಿದೆ. ಆದರೆ, ವ್ಯಾಪಾರಿಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ. ಲಕ್ಷಾಂತರ ರೂ. ಬಂಡವಾಳ ಹೂಡಿದ್ದು, ಹೀಗೆ ಏಕಾಏಕಿ ಬಸ್‌ಗಳನ್ನು ಸ್ಥಳಾಂತರಿಸುವುದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸ್ಥಳಾಂತರ ಬೇಡ ಎಂದು ಟರ್ಮಿನಲ್-3ರಲ್ಲಿನ ವ್ಯಾಪಾರಿಗಳು ಪಟ್ಟುಹಿಡಿದ್ದಾರೆ.
ಅದೇ ರೀತಿ, ತಾವು ಕೂಡ ಲಕ್ಷಾಂತರ ಬಂಡವಾಳ ಹೂಡಿದ್ದೇವೆ. ಮೆಟ್ರೋ ಕಾಮಗಾರಿ ಪೂರ್ಣಗೊಳ್ಳುವವರೆಗೆ ಅನಿವಾರ್ಯವಾಗಿ ಸುಮ್ಮನಿದ್ದೆವು. ಈಗ ಪ್ರಯಾಣಿಕರು ಹಾಗೂ ತಮ್ಮ ವ್ಯಾಪಾರದ ದೃಷ್ಟಿಯಿಂದ ಸ್ಥಳಾಂತರ ಮಾಡಲೇಬೇಕು ಎಂಬ ವಾದ ಟರ್ಮಿನಲ್-2ಎನಲ್ಲಿರುವ ವ್ಯಾಪಾರಿಗಳದ್ದಾಗಿದೆ. ಇದರಿಂದ ಬಸ್ ಸ್ಥಳಾಂತರ ವಿಚಾರ ಅಕ್ಷರಶಃ ಕಗ್ಗಂಟಾಗಿದ್ದು, ಅಧಿಕಾರಿಗಳು ಪೇಚೆಗೆ ಸಿಲುಕಿದ್ದಾರೆ.
ಆಗಿದ್ದೇನು?: ಮೊದಲು ಇಡೀ ಕೆಂಪೇಗೌಡ ಬಸ್ ನಿಲ್ದಾಣ ಒಂದೇ ಆಗಿತ್ತು. “ನಮ್ಮ ಮೆಟ್ರೋ’ ಕಾಮಗಾರಿ ಹಿನ್ನೆಲೆಯಲ್ಲಿ ನಾಲ್ಕು ಹೋಳಾಗಿವೆ. ಅದನ್ನು ಟರ್ಮಿನಲ್ 1, 2, 2ಎ ಮತ್ತು 3 ಎಂದು ವಿಭಾಗಿಸಲಾಗಿದೆ. ಈ ಪೈಕಿ 2ಎ ಟರ್ಮಿನಲ್ ಎರಡು ಎಕರೆ ಇದ್ದು, ಮೆಟ್ರೋ ಕಾಮಗಾರಿ ಪೂರ್ಣಗೊಂಡ ನಂತರ ಕೆಎಸ್‌ಆರ್‌ಟಿಸಿಗೆ ಹಸ್ತಾಂತರಗೊಂಡಿತು.
ಅದನ್ನು ನಿಗಮವು ಸುಮಾರು ಎರಡು ಕೋಟಿ ರೂ. ಖರ್ಚು ಮಾಡಿ, ಮರುನಿರ್ಮಾಣ ಮಾಡಿದೆ. ಆದರೆ, ಅಲ್ಲಿಂದ ತುಂಬಾ ಕಡಿಮೆ ಬಸ್‌ಗಳು ಕಾರ್ಯಾಚರಣೆ ಆಗುತ್ತಿದ್ದು, ಸಮರ್ಪಕ ಬಳಕೆ ಆಗುತ್ತಿಲ್ಲ. ಆದ್ದರಿಂದ ಸಂಚಾರದಟ್ಟಣೆ ಉಂಟಾಗುತ್ತಿರುವ ಟರ್ಮಿನಲ್-3ರಲ್ಲಿಂದ 250-300 ಶೆಡ್ಯುಲ್‌ಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ನಿತ್ಯ 80 ಸಾವಿರ ಪ್ರಯಾಣಿಕರು: ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿರುವ ಮಳಿಗೆಗಳು ಟೆಂಡರ್ ಮೂಲಕ ಮಂಜೂರಾಗಿವೆ. ಒಂದು ಮಳಿಗೆಯು ತಿಂಗಳಿಗೆ ಕನಿಷ್ಠ 2 ಲಕ್ಷ ಮತ್ತು ಗರಿಷ್ಠ 4ರಿಂದ 5 ಲಕ್ಷ ರೂ. ಬಾಡಿಗೆ ರೂಪದಲ್ಲಿ ಪಾವತಿಸುತ್ತಿವೆ. ಪ್ರತಿ ಟರ್ಮಿನಲ್‌ನಲ್ಲಿ 10ರಿಂದ 15 ಮಳಿಗೆಗಳಿವೆ. ನಿತ್ಯ ಒಟ್ಟಾರೆ 80 ಸಾವಿರ ಪ್ರಯಾಣಿಕರು ಇಲ್ಲಿಗೆ ಬಂದುಹೋಗುತ್ತಾರೆ. ಅವರಲ್ಲಿ ಬಹುತೇಕರು ಕರ್ನಾಟಕ ಸಾರಿಗೆ (ಕೆಂಪು ಬಸ್)ಯಲ್ಲೇ ಪ್ರಯಾಣಿಸುವವರಾಗಿದ್ದು, ಈ ಮಳಿಗೆಗಳ ಪ್ರಮುಖ ಗ್ರಾಹಕರೂ ಇವರೇ ಆಗಿದ್ದಾರೆ.
ಒಂದು ಮಾರ್ಗ; ಎರಡು ನಿಲುಗಡೆ!: ಒಂದೇ ಮಾರ್ಗದ ಎರಡು ಪ್ರಕಾರದ ಬಸ್‌ಗಳು ಎರಡು ಪ್ರತ್ಯೇಕ ಟರ್ಮಿನಲ್‌ಗಳಲ್ಲಿ ಪ್ರಯಾಣಿಸುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಹೌದು, ಬಹುತೇಕ ಎಲ್ಲ ಪ್ರೀಮಿಯಂ ಬಸ್‌ಗಳು ಟರ್ಮಿನಲ್-1ರ ಪ್ಲಾಟ್‌ಫಾರಂ 18ರಿಂದ ನಿರ್ಗಮಿಸುತ್ತವೆ. ಅದೇ ಮಾರ್ಗದ ಕರ್ನಾಟಕ ಸಾರಿಗೆ (ಕೆಂಪು ಬಸ್)ಗಳು ಟರ್ಮಿನಲ್-3ರಿಂದ ಕಾರ್ಯಾಚರಣೆ ಆಗುತ್ತವೆ.
ಇದರಿಂದ ಪ್ರಯಾಣಿಕರು ಗೊಂದಲಕ್ಕೀಡಾಗುತ್ತಿದ್ದು, ನಿತ್ಯ ಪರದಾಡುತ್ತಿದ್ದಾರೆ. ಉದಾಹರಣೆಗೆ ಪ್ರಯಾಣಿಕರೊಬ್ಬರು, “ತಿರುಪತಿಗೆ ಹೋಗಬೇಕು’ ಎಂದು ಹೇಳಿ ಬಸ್ ನಿಲ್ದಾಣದ ಕಡೆಗೆ ಹೊರಡುವ ಆಟೋ ಏರುತ್ತಾರೆ. ಆಟೋ ಚಾಲಕ ಪ್ರೀಮಿಯಂ ಬಸ್‌ಗಳು ನಿಲ್ಲುವ ಟರ್ಮಿನಲ್ 1ರಲ್ಲಿ ಇಳಿಸಿ ಹೋಗುತ್ತಾನೆ. ಆದರೆ, ಆ ಪ್ರಯಾಣಿಕರು ಕೆಂಪು ಬಸ್‌ನಲ್ಲಿ ಪ್ರಯಾಣಿಸುವವರಾಗಿರುತ್ತಾರೆ. ಇದು ನಿತ್ಯದ ಪರದಾಟವಾಗಿದೆ ಎಂದು ಪ್ರಯಾಣಿಕ ಮಹೇಶ್ ತಿಳಿಸಿದರು.
ಔಷಧ ಮಳಿಗೆಗಳಿಲ್ಲದೆ ಪರದಾಟ: ನಿತ್ಯ 80 ಸಾವಿರ ಜನ ಬಂದು-ಹೋಗುವ ನಿಲ್ದಾಣದಲ್ಲಿ ಒಂದೇ ಒಂದು ಔಷಧ ಮಳಿಗೆ ಇಲ್ಲ! ಮಹಿಳೆಯರು, ವೃದ್ಧರು ಒಂದಿಲ್ಲೊಂದು ಆರೋಗ್ಯ ಸಂಬಂಧಿ ಸಮಸ್ಯೆಗಾಗಿ ಔಷಧ ಮಳಿಗೆಗಳನ್ನು ಹುಡುಕುವುದು ಇಲ್ಲಿ ಮಾಮೂಲಾಗಿದೆ. ಇದಕ್ಕಾಗಿ ಕನಿಷ್ಠ 1 ಕಿ.ಮೀ. ಹೋಗಬೇಕಾದ ಸ್ಥಿತಿ ಇದೆ ಎಂದು ಪ್ರಯಾಣಿಕ ಮಂಜುನಾಥ್ ಅಲವತ್ತುಕೊಂಡರು.
ತಾಂತ್ರಿಕ ಕಾರಣಗಳಿಂದ ಬಸ್‌ಗಳ ಸ್ಥಳಾಂತರ ಮಾಡಿಲ್ಲ. ಆದರೆ, ವ್ಯಾಪಾರಿಗಳ ಪ್ರಭಾವ ಅಥವಾ ಒತ್ತಡಗಳ ಹಿನ್ನೆಲೆಯಲ್ಲಿ ಇದು ಆಗಿಲ್ಲ ಎನ್ನುವುದು ತಪ್ಪು. ಕೇಂದ್ರೀಯ ಕಚೇರಿಯಿಂದ ಸೂಚನೆ ಬರುತ್ತಿದ್ದಂತೆ ಕ್ರಮ ಕೈಗೊಳ್ಳಲಾಗುವುದು.-ಇನಾಯತ್‌ವುಲ್ಲಾ ಭಗವಾನ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಂಪೇಗೌಡ ಬಸ್ ನಿಲ್ದಾಣ * ವಿಜಯಕುಮಾರ್ ಚಂದರಗಿ