Advertisement

ಬಾಲಕಾರ್ಮಿಕರ ರಕ್ಷಣೆಗೆ ಅಸಹಕಾರ 

04:04 PM Oct 27, 2018 | |

ಕೊಪ್ಪಳ: ಜಿಲ್ಲೆಯ ವಿವಿಧ ಅಂಗಡಿ-ಮುಂಗಟ್ಟು, ಉದ್ಯಮಗಳಲ್ಲಿ ಬಾಲ ಕಾರ್ಮಿಕರ ಬಳಕೆ ಜೋರಾಗಿ ನಡೆಯುತ್ತಿದ್ದರೂ ದಾಳಿ ಮಾತ್ರ ಬೆರಳೆಣಿಕೆ ಎನ್ನುವಂತಿದೆ. ಅಚ್ಚರಿಯಂದರೆ ದಾಳಿ ಮಾಡಬೇಕಾದ ಟಾಸ್ಕ್ ಫೋರ್ಸ್‌ ಸಮಿತಿಯಲ್ಲಿನ ಅಧಿಕಾರಿಗಳೇ ಅಸಹಕಾರ ತೋರುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

Advertisement

ಹೌದು.. ಸರ್ಕಾರವು ಪ್ರತಿಯೊಬ್ಬ ಮಗುವು ಕಡ್ಡಾಯ ಶಿಕ್ಷಣ ಪಡೆಯಬೇಕೆಂದು ಕಾನೂನನ್ನೇ ಮಾಡಿದೆ. ಆದರೆ ಮನೆಯಲ್ಲಿನ ಆರ್ಥಿಕ ತೊಂದರೆ ಸೇರಿದಂತೆ ನಾನಾ ಕಾರಣಗಳಿಂದ ಮಕ್ಕಳು ಬಾಲ್ಯದಲ್ಲೇ ಕೆಲಸದಲ್ಲಿ ತೊಡಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತವೆ. ಬಾಲ ಕಾರ್ಮಿಕ ಪದ್ಧತಿ ತಡೆದು ಅಂತಹ ಮಕ್ಕಳಿಗೆ ಸರ್ಕಾರ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡುತ್ತಿದೆಯಾದರೂ ಅಷ್ಟು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ.

ಬಾಲ ಕಾರ್ಮಿಕತೆ ನಿವಾರಣೆಗೆ ಕಠಿಣ ಕಾನೂನುಗಳು ಜಾರಿಯಾಗಿವೆ. ಆದರೆ, ಬಾಲ ಮಕ್ಕಳ ಬಳಕೆ ಮಾಡಿಕೊಂಡ ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ಮಾಡುವ ಅಧಿಕಾರಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಕೇವಲ ದಾಖಲೆಗಳಿಗೆ ಮಾತ್ರ ದಾಳಿ ಮಾಡುತ್ತಾರೆ ಎನ್ನುವ ಮಾತು ಈ ಹಿಂದಿನಿಂದಲೂ ಸಹಜವಾಗಿದೆ.

ಜಿಲ್ಲೆಯಲ್ಲಿ ಕೋಳಿ ಫಾರಂ, ಸಣ್ಣ ಉದ್ಯಮಗಳಿಂದ ಹಿಡಿದು ಅಸಂಘಟಿತ ವಲಯದಲ್ಲಿ ಬಾಲ ಮಕ್ಕಳು ನಿತ್ಯವೂ ಕೆಲಸದಲ್ಲಿ ತೊಡಗುತ್ತಿದ್ದಾರೆ. ಅವರ ರಕ್ಷಣೆ ಮಾಡುವ ಕಾಯಕ ನಡೆದಿಲ್ಲ. ಮಕ್ಕಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಸರ್ಕಾರ ವಿವಿಧ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ ಫೋರ್ಸ್‌ ಸಮಿತಿಯನ್ನೇ ರಚನೆ ಮಾಡಿದೆ. ಆದರೆ ಈ ಸಮಿತಿಯೂ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಕೂಗು ಹಿಂದಿನಿಂದಲೂ ಇದ್ದೇ ಇದೆ.

ಜಿಲ್ಲೆಯಲ್ಲಿ ಸಾವಿರಾರು ಮಕ್ಕಳು ಇಂದಿಗೂ ಕೆಲಸದಲ್ಲಿ ತೊಡಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾ ಬಾಲಕಾರ್ಮಿಕರ ಸಂಘವು ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡವು ಈ ವರ್ಷ ಕೇವಲ 22 ಬಾಲ ಮಕ್ಕಳನ್ನು ರಕ್ಷಣೆ ಮಾಡಿದೆ. 7 ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಿದೆ. ಕೇವಲ ದಾಖಲೀಕರಣಕ್ಕೆ ಮಾತ್ರ ದಾಳಿ ನಡೆಯುತಿವೆ ಎನ್ನುವ ಮಾತು ಕೇಳಿ ಬಂದರೂ ಸಹಿತ ಟಾಸ್ಕ್ ಫೋರ್ಸ್‌ ಸಮಿತಿಯಲ್ಲಿನ ಅಧಿಕಾರಿಗಳು ದಾಳಿಗೆ ಸರಿಯಾಗಿ ಸಹಕಾರ ನೀಡುತ್ತಿಲ್ಲ ಎನ್ನುವ ವೇದನೆ ಮತ್ತೂಂದಡೆ ಕೇಳಿ ಬಂದಿದೆ.

Advertisement

ತಂಡದಲ್ಲಿ ಯಾರೆಲ್ಲ ಇರ್ತಾರೆ?: ತಾಲೂಕು ಹಂತದಲ್ಲಿ ತಹಶೀಲ್ದಾರ್‌, ತಾಪಂ ಇಒ, ಕಾರ್ಮಿಕ ನಿರೀಕ್ಷಕ, ನಗರಸಭೆ ಆಯುಕ್ತ, ಬಿಇಒ, ತಾಲೂಕು ಆರೋಗ್ಯಾಧಿಕಾರಿ, ಶಿಶು ಅಭಿವೃದ್ಧಿ ಅಧಿಕಾರಿ, ಪೊಲೀಸ್‌ ನಿರೀಕ್ಷಕ, ಸಮಾಜ ಕಲ್ಯಾಣ, ಬಿಸಿಎಂ ಇಲಾಖೆ ಸಹಾಯಕ ನಿರ್ದೇಶಕರು, ಮಕ್ಕಳ ರಕ್ಷಣಾಧಿಕಾರಿ, ಮಕ್ಕಳ ವಿಶೇಷ ಕಲ್ಯಾಣಾಧಿ ಕಾರಿ, ಯುನಿಸೆಫ್‌, ಮಕ್ಕಳ ಸಹಾಯವಾಣಿ ಸಿಬ್ಬಂದಿ ಈ ತಂಡದಲ್ಲಿ ಸದಸ್ಯರಾಗಿರುತ್ತಾರೆ. ಇವರೆಲ್ಲರೂ ದಾಳಿ ಮಾಡಿ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿದೆ.

ಆಸಕ್ತಿ ಬೇಕಿದೆ: ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಮೊದಲು ಅಧಿಕಾರಿಗಳಲ್ಲಿ ಆಸಕ್ತಿ ಬೇಕಿದೆ. ಆದರೆ ಅವರಲ್ಲೇ ಸರಿಯಾದ ಆಸಕ್ತಿಯಿಲ್ಲ. ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘವು ಟಾಸ್ಕ್ ಫೋರ್ಸ್‌ ಸಮಿತಿಯಲ್ಲಿನ ಅಧಿಕಾರಿಗಳನ್ನು ದಾಳಿಗೆ ಕರೆದರೆ ಕಚೇರಿಯ ಸಿಬ್ಬಂದಿಗಳನ್ನು ಕಳುಹಿಸಿ ಕೊಡುವಂತ ಸ್ಥಿತಿ ಬಂದಿದೆ. ಅಚ್ಚರಿಯಂದರೆ, ಬಾಲ ಕಾರ್ಮಿಕತೆ ತಡೆಯಲು ಮುಂದಾಗುವ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಂದ ದಾಳಿ ಮಾಡಿದ ಮಗುವನ್ನು ಬಿಟ್ಟು ಬಿಡಲು ಫೋನ್‌ ಕರೆಗಳು ಬರುತ್ತಿವೆ ಎನ್ನುವ ಮಾತು ಕೇಳಿ ಬಂದಿದೆ. ಇಂತಹ ಇಕ್ಕಟ್ಟು ಅಧಿಕಾರಿಗಳಿಗೆ ಬಂದರೆ ಅವರಾದರೂ ಹೇಗೆ ದಾಳಿ ಮಾಡಲು ಸಾಧ್ಯ. ಅಧಿಕಾರಿಗಳು ಆಸಕ್ತಿ ವಹಿಸಿ ದಾಳಿ ಮಾಡುವ ಅಗತ್ಯವಿದೆ.

ಜಿಲ್ಲೆಯಲ್ಲಿ ಇತ್ತೀಚೆಗೆ ನಾವು ದಾಳಿ ಮಾಡಿ 22 ಮಕ್ಕಳನ್ನು ರಕ್ಷಣೆ ಮಾಡಿ ಬಾಲ ಮಂದಿರಕ್ಕೆ ದಾಖಲು ಮಾಡಿದ್ದೇವೆ. ನಮ್ಮಲ್ಲಿ ಟಾಸ್ಕ್ ಫೋರ್ಸ್‌ ಸಮಿತಿಯಿದೆ. ಈ ಸಮಿತಿಯಲ್ಲಿ ಹಲವು ಅಧಿಕಾರಿಗಳು  ಸದಸ್ಯರಿರುತ್ತಾರೆ. ಅವರೆಲ್ಲರೂ ನಮ್ಮೊಟ್ಟಿಗೆ ಬಂದರೆ ದಾಳಿ ಮಾಡಲು ನಮಗೆ ಸಾಧ್ಯವಾಗಲಿದೆ. ಕೆಲವರು ಬರುತ್ತಾರೆ. ಕೆಲವರು ಬರುವುದಿಲ್ಲ.
ಬಸವರಾಜ ಹಿರೇಗೌಡರ್‌, ಜಿಲ್ಲಾ ಬಾಲ
ಕಾರ್ಮಿಕ ಯೋಜನಾ ಸಂಘದ ನಿರ್ದೇಶಕ.

„ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next