Advertisement

ಪಠ್ಯ ಪರಿಷ್ಕರಣ ಸಮಿತಿ ವಜಾಗೊಳಿಸಿ

03:43 PM Jun 02, 2022 | Team Udayavani |

ಚಿಕ್ಕಮಗಳೂರು: ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿರುವ ಪಠ್ಯ ಪರಿಷ್ಕರಣ ಸಮಿತಿಯನ್ನು ವಜಾಗೊಳಿಸಬೇಕು. ನಾಡಗೀತೆಗೆ ಅಪಮಾನ ಮಾಡಿರುವ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಸಮಾನ ಮನಸ್ಕ ಪಕ್ಷ ಹಾಗೂ ಸಂಘಟನೆಗಳ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಬುಧವಾರ ನಗರದ ಆಜಾದ್‌ಪಾರ್ಕ್‌ ವೃತ್ತದಲ್ಲಿ ಸಮಾವೇಶಗೊಂಡ ಸಮಾನ ಮನಸ್ಕ ಪಕ್ಷಗಳ ಮುಖಂಡರು ರೋಹಿತ್‌ ಚಕ್ರತೀರ್ಥ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಹಿಂದಿನ ಪಠ್ಯಕ್ರಮ ಮುಂದುವರಿಸಬೇಕೆಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ, ಶಿಕ್ಷಣ ವ್ಯವಸ್ಥೆಯನ್ನು ಕೇಸರಿಕರಣ ಗೊಳಿಸಲಾಗುತ್ತಿದೆ. ಬಸವಣ್ಣನವರಿಗೆ ಜನಿವಾರ ತೊಡಿಸಲಾಗಿದೆ. ಪಠ್ಯ ಪರಿಷ್ಕರಣ ಸಮಿತಿಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸಮಿತಿ ವಜಾ ಗೊಳಿಸಬೇಕು ಎಂದು ಒತ್ತಾಯಿಸಿದರು.

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಸಂವಿಧಾನಿಕ ಮತ್ತು ಅಸಮತೋಲನದಿಂದ ಕೂಡಿದೆ. ಸಾಮಾಜಿಕವಾಗಿ ಎಲ್ಲರನ್ನು ಒಳಗೊಳ್ಳದೇ ಕೇವಲ ಒಂದು ವರ್ಗದ ಹಿತಾಸಕ್ತಿಯ ವ್ಯಕ್ತಿಗಳನ್ನು ಒಳಗೊಂಡಿರುವುದು ಖಂಡನೀಯ. ಪರಿಷ್ಕರಣ ಸಮಿತಿ ಶೈಕ್ಷಣಿಕ ಮತ್ತು ಸಾರ್ವಜನಿಕವಾಗಿ ಚರ್ಚೆಗೆ ಒಳಪಡಿಸದೇ ಏಕಪಕ್ಷೀಯ ಪಠ್ಯವನ್ನು ಮಕ್ಕಳ ಮೇಲೆ ಹೇರಲಾಗುತ್ತಿದೆ ಎಂದು ದೂರಿದರು.

ರೋಹಿತ್‌ ಚಕ್ರತೀರ್ಥ ನಾಡಗೀತೆಗೆ ಅಪಮಾನಿಸಿ ಕುವೆಂಪು ಅವರ ವ್ಯಕ್ತಿತ್ವಕ್ಕೆ ಚ್ಯುತಿ ಉಂಟು ಮಾಡಿದ್ದಾರೆ. ಬಸವಣ್ಣನವರ ಆಶಯಗಳಿಗೆ ವಿರುದ್ಧವಾಗಿ ವಿಷಯವನ್ನು ತಿರುಚಲಾಗಿದೆ. ನಾರಾಯಣಗುರು, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ, ಟಿಪ್ಪುಸುಲ್ತಾನ್‌ ಅಂತವರ ಚರಿತ್ರೆ ಕೈಬಿಡಲಾಗಿದೆ ಎಂದು ಆರೋಪಿಸಿದರು.

Advertisement

ದೇವನೂರು ಮಹಾದೇವ ಸೇರಿದಂತೆ ಹಲವಾರು ಸಾಹಿತಿಗಳು ಪಠ್ಯದಿಂದ ತಮ್ಮ ಕಥೆ, ಕವನ, ಪ್ರಬಂಧಗಳನ್ನು ವಾಪಸ್‌ ಪಡೆಯುವ ಮೂಲಕ ಸುಳ್ಳು ಪಠ್ಯ ಬೋಧಿಸುವ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕೂಡಲೇ ಪಠ್ಯ ಪರಿಷ್ಕರಣ ಸಮಿತಿ ವಜಾಗೊಳಿಸಿ ಈ ಹಿಂದಿನ ಪಠ್ಯಗಳನ್ನು ಮುಂದುವರೆಸಬೇಕು ಹಾಗೂ ಕುವೆಂಪು, ಬಸವಣ್ಣ ಅವರನ್ನು ಅಪಮಾನಿಸಿರುವ ಚಕ್ರತೀರ್ಥ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು. ಕೆಪಿಸಿಸಿ ವಕ್ತಾರ ಎಚ್.ಎಚ್. ದೇವರಾಜ್‌ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ ಇಲ್ಲದಂತಾಗಿದೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲಾಗುತ್ತಿದೆ. ಪಠ್ಯ ಪರಿಷ್ಕರಣ ಸಮಿತಿಯಲ್ಲಿ ಆರ್‌ಎಸ್‌ಎಸ್‌ನವರಿದ್ದು ಪಠ್ಯ ಪುಸ್ತಕದಲ್ಲಿ ಮಕ್ಕಳಿಗೆ ಉತ್ತಮ ಸಂದೇಶ ಹೇಗೆ ನೀಡಲು ಸಾಧ್ಯ. ವಿಶ್ವ ಮಾನವ ಸಂದೇಶ ನೀಡಿರುವ ಕುವೆಂಪು ಅವರ ಬಗ್ಗೆ ಮಾತನಾಡುವ ನೈತಿಕತೆ ಚಕ್ರತೀರ್ಥ ಅವರಿಗಿಲ್ಲ. ಚಕ್ರತೀರ್ಥ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ವಿವಿಧ ಸಂಘಟನೆಗಳ ಮುಖಂಡರಾದ ಬಿ.ಅಮ್ಜದ್‌, ಮರ್ಲೆಅಣ್ಣಯ್ಯ, ಮಹೇಶ್‌, ತೇಗೂರು ಜಗದೀಶ್‌, ಸಿ.ಆರ್‌.ರಘು, ತೇಗೂರು ವಸಂತಕುಮಾರ್‌, ಕೆ.ಗುಣಶೇಖರ್‌, ಎ.ಜಯ ಕುಮಾರ್‌, ಕೆ.ಬಿ. ಸುಧಾ, ಶೋಭಾ, ಕಾಂಗ್ರೆಸ್‌ ಪಕ್ಷದ ಹಿರೇಮಗಳೂರು ಪುಟ್ಟಸ್ವಾಮಿ, ರವೀಶ್‌ಬಸಪ್ಪ, ಚನ್ನೇಗೌಡ, ಚಂದ್ರಶೇಖರ್‌, ಸಿ.ಸಿ. ಮಂಜೇಗೌಡ, ಮಂಜಪ್ಪ, ಜಿ.ಕೆ. ಬಸವ ರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next