Advertisement

ಬೋರ್ಡಿಂಗ್‌ ಪಾಸ್‌ ಸೆಂಟರ್‌ ಸ್ಥಾಪನೆಗೆ ನಿರಾಸಕ್ತಿ

12:15 AM Dec 16, 2019 | Sriram |

ಮಹಾನಗರ: ಲಕ್ಷದ್ವೀಪಕ್ಕೆ ತೆರಳಲು ಪ್ರವೇಶ ಪತ್ರ ನೀಡುವ ಬೋರ್ಡಿಂಗ್‌ ಪಾಸ್‌ ಸೆಂಟರ್‌ (ಪ್ರವೇಶ ಪತ್ರ ಕೇಂದ್ರ) ಮಂಗಳೂರಿನಲ್ಲಿ ಸ್ಥಾಪಿಸಬೇಕೆಂಬ ಹಲವಾರು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ. ಪರಿಣಾಮ, ಮಂಗಳೂರು ಸಹಿತ ಕರ್ನಾಟಕದ ಜನತೆ ಲಕ್ಷದ್ವೀಪಕ್ಕೆ ಪ್ರಯಾಣಿಸಬೇಕಾದರೆ ಕೇರಳದ ಕೊಚ್ಚಿಯನ್ನೇ ಈಗಲೂ ಅವಲಂಬಿಸಬೇಕಾಗಿದೆ.

Advertisement

ಲಕ್ಷದ್ವೀಪ ನಿರ್ಬಂಧಿತ ಪ್ರದೇಶವಾಗಿರುವುದರಿಂದ ಹೊರಗಿನ ಪ್ರದೇಶದವರಿಗೆ ಅಲ್ಲಿಗೆ ಹೋಗಲು ಪ್ರವೇಶ ಅನುಮತಿ ಪತ್ರ ಕಡ್ಡಾಯ. ಕೊಚ್ಚಿಯಲ್ಲಿ ಲಕ್ಷದ್ವೀಪ ಸೆಕ್ರಟರಿಯೇಟ್‌ನ ಪ್ರವೇಶ ಪರವಾನಿಗೆ ನೀಡುವ ಕೇಂದ್ರವಿದೆ. ಕರ್ನಾಟಕದ ಜನತೆ ಪ್ರಸ್ತುತ ಈ ಪರವಾನಿಗೆ ಪಡೆಯಲು ಕೊಚ್ಚಿಯ ಕಚೇರಿಯನ್ನು ಸಂಪರ್ಕಿಸಬೇಕಾಗುತ್ತದೆ. ಆದರೆ ಲಕ್ಷದ್ವೀಪದೊಂದಿಗೆ ಶತಮಾನಗಳಿಂದ ವಾಣಿಜ್ಯವೂ ಸಹಿತ ನಿಕಟ ಸಂಬಂಧವನ್ನು ಹೊಂದಿರುವ ಮಂಗಳೂರಿನಲ್ಲಿ ಪರವಾನಿಗೆ ನೀಡುವ ವ್ಯವಸ್ಥೆ ಇನ್ನೂ ಅನುಷ್ಠಾನಗೊಳ್ಳದಿರುವುದು ವಿಪರ್ಯಾಸ.

ಹಳೆ ಬಂದರಿನಿಂದ ಪ್ರಯಾಣಿಕರ ನೌಕೆ
ನಗರದ ಹಳೆ ವಾಣಿಜ್ಯ ಬಂದರಿಗೆ ಲಕ್ಷದ್ವೀಪದಿಂದ ತಿಂಗಳಿಗೆ ಕನಿಷ್ಠ 4 ಪ್ರಯಾಣಿಕರ ನೌಕೆಗಳು ಆಗಮಿಸುತ್ತಿವೆ. ಇದಲ್ಲದೆ ಲಕ್ಷದ್ವೀಪಕ್ಕೆ ಕಟ್ಟಡ ಸಾಮಗ್ರಿಗಳು, ಸಂಬಾರು ಪದಾರ್ಥ ತುಂಬಿಸಿಕೊಂಡು ಹೋಗುವ ಸರಕು ನೌಕೆಗಳು ಸಂಚರಿಸುತ್ತಿವೆ. ಈ ನೌಕೆಗಳಲ್ಲಿ ಮಂಗಳೂರಿನಿಂದ ಪ್ರಯಾಣಿಕರು ತೆರಳಬೇಕಾದರೆ ಪ್ರವೇಶ ಪತ್ರ ಹೊಂದುವುದು ಕಡ್ಡಾಯ.

ಆಸಕ್ತಿ ತೋರದ ಲಕ್ಷದ್ವೀಪ ಆಡಳಿತ
ಲಕ್ಷದೀಪ ಆಡಳಿತದ ಒಂದು ಅಂಗಸಂಸ್ಥೆಯಾದ ಸೊಸೈಟಿ ಫಾರ್‌ ಪ್ರಮೋಶನ್‌ ಆಫ್‌ ನೇಚರ್‌ ಟೂರಿಸ್ಟ್‌ ಆ್ಯಂಡ್‌ ನ್ಪೋರ್ಟ್ಸ್ನ ಆಡಳಿತಾಧಿಕಾರಿ ಯಾಗಿ ( ನ್ಪೋರ್ಟ್ಸ್ ) ಕರ್ನಾಟಕದವರೇ ಆದ ಐಎಎಸ್‌ ಅಧಿಕಾರಿ ರಾಜೇಂದ್ರ ಪ್ರಸಾದ್‌ ಅವರು ಇದ್ದ ಸಂದರ್ಭ ಮಂಗಳೂರಿನಲ್ಲಿ ಬೋರ್ಡಿಂಗ್‌ ಪಾಸ್‌ ಸೆಂಟರ್‌ ಸ್ಥಾಪನೆ ಬಗ್ಗೆ ಒಂದಷ್ಟು ಪ್ರಯತ್ನಗಳು ನಡೆದಿದ್ದರೂ ಅವರು ವರ್ಗಾವಣೆಯಾದ ಬಳಿಕ ಯಾವುದೇ ಪ್ರಗತಿಯಾಗಿಲ್ಲ. ಮಂಗಳೂರು ಹಳೆ ವಾಣಿಜ್ಯ ಬಂದರಿನಲ್ಲಿ ಲಕ್ಷದ್ವೀಪಕ್ಕೆ ಪ್ರವೇಶಪತ್ರ ನೀಡುವ ಕೇಂದ್ರವನ್ನು ಸ್ಥಾಪಿಸಲು ಜಾಗ ನೀಡಲು ಬಂದರು ಸಿದ್ಧವಿರುವುದಾಗಿ ಲಕ್ಷದ್ವೀಪ ಆಡಳಿತಕ್ಕೆ ಈಗಾಗಲೇ ತಿಳಿಸಲಾಗಿದೆ. ಅಲ್ಲಿಯ ಆಡಳಿ ತದ ಜತೆ ಈ ಬಗ್ಗೆ ಒಂದೆರಡು ಬಾರಿ ಮಾತುಕತೆಯೂ ನಡೆಸಲಾಗಿದೆ. ಆದರೆ ಹೆಚ್ಚಿನ ಪೂರಕ ಸ್ಪಂದನೆ ವ್ಯಕ್ತವಾಗಿಲ್ಲ. ಕೇಂದ್ರ ಸ್ಥಾಪನೆಗೆ ಬೇಕಾದ ಜಾಗವನ್ನು ಒದಗಿಸುವುದು ಬಿಟ್ಟರೆ ಉಳಿದಂತೆ ಬಂದರು ಇಲಾಖೆ ಪಾತ್ರ ಇದರಲ್ಲಿ ಏನೂ ಇಲ್ಲ ಎಂದು ಎಂದು ಮಂಗಳೂರಿನ ಹಳೆ ವಾಣಿಜ್ಯ ಬಂದರು ಅಧಿಕಾರಿಗಳು ಹೇಳುತ್ತಾರೆ.

ಪ್ರಕೃತಿ ಸೊಬಗನ್ನು ಸವಿಯುವ ಅಪೂರ್ವ ತಾಣ
ಕರಾವಳಿ ಕರ್ನಾಟಕ, ಸುತ್ತಮುತ್ತಲ ಜಿಲ್ಲೆಗಳ ಜನರಿಗೆ ಕಡಿಮೆ ಖರ್ಚಿನಲ್ಲಿ ಸಾಗರ ಪಯಣನೊಂದಿಗೆ ಪ್ರಕೃತಿ ಸೊಬಗನ್ನು ಸವಿಯುವ ಅಪೂರ್ವ ತಾಣ ಲಕ್ಷದ್ವೀಪ. ಮಂಗಳೂರಿನಿಂದ ಸುಮಾರು 365 ಕಿ.ಮೀ. (277 ಮೈಲು ) ದೂರದಲ್ಲಿ ಪ್ರಾರಂಭವಾಗುತ್ತವೆ ಲಕ್ಷ ದ್ವೀಪ ಸಮೂಹ. ಕವರೆಟ್ಟಿ, ಅಗಾಟ್ಟಿ , ಕಲ್ಪೆನಿ, ಮಿನಿಕ್ವಾಯ್‌, ಅಮಿನಿ, ಚತ್ತಲತ್‌, ಕಿಲ್ತಾನ್‌ ಹಾಗೂ ಬಿತ್ತಾ, ಅಂದ್ರೋತ್‌, ಕಡಮಟ್ಟ್ ಪ್ರಮುಖ ದ್ವೀಪಗಳು. ಕ್ರೂಜ್‌ನಲ್ಲಿ ಸುಮಾರು 16ರಿಂದ 18 ತಾಸುಗಳ ಪ್ರಯಾಣ. ಕಡಿಮೆ ಅವಧಿಯ ಪ್ರಯಾಣ ಪ್ರವಾಸಿಗರಿಗೆ ತಮ್ಮ ರಜಾ ಅವಧಿಯನ್ನು ಹೆಚ್ಚು ಬಳಕೆ ಮಾಡಲು ಅವಕಾಶ ಲಭಿಸುತ್ತದೆ.

Advertisement

ಮೂಲ ಸೌಕರ್ಯಗಳ ಅಭಿವೃದ್ಧಿ ಅಗತ್ಯ
ಲಕ್ಷದ್ವೀಪ-ಮಂಗಳೂರು ಮಧ್ಯೆ ಪ್ರಯಾಣಿಕರ ನೌಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಸುಸಜ್ಜಿತ ಪ್ರಯಾಣಿಕರ ಲಾಂಜ್‌, ಸುವ್ಯವಸ್ಥಿತ ಜೆಟ್ಟಿ ಸಹಿತ ಒಂದಷ್ಟು ಮೂಲಸಕರ್ಯಗಳ ಅಭಿವೃದ್ಧಿ ಅಗತ್ಯವಿದೆ. 65 ಕೋ.ರೂ. ವೆಚ್ಚದಲ್ಲಿ ಹಳೆ ಬಂದರಿನ ಉತ್ತರ ವಾರ್ಫ್‌ನ ಸುಸಜ್ಜಿತ ಜೆಟ್ಟಿ ನಿರ್ಮಾಣ ಯೋಜನೆ ಇನ್ನೂ ಅನುಷ್ಠಾನಗೊಂಡಿಲ್ಲ .

ಮಂಗಳೂರಿನಲ್ಲಿ ಅವಶ್ಯವಿದೆ
ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತಿಂಗಳಿಗೆ ಕನಿಷ್ಠ 4 ನೌಕೆಗಳು ತೆರಳುತ್ತಿವೆ. ಲಕ್ಷದ್ವೀಪಕ್ಕೆ ಪ್ರಯಾಣಿಕರು ತೆರಳಲು ಅಲ್ಲಿನ ಸೆಕ್ರೆಟರಿಯೇಟ್‌ನಿಂದ ಪ್ರವೇಶ ಪತ್ರ ಅಗತ್ಯವಿದ್ದು ಮಂಗಳೂರಿನಲ್ಲಿ ಇದನ್ನು ನೀಡುವ ವ್ಯವಸ್ಥೆ ಇಲ್ಲ. ಪ್ರಸ್ತುತ ಕೊಚ್ಚಿಯಿಂದ ಆನ್‌ಲೈನ್‌ ಮೂಲಕ ಪಡೆಯಬೇಕಾಗುತ್ತದೆ. ಮಂಗಳೂರಿನಲ್ಲಿ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ ಪ್ರಯತ್ನಗಳು ನಡೆದಿದ್ದರೂ ಇದಕ್ಕೆ ಪೂರಕ ದೊರಕಿಲ್ಲ ಎಂದು ಮಂಗಳೂರು ಹಳೆ ವಾಣಿಜ್ಯ ಬಂದರು ಸಹಾಯಕ ಅಧಿಕಾರಿ ತಿಳಿಸಿದ್ದಾರೆ.

– ಮಂಗಳೂರಿನಿಂದ 365 ಕಿ.ಮೀ. ದೂರದಲ್ಲಿದೆ ಲಕ್ಷ ದ್ವೀಪ ಸಮೂಹ.
– ಮಂಗಳೂರಿನಿಂದ ಕ್ರೂಜ್‌ನಲ್ಲಿ ಸುಮಾರು 16ರಿಂದ 18 ತಾಸುಗಳ ಪ್ರಯಾಣ.
– ಹಳೆ ವಾಣಿಜ್ಯ ಬಂದರಿನಲ್ಲಿ ಪ್ರವೇಶಪತ್ರ ಕೇಂದ್ರ ಸ್ಥಾಪಿಸಲು ಜಾಗ ನೀಡಲು ಅಧಿಕಾರಿಗಲು ಸಿದ್ಧ.
-ಸುಸಜ್ಜಿತ ಪ್ರಯಾಣಿಕರ ಲಾಂಜ್‌ ಅಗತ್ಯವಿದೆ.
– ಹಳೆ ಬಂದರಿನ ಉತ್ತರ ವಾರ್ಫ್‌ನ ಸುಸಜ್ಜಿತ ಜೆಟ್ಟಿ ನಿರ್ಮಾಣ ಯೋಜನೆ ಅನುಷ್ಠಾನವಾಗಿಲ್ಲ.

ಸಚಿವರ ಜತೆ ಚರ್ಚೆ
ಮಂಗಳೂರು ಹಳೆ ವಾಣಿಜ್ಯ ಬಂದರು ಮೂಲಕ ಲಕ್ಷದ್ವೀಪಕ್ಕೆ ತೆರಳುವ ಮಂದಿಗೆ ಮಂಗಳೂರಿನಲ್ಲೇ ಬೋರ್ಡಿಂಗ್‌ ಪಾಸ್‌ ದೊರೆಯವ ನಿಟ್ಟಿನಲ್ಲಿ ಬೋರ್ಡಿಂಗ್‌ ಪಾಸ್‌ ಕೇಂದ್ರ ಅಗತ್ಯವಿದೆ. ಪ್ರವಾಸೋದ್ಯಮ ಅಭಿವೃದ್ದಿಗೂ ಇದು ಪೂರಕವಾಗಿದೆ. ಇದನ್ನು ಕೇಂದ್ರ ಸಚಿವರ ಗಮನಕ್ಕೆ ತಂದು ಮಂಗಳೂರಿನಲ್ಲಿ ಕೇಂದ್ರ ಸ್ಥಾಪನೆಗೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುವುದು.
 - ನಳಿನ್‌ ಕುಮಾರ್‌ ಕಟೀಲು, ದ.ಕ. ಸಂಸದ

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next